ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಮೇ 24ರಂದು ತನ್ನ ನಾಲ್ಕನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ. ನಾಲ್ಕನೇ ತ್ರೈಮಾಸಿಕದ ವರದಿ ಪ್ರಕಾರ ಎಲ್‌ಐಸಿಯ ನಿವ್ವಳ ಲಾಭವು ಶೇಕಡ 466ರಷ್ಟು ಏರಿಕೆಯಾಗಿದ್ದು, 13,428 ಕೋಟಿ ರೂಪಾಯಿಗೆ ಜಿಗಿತ ಕಂಡಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ನಿವ್ವಳ ಲಾಭವು 2371 ಕೋಟಿ ರೂಪಾಯಿ ಆಗಿದೆ. ಮಾರ್ಚ್ 31, 2023ಕ್ಕೆ ಕೊನೆಯಾದ ತ್ರೈಮಾಸಿಕಕ್ಕೆ ಪ್ರತಿ ಷೇರಿಗೆ 3 ರೂಪಾಯಿ ಡಿವಿಡೆಂಡ್ ಅನ್ನು ಎಲ್‌ಐಸಿ ನಿರ್ದೇಶಕರ ಮಂಡಳಿಯು ಸಲಹೆ ನೀಡಿದೆ. ಎಲ್‌ಐಸಿಯ ನಾಲ್ಕನೇ ತ್ರೈಮಾಸಿಕದ ವರದಿ ಪ್ರಕಟವಾಗುವುದಕ್ಕೂ ಮುನ್ನ ಬಿಎಸ್‌ಇಯಲ್ಲಿ ಎಲ್‌ಐಸಿ ಸ್ಟಾಕ್ ವಹಿವಾಟಿನ ಮಧ್ಯದಲ್ಲಿ ಶೇಕಡ 0.61ರಷ್ಟು ಏರಿಕೆಯಾಗಿದೆ. ವಹಿವಾಟಿನ ಅಂತ್ಯದಲ್ಲಿ 593.55 ರೂಪಾಯಿಗೆ ತಲುಪಿದೆ. ಇಲ್ಲಿದೆ ವಿವರ...

ಡಿವಿಡೆಂಡ್ ಘೋಷಿಸಿದ ಎಲ್‌ಐಸಿ: ಬಿಎಸ್‌ಇ ಫೈಲಿಂಗ್ ಪ್ರಕಾರ "ಎಲ್‌ಐಸಿಯ ನಿರ್ದೇಶಕರ ಮಂಡಳಿಯು ಮಾರ್ಚ್ 31, 2023 ಕ್ಕೆ ಕೊನೆಗೊಂಡ ವರ್ಷಕ್ಕೆ ಪ್ರತಿ ಇಕ್ವಿಟಿ ಷೇರಿಗೆ ರೂಪಾಯಿ 10 ಮುಖಬೆಲೆಯೊಂದಿಗೆ ರೂಪಾಯಿ 3 ರ ಅಂತಿಮ ಲಾಭಾಂಶವನ್ನು ಶಿಫಾರಸು ಮಾಡಿದೆ. ಇದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರ ಘೋಷಣೆಗೆ ಒಳಪಟ್ಟಿರುತ್ತದೆ."
ಎಲ್‌ಐಸಿ ನಾಲ್ಕನೇ ತ್ರೈಮಾಸಿಕ: ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮದ ನಿವ್ವಳ ಪ್ರೀಮಿಯಂ ಆದಾಯವು ಮಾರ್ಚ್ ತ್ರೈಮಾಸಿಕದಲ್ಲಿ ಸುಮಾರು ಶೇಕಡ 8ರಷ್ಟು ಕುಸಿತ ಕಂಡು, 1.31 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ನಿವ್ವಳ ಪ್ರೀಮಿಯಂ ಆದಾಯವು 1.43 ಲಕ್ಷ ಕೋಟಿ ರೂಪಾಯಿ ಆಗಿತ್ತು.
ಎಲ್‌ಐಸಿ ಸ್ಟಾಕ್ ರಿಟರ್ನ್: ಈ ಹಿಂದಿನ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರು ಬೆಲೆ ಪ್ರತಿ ಷೇರಿಗೆ 593.55 ರೂಪಾಯಿ ಆಗಿದೆ. 52 ವಾರಗಳ ಗರಿಷ್ಠ ಷೇರು ಬೆಲೆ ಪ್ರತಿ ಷೇರಿಗೆ 841.00 ರೂಪಾಯಿ ಆಗಿದ್ದರೆ, 52 ವಾರಗಳ ಕನಿಷ್ಠ ಷೇರು ಬೆಲೆ ಪ್ರತಿ ಷೇರಿಗೆ 530.20 ರೂಪಾಯಿ ಆಗಿದೆ. ಸಂಸ್ಥೆಯ ಮಾರುಕಟ್ಟೆ ಮೌಲ್ಯವು 3,75,420.24 ಕೋಟಿ ರೂಪಾಯಿ ಆಗಿದೆ.
ಕಳೆದ ಎರಡು ವಾರಗಳಲ್ಲಿ ಎಲ್‌ಐಸಿ ಷೇರು ಸುಮಾರು ಶೇಕಡ 6ರಷ್ಟು ರಿಟರ್ನ್ ನೀಡಿದೆ. ಇನ್ನು ಕಳೆದ ಒಂದು ತಿಂಗಳಿನಲ್ಲಿ ಎಲ್‌ಐಸಿ ಷೇರು ಸುಮಾರು ಶೇಕಡ 8ರಷ್ಟು ರಿಟರ್ನ್ ಕಂಡಿದೆ. ಇನ್ನು ಕಳೆದ ಮೂರು ತಿಂಗಳಿನಲ್ಲಿ ಎಲ್‌ಐಸಿ ಷೇರು ಸುಮಾರು ಶೇಕಡ 2ರಷ್ಟು ರಿಟರ್ನ್ ಕಂಡಿದೆ. ಆದರೆ ಕಳೆದು ಆರು ತಿಂಗಳಿನಲ್ಲಿ ಎಲ್‌ಐಸಿ ಷೇರು ಸುಮಾರು ಶೇಕಡ 4ರಷ್ಟು ಕುಸಿತ ಕಂಡಿದ್ದು, ಒಂದು ವರ್ಷದ ಅವಧಿಯಲ್ಲಿ ಶೇಕಡ 27ರಷ್ಟು ಕುಸಿದಿದೆ.
ನಾಲ್ಕನೇ ತ್ರೈಮಾಸಿಕ ವರದಿ: ಇಂದು ಎಲ್‌ಐಸಿ ಸ್ಟಾಕ್ ಹೇಗಿದೆ?
ಬುಧವಾರ ಸಂಜೆಯ ವೇಳೆಗೆ ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟ ಮಾಡಲಾಗಿದೆ. ಉತ್ತಮ ವರದಿಯ ಬೆನ್ನಲ್ಲೇ ಗುರುವಾರ ವಹಿವಾಟಿನ ಆರಂಭದಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಎಲ್‌ಐಸಿ ಷೇರುಗಳು ಶೇಕಡ 3ರಷ್ಟು ಏರಿಕೆಯನ್ನು ಕಂಡಿದೆ.
ಇನ್ನು ಈ ಸಮಯಕ್ಕೆ ಬಿಎಸ್‌ಇಯಲ್ಲಿ ಎಲ್‌ಐಸಿ ಷೇರು ಸುಮಾರು ಶೇಕಡ 2.10ರಷ್ಟು ಏರಿಕೆಯನ್ನು ಕಂಡು 606.50 ರೂಪಾಯಿಗೆ ತಲುಪಿದೆ. ಇನ್ನು ಇದೇ ಸಮಯದಲ್ಲಿ ಎನ್‌ಎಸ್‌ಇಯಲ್ಲಿ ಎಲ್‌ಐಸಿ ಸ್ಟಾಕ್ ಶೇಕಡ 2.05ರಷ್ಟು ಏರಿಕೆಯಾಗಿ 606.25 ರೂಪಾಯಿಗೆ ತಲುಪಿದೆ.


Click it and Unblock the Notifications