ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ ಗಳಿಗೆ ಮಂಗಳವಾರ ಸೂಚನೆ ನೀಡಿ, 2021ನೇ ಇಸವಿ ಮಾರ್ಚ್ 31ರೊಳಗೆ ಎಲ್ಲ ಖಾತೆಗಳನ್ನು ಆಯಾ ಗ್ರಾಹಕರ ಆಧಾರ್ ಸಂಖ್ಯೆಗೆ ಜೋಡಣೆ ಮಾಡಬೇಕು ಎಂದಿದ್ದಾರೆ.
"ಭಾರತೀಯ ಬ್ಯಾಂಕ್ ಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಡಿಜಿಟಲ್ ವ್ಯವಹಾರಗಳ ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ಬ್ಯಾಂಕ್ ಗಳ ಬಗ್ಗೆ ಬಹಳ ಸಂತೋಷವಾಗಿದೆ. ಈಗ ರುಪೇ ಕಾರ್ಡ್ ಗಳನ್ನು ಹೆಚ್ಚು ಪ್ರಚುರ ಪಡಿಸಿ. ಈಗ ಆ ಕಾರ್ಡ್ ಜಾಗತಿಕ ಮಟ್ಟದ ಜಾಲವನ್ನು ಹೊಂದಿದೆ," ಎಂದು ಹೇಳಿದರು.
ಡಿಜಿಟಲ್ ವ್ಯವಹಾರ ಉತ್ತೇಜಿಸಿ
ಈಚಿನ ವರ್ಷಗಳಲ್ಲಿ ಭಾರತದಲ್ಲಿ ಆರ್ಥಿಕವಾಗಿ ಒಳಗೊಳ್ಳುವಿಕೆ ಹೊಸ ಬೆಳವಣಿಗೆಯನ್ನು ದಾಖಲಿಸಿದೆ. ಅದು ಇನ್ನೂ ಮುಗಿದಿಲ್ಲ. ಅದಕ್ಕೆ ಇನ್ನಷ್ಟು ಉತ್ತೇಜನ ಬೇಕಿದೆ. ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಿ, ನಾನ್ ಡಿಜಿಟಲ್ ವ್ಯವಹಾರ ಪ್ರೋತ್ಸಾಹ ನೀಡಬಾರದು ಎಂದು ಅವರು ಹೇಳಿದ್ದಾರೆ. ಕೇಂದ್ರ ಸಚಿವೆ ಮುಂದುವರಿದು, ಡಿಸೆಂಬರ್ ನೊಳಗೆ ಖಾತೆಗಳ ಜತೆ ಆಧಾರ್ ಜೋಡಣೆ ಆಗಿರಬೇಕು. ಒಂದು ವೇಳೆ ಆಗದಿದ್ದಲ್ಲಿ 2021ನೇ ಇಸವಿ ಮಾರ್ಚ್ 31ರೊಳಗೆ ಮಾಡಬೇಕು ಎಂದಿದ್ದಾರೆ.
ಹೆಚ್ಚೆಚ್ಚು ದೊಡ್ಡ ಬ್ಯಾಂಕ್ ಗಳು
ಹೆಚ್ಚೆಚ್ಚು ದೊಡ್ಡ ಬ್ಯಾಂಕ್ ಗಳ ರಚನೆಯಾದಲ್ಲಿ ದೊಡ್ಡ ಯೋಜನೆಗಳಿಗೆ ಹಣಕಾಸಿನ ಸಾಲ ಒದಗಿಸಲು ಸಾಧ್ಯ. ದೊಡ್ಡ ಬ್ಯಾಂಕ್ ಗಳು ಹಲವು ಒಗ್ಗೂಡುತ್ತಿವೆ. ಹಾಗೆ ಒಗ್ಗೂಡುವ ಬ್ಯಾಂಕ್ ಗಳು ಎಲ್ಲವೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತೆ ದೊಡ್ಡದಾಗಲಿ ಎಂಬುದು ನಮ್ಮ ಆಶಯ ಎಂದು ಅವರು ಹೇಳಿದ್ದಾರೆ.
ಸಣ್ಣ ಹಣಕಾಸು ಸಂಸ್ಥೆಗಳು ಸಹ ಮುಖ್ಯ
ಸಣ್ಣ ಹಣಕಾಸು ಸಂಸ್ಥೆಗಳು, ಸಣ್ಣ ಬ್ಯಾಂಕ್ ಗಳನ್ನು, ಎನ್ ಬಿಎಫ್ ಸಿಗಳನ್ನು ದೊಡ್ಡ ಬ್ಯಾಂಕ್ ಗಳ ರೀತಿಯಲ್ಲೇ ಬಯದುತ್ತೇವೆ. ಏಕೆಂದರೆ ಅವುಗಳು ತಲುಪಬಹುದು. ಆರ್ ಬಿಐನಿಂದ ಒಟ್ಟಾಗಿ ಕೆಲಸ ಮಾಡುವುದಕ್ಕೆ ನಿಯಮ ರೂಪಿಸಿ ಆಗಿದೆ ಎಂದು ತಿಳಿದು ಸಂತೋಷವಾಗುತ್ತದೆ ಎಂದು ನಿರ್ಮಲಾ ತಿಳಿಸಿದ್ದಾರೆ.
ಜಾಗತಿಕವಾಗಿ ಟಾಪ್ ನೂರರಲ್ಲಿ ಒಂದೇ ಭಾರತೀಯ ಬ್ಯಾಂಕ್
ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಟಾಪ್ ನೂರರಲ್ಲಿ ಗುರುತಿಸಿಕೊಂಡಿರುವ ಭಾರತದ ಏಕೈಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಆದರೆ ಚೀನಾದ ಹದಿನೆಂಟು ಬ್ಯಾಂಕ್ ಗಳಿವೆ ಎಂದರು.


Click it and Unblock the Notifications