ಮದ್ಯದ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಗೋವಾದ ನೆನೆಪು ಬಂದೇ ಬರುತ್ತದೆ. ಕಡಲತೀರಗಳಿಗೆ ಹೆಸರುವಾಸಿಯಾದ ಗೋವಾ ಎಂದಿಗೂ ಕೂಡಾ ಮದ್ಯಪ್ರಿಯರಿಗೆ ಅತ್ಯಂತ ಬಜೆಟ್ ಸ್ನೇಹಿ ತಾಣವಾಗಿದೆ. ಅತೀ ಕಡಿಮೆ ದರದಲ್ಲಿ ಮದ್ಯ ಲಭ್ಯವಾಗುತ್ತದೆ. ಆದರೆ ದೇಶದಲ್ಲೇ ಮದ್ಯಕ್ಕೆ ಅತೀ ಹೆಚ್ಚು ದರ ಕರ್ನಾಟಕದಲ್ಲಿಯೇ ಎಂದರೆ ನೀವು ನಂಬುತ್ತೀರಾ?
ಹೌದು!. ಮದ್ಯದ ಬೆಲೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯ ಕಾಣಿಸಿಕೊಂಡಿದೆ. ಗೋವಾದಲ್ಲಿ ಭಾರತದಲ್ಲಿಯೇ ಅತಿ ಕಡಿಮೆ ಮದ್ಯದ ತೆರಿಗೆ ಇರುವ ಕಾರಣದಿಂದಾಗಿ ಮದ್ಯದ ದರವೂ ಕೂಡಾ ಅತೀ ಕಡಿಮೆಯಾಗಿದೆ. ಆದರೆ ಕರ್ನಾಟಕದಲ್ಲಿ ಮದ್ಯ ದುಬಾರಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾದ ಸಮೀಕ್ಷೆಯ ವರದಿಯ ಪ್ರಕಾರ, ಗೋವಾದಲ್ಲಿ 100 ರೂಪಾಯಿ ಬೆಲೆಯ ಆಲ್ಕೋಹಾಲ್‌ಗೆ ದೆಹಲಿಯಲ್ಲಿ 134 ರೂಪಾಯಿ ಇದೆ. ಆದರೆ ಕರ್ನಾಟಕದಲ್ಲಿ ಬರೋಬ್ಬರಿ 513 ರೂಪಾಯಿಯಷ್ಟಿದೆ. ದೇಶದ ಮದ್ಯದ ಮಾರುಕಟ್ಟೆಯಲ್ಲೇ ಅತೀ ಅಧಿಕ ಸುಂಕವನ್ನು ಕರ್ನಾಟಕದಲ್ಲಿ ವಿಧಿಸಲಾಗುತ್ತದೆ.
ಇಂಟರ್‌ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಸಮೀಕ್ಷೆಯ ಆಧಾರದ ಮೇಲೆ ಈ ವರದಿಯಾಗಿದೆ. ಗೋವಾದಲ್ಲಿ ತೆರಿಗೆಯು ಗರಿಷ್ಠ ರಿಟೇಲ್ ಬೆಲೆಯ ಶೇಕಡ 49 ರಷ್ಟಿದೆ. ಆದರೆ ಕರ್ನಾಟಕದಲ್ಲಿ ತೆರಿಗೆಯು ರಿಟೇಲ್ ದರದ ಶೇಕಡ 83 ರಷ್ಟಿದೆ. ಮಹಾರಾಷ್ಟ್ರದಲ್ಲಿ ಶೇಕಡ 71 ರಷ್ಟಿದೆ.
ವಿವಿಧ ಸ್ಥಳೀಯ ತೆರಿಗೆಗಳ ಆಧಾರದಲ್ಲಿ ಗಮನಾರ್ಹವಾಗಿ ಬೆಲೆಯು ವ್ಯತ್ಯಾಸವಾಗುತ್ತದೆ. ದೆಹಲಿ ಮತ್ತು ಮುಂಬೈ ನಡುವಿನ ಜನಪ್ರಿಯ ಸ್ಕಾಚ್ ಬ್ರ್ಯಾಂಡ್‌ಗಳಿಗೆ ತೆರಿಗೆಯು ಶೇಕಡ 20 ರಷ್ಟು ಮೀರಿದೆ. ಉದಾಹರಣೆಗೆ, ದೆಹಲಿಯಲ್ಲಿ ಬ್ಲ್ಯಾಕ್ ಲೇಬಲ್‌ನ ಬಾಟಲಿಯ ದರವು ಸುಮಾರು 3,100 ರೂಪಾಯಿಗಳಾಗಿದೆ. ಆದರೆ ಅದೇ ಬ್ರ್ಯಾಂಡ್‌ಗೆ ಮುಂಬೈನಲ್ಲಿ ಅಂದಾಜು 4,000 ರೂಪಾಯಿ ಆಗಿದೆ.
ತೆರಿಗೆ ದರಗಳಲ್ಲಿನ ಈ ಅಸಮಾನತೆಗಳು ರಾಜ್ಯದ ಗಡಿಗಳಲ್ಲಿ ಅಕ್ರಮವಾಗಿ ವ್ಯಾಪಾರ ನಡೆಯಲು ಕಾರಣ ಎಂಬ ವಾದವೂ ಕೂಡಾ ಇದೆ. ಆಲ್ಕೋಹಾಲ್ ಮತ್ತು ಪೆಟ್ರೋಲಿಯಂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ ವ್ಯಾಪ್ತಿಯಿಂದ ಹೊರಗಿದೆ.


Click it and Unblock the Notifications