ಮದ್ಯ ಮಾರಾಟದಿಂದ ಕರ್ನಾಟಕ ಸರ್ಕಾರದ (Karnataka Govt) ಬೊಕ್ಕಸಕ್ಕೆ ಸಾಕಷ್ಟು ಹಣ ತುಂಬುತ್ತದೆ. ಆದ್ರೆ ಇತ್ತೀಚೆಗೆ ಅಚ್ಚರಿಯ ವರದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಈ ವರ್ಷ ರಾಜ್ಯದಲ್ಲಿ ಮದ್ಯ ಮಾರಾಟ ಗಣನೀಯವಾಗಿ ಇಳಿಕೆಯಾಗಿದೆ. ಅದರಲ್ಲೂ ಬಿಯರ್ ಮಾರಾಟದಲ್ಲೂ (Beer Sale) ಭಾರೀ ಕುಸಿತ ಕಂಡಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಎಕ್ಸೈಸ್ ಡ್ಯೂಟಿ ಮತ್ತು ಲೈಸೆನ್ಸ್ ಫೀಸ್‌ಗಳಿಂದ ಸರ್ಕಾರ ಸಾಕಷ್ಟು ಲಾಭ ಗಳಿಸುತ್ತದೆ. ಆದರೆ ವ್ಯಾಪಾರವೇ ಆಗದಿದ್ದರೆ, ಸರ್ಕಾರಕ್ಕೂ ಆದಾಯ ಬರುವುದಿಲ್ಲ. ಹಾಗಿದ್ರೆ ಕರ್ನಾಟಕದ ಮದ್ಯ ಮಾರಾಟದ ಬಗ್ಗೆ ವರದಿ ಹೇಳುವುದೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಯರ್ ಮಾರಾಟದಲ್ಲಿ ಕುಸಿತ
ಅಬಕಾರಿ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, 2024ರಲ್ಲಿ 278.79 ಲಕ್ಷ ಬಿಯರ್ ಬಾಕ್ಸ್‌ಗಳು ಮಾರಾಟವಾಗಿತ್ತು. ಆದ್ರೆ 2025ರಲ್ಲಿ ಬರೀ 227.62 ಲಕ್ಷ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ 51.17 ಲಕ್ಷ ಬಾಕ್ಸ್‌ಗಳಷ್ಟು ಮಾರಾಟ ಇನ್ನೂ ಬಾಕಿ ಉಳಿದಿದೆ.
ಅದೇ ರೀತಿ ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ಎಲ್ಲಾ ಐಎಂಎಲ್ ಮದ್ಯದ ಮಾರಾಟದಲ್ಲೂ ಭಾರೀ ಇಳಿಕೆಯಾಗಿದೆ. 2024ರ ಏಪ್ರಿಲ್-ಅಕ್ಟೋಬರ್ ಸಮಯದಲ್ಲಿ 407.40 ಲಕ್ಷ ಬಾಕ್ಸ್‌ಗಳು ಮಾರಾಟವಾಗಿತ್ತು. ಆದ್ರೆ ಈ ಬಾರಿ 403.04 ಲಕ್ಷ ಬಾಕ್ಸ್‌ಗಳು ಸೇಲ್ ಆಗಿದೆ.
ಮದ್ಯ ಮಾರಾಟದಲ್ಲಿ ಇಳಿಕೆಯಾಗಲು ಕಾರಣಗಳೇನು?
2025ರಲ್ಲಂತೂ ಮದ್ಯ ಮಾರಾಟದಲ್ಲಿ ಭಾರೀ ಕುಸಿತವಾಗಿದೆ ಎಂದು ವರದಿಯಾಗಿದೆ. ಎಕ್ಸೈಸ್ ಇಲಾಖೆಯ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಿಂದ ಸೆಪ್ಟೆಂಬರ್ ವೇಳೆಗೆ ಇಂಡಿಯನ್ ಮೇಡ್ ಲಿಕ್ಕರ್ (IML) ಮಾರಾಟದಲ್ಲಿ 2.8% ಇಳಿಕೆಯಾಗಿದೆ. ಅದರಲ್ಲೂ ಬಿಯರ್ ಮಾರಾಟ 19.5% ಇಳಿಕೆಯಾಗಿದ್ದು ಮತ್ತಷ್ಟು ಅಚ್ಛರಿಯ ಸಂಗತಿ.
ಕಾರಣಗಳು:
ಎಕ್ಸೈಸ್ ಡ್ಯೂಟಿ ಏರಿಕೆ: ದೇಶದ ಒಳಗೆ ತಯಾರಾದ ಸರಕುಗಳ ಮೇಲೆ ಹಾಕುವ ತೆರಿಗೆಯನ್ನು ಎಕ್ಸೈಸ್ ಡ್ಯೂಟಿ ಎಂದು ಕರೆಯುತ್ತಾರೆ. 2025ನೇ ಮೇ ತಿಂಗಳಲ್ಲಿ IML ಮತ್ತು ಬಿಯರ್ ಮೇಲೆ ಎಕ್ಸೈಸ್ ಡ್ಯೂಟಿ (AED) ಹೆಚ್ಚಳ ಮಾಡಿದ್ದರಿಂದ, ಬೆಲೆ ಕೂಡಾ ಹೆಚ್ಚಾಯ್ತು. ಉದಾಹರಣೆಗೆ, ಒಂದು ಬಾಟಲ್ ಬಿಯರ್ ಬೆಲೆ 130 ರಿಂದ 160 ರೂ. ಏರಿಕೆ ಕಂಡಿತು. ಈ ಮೂಲಕ ಕರ್ನಾಟಕ ಮದ್ಯದ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ರಾಜ್ಯವಾಗಿ ಗುರುತಿಸಿಕೊಂಡಿತು.
ಹವಾಮಾನ ಬದಲಾವಣೆ: ಈ ವರ್ಷದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರಾಜ್ಯದಲ್ಲಿ ಹಲವಾರು ಸಮಸ್ಯೆಗಳು ಎದುರಾಗಿದೆ.
ಹವಾಮಾನ ಮತ್ತು ಇತರ ಅಂಶಗಳು: ಉತ್ತರ ಕರ್ನಾಟಕದಲ್ಲಿ ಪ್ರವಾಹಗಳು, ಮಳೆಯು ಮತ್ತು ತಂಪಾದ ಗ್ರೀಷ್ಮಕಾಲವು ಮಾರಾಟವನ್ನು ಕಡಿಮೆ ಮಾಡಿದೆ.
ಗ್ರಾಹಕರ ಧೋರಣೆಯೂ ಕಾರಣವಾಗಿದೆ. ಅಂದರೆ ಹೆಚ್ಚಿನವರು ಬೆಲೆ ಏರಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಶುರುವಾಯ್ತು ಟೆನ್ಷನ್
ಮದ್ಯ ಮಾರಾಟವು ಕರ್ನಾಟಕದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. 2025ರಲ್ಲಿ ರಾಜ್ಯದಲ್ಲಿ ತೆರಿಗೆ ಆದಾಯ 20.3% ಎಕ್ಸೈಸ್ ಡ್ಯೂಟಿಯಿಂದಲೇ ಬಂದಿದೆ. ಆದರೂ ಮಾರಾಟದಲ್ಲಾದ ಇಳಿಕೆ, ಸರ್ಕಾರಕ್ಕೆ ಟೆನ್ಷನ್ ಉಂಟುಮಾಡುವಂತೆ ಮಾಡಿದೆ. ಇನ್ನು ಮದ್ಯ ಮಾರಾಟದ ಆದಾಯ ಮತ್ತು ಸರ್ಕಾರ ಲಾಭದ ಬಗ್ಗೆ ನೋಡುವುದಾದ್ರೆ, ಮದ್ಯದ ತಯಾರಿಕೆ, ವಿತರಣೆ ಮತ್ತು ಮಾರಾಟದ ಮೇಲೆ ಸರ್ಕಾರ ವಿಧಿಸುವ ಅಡಿಷನಲ್ ಎಕ್ಸೈಸ್ ಡ್ಯೂಟಿ (AED) ಸರ್ಕಾರದ ಆದಾಯದ ಮೂಲವಾಗಿದೆ. ಇದರಿಂದಲೇ ರಾಜ್ಯಕ್ಕೆ ಅತೀ ಹೆಚ್ಚಿನ ಆದಾಯ ಸಂಗ್ರಹವಾಗುತ್ತಿದ್ದು, ಇದರಿಂದ ಸರ್ಕಾರ ಶಿಕ್ಷಣ, ಆರೋಗ್ಯ, ರಸ್ತೆ ದುರಸ್ತಿ, ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸಲಾಗುತ್ತಿದೆ.
ಲೈಸೆನ್ಸ್ ಫೀಸ್‌ಗಳು:
ಮದ್ಯ ಅಂಗಡಿಗಳು, ಬಾರ್‌ಗಳು, ಡಿಸ್ಟಿಲರಿಗಳಿಗೆ ಲೈಸೆನ್ಸ್ ನೀಡುವ ಮೂಲಕ ಸರ್ಕಾರ ಸುಮಾರು 1,000-2,000 ಕೋಟಿ ಆದಾಯ ಗಳಿಸುತ್ತದೆ.
ವ್ಯಾಪಾರ ತೆರಿಗೆ: ಮದ್ಯದ ಮೇಲೆ 20% ರಿಂದ 28% VAT (Valuable Added Tax) ಸೇರಿಸಿ ಆದಾಯ ಪಡೆಯಲಾಗುತ್ತದೆ. ಈ ಮೂಲಕ 5,000 ದಿಂದ 10,000 ಕೋಟಿ ಹೆಚ್ಚುವರಿ ಆದಾಯ ಬರುತ್ತದೆ ಎನ್ನಲಾಗಿದೆ.
ಮದ್ಯ ಮಾರಾಟವು ಕರ್ನಾಟಕಕ್ಕೆ ವಾರ್ಷಿಕವಾಗಿ ಅಂದಾಜು 35,000 ದಿಂದ 40,000 ಕೋಟಿ ಆದಾಯ ನೀಡುತ್ತದೆ. ಇದರಿಂದಲೇ ರಾಜ್ಯದ ಆರ್ಥಿಕತೆ ಬಲಗೊಳ್ಳಲು ಕಾರಣ. ಈ ಆದಾಯವನ್ನು ನಂತರ ಸರ್ಕಾರ ಕಲ್ಯಾಣ ಯೋಜನೆಗಳಿಗೆ ಬಳಸಿಕೊಳ್ಳುತ್ತದೆ.


Click it and Unblock the Notifications