ಕೊರೊನಾ ವೈರಾಣು ಹಬ್ಬುವುದನ್ನು ನಿಯಂತ್ರಿಸುವ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಲಾಕ್ ಡೌನ್ ಅವಧಿಯನ್ನು ಮೇ 3, 2020ರ ತನಕ ವಿಸ್ತರಿಸಿರುವ ಕಾರಣಕ್ಕೆ ಆರ್ಥಿಕತೆಗೆ 23,440 ಕೋಟಿ ಅಮೆರಿಕನ್ ಡಾಲರ್ ನಷ್ಟು ನಷ್ಟವಾಗಬಹುದು. ಅದರ ಪರಿಣಾಮವಾಗಿ 2020ರಲ್ಲಿ ಜಿಡಿಪಿ ನಿಂತುಹೋಗಲಿದೆ ಎಂದು ಬ್ರಿಟಿಷ್ ಬ್ರೋಕರೇಜ್ ಮಂಗಳವಾರ ತಿಳಿಸಿದೆ.
ಅಂದರೆ, ಭಾರತೀಯ ರುಪಾಯಿಗಳಲ್ಲಿ 17,81,440 ಕೋಟಿ ನಷ್ಟ ಆಗಬಹುದು. 2020ನೇ ಇಸವಿಯಲ್ಲಿ ಆರ್ಥಿಕ ಪ್ರಗತಿ ದರ ಶೂನ್ಯ ಆಗಲಿದೆ. ಇದನ್ನು ಆರ್ಥಿಕ ದೃಷ್ಟಿಕೋನದಿಂದ ಹೇಳಬಹುದು. ಇನ್ನು 2021ರಲ್ಲಿ 0.8 ಪರ್ಸೆಂಟ್ ಗೆ ಏರಿಕೆ ಆಗಲಿದೆ ಎಂದು ಬ್ರೋಕರೇಜ್ ಬಾರ್ಕ್ಲೇಸ್ ತಿಳಿಸಿದೆ.
ಆದರೆ, ಪರಿಸ್ಥಿತಿ ಗಮನಿಸಿ ಏಪ್ರಿಲ್ 20ರಿಂದ ಕೊರೊನಾ ಬಾಧೆ ಇಲ್ಲದ ಪ್ರದೇಶಗಳಲ್ಲಿ ಕೆಲವು ವಿನಾಯಿತಿ ನೀಡುವುದಾಗಿ ಪ್ರಧಾನಿ ಹೇಳಿದ್ದಾರೆ. ಈ ಹಿಂದೆ ಮೂರು ವಾರಗಳ ಲಾಕ್ ಡೌನ್ ನಿಂದ 120 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದೀಗ 234.4 ಬಿಲಿಯನ್ ಡಾಲರ್ ಗೆ ಏರಿಕೆ ಆಗಿದೆ.

2020ರಲ್ಲಿ ಪ್ರಗತಿ ದರ 2.5 ಪರ್ಸೆಂಟ್ ಆಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈಗ ಅದನ್ನು 0ಗೆ ಇಳಿಸಲಾಗಿದೆ. ಇನ್ನು 2021ರ ಆರ್ಥಿಕ ವರ್ಷಕ್ಕೆ 3.5 ಪರ್ಸೆಂಟ್ ಪ್ರಗತಿ ಆಗಬಹುದು ಎಂಬ ಅಂದಾಜು ಮಾಡಲಾಗಿತ್ತು. ಅದನ್ನು ಈಗ 0.8 ಪರ್ಸೆಂಟ್ ಗೆ ಇಳಿಸಲಾಗಿದೆ. ಲಾಕ್ ಡೌನ್ ಅವಧಿ ವಿಸ್ತರಣೆ ಮಾಡಿರುವುದರಿಂದ ನಾವಂದುಕೊಂಡಿದ್ದಕ್ಕಿಂತ ಆರ್ಥಿಕ ಪರಿಣಾಮ ಇನ್ನಷ್ಟು ತೀವ್ರವಾಗಿ ಇರಲಿದೆ ಎಂದು ಬಾರ್ಕ್ಲೇಸ್ ತಿಳಿಸಿದೆ.
ಮುಖ್ಯವಾಗಿ ಗಣಿಗಾರಿಕೆ, ಕೃಷಿ, ಉತ್ಪಾದನೆ ವಲಯಗಳ ಮೇಲೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಹೇಳಿದ್ದು, ಜೂನ್ ಆರಂಭದ ಹೊತ್ತಿಗೆ ಈ ಲಾಕ್ ಡೌನ್ ಅಂತ್ಯವಾಗಬಹುದು ಎಂಬ ಅಂದಾಜು ಮಾಡಲಾಗಿದೆ. ಇನ್ನು ಸ್ಥಳೀಯವಾಗಿಕೊರೊನಾ ಪ್ರಮಾಣ ಕಾಣಿಸಿಕೊಳ್ಳುವುದು ಹೆಚ್ಚಾದಲ್ಲಿ ಲಾಕ್ ಡೌನ್ ಅನಿವಾರ್ಯ ಆಗುತ್ತದೆ. ಆಗ ಆರ್ಥಿಕತೆ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆಯಾಗಿ, ಕುಸಿತ ಮುಂದುವರಿಯಲಿದೆ ಎಂದು ಅಭಿಪ್ರಾಯಪಡಲಾಗಿದೆ.


Click it and Unblock the Notifications