ಮೂರು ಬಾರಿ ಲಾಕ್‌ಡೌನ್ ವಿಧಿಸಿದರು ಕೊರೊನಾವೈರಸ್ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡುವ ಸಾಧ್ಯತೆಗಳಿವೆ. ಆದರೂ ಕೂಡ ನಾಲ್ಕನೇ ಲಾಕ್‌ಡೌನ್ ಈ ಹಿಂದಿನ ಮೂರು ಲಾಕ್‌ಡೌನ್‌ಗಿಂತ ಸಡಿಲ ಹಾಗೂ ವಿಭಿನ್ನವಾಗಿರಲಿದೆ ಎಂದೇ ಊಹಿಸಲಾಗುತ್ತಿದೆ.
ಕೊರೊನಾವೈರಸ್ ಲಾಕ್‌ಡೌನ್ 4.0 ಅನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತಾಗಿ ಗೃಹ ಸಚಿವಾಲಯದಿಂದ ಮಾತ್ರ ಮಾರ್ಗಸೂಚಿಗಳನ್ನು ನೀಡಲಾಗುತ್ತದೆ. ಹೀಗಾಗಿ ಲಾಕ್‌ಡೌನ್ 4.0 ಹೇಗಿರಬಹುದು? ಎಂಬುದು ಸದ್ಯ ಕುತೂಹಲಕ್ಕೆ ಎಡೆಮಾಡಿದೆ.
ಲಾಕ್‌ಡೌನ್ 4.0 ವಿಭಿನ್ನವಾಗಿರುತ್ತದೆ!
ವಿಶ್ಲೇಷಕರ ಪ್ರಕಾರ ಲಾಕ್‌ಡೌನ್ 4.0 ವಿಭಿನ್ನವಾಗಿರುತ್ತದೆ. ಈಗಾಗಲೇ ಜಾರಿಯಲ್ಲಿರುವ ಲಾಕ್‌ಡೌನ್ 3.0 ಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಹೊಸ ಲಾಕ್‌ಡೌನ್ ಆರ್ಥಿಕ ಚಕ್ರದ ಪುನರುಜ್ಜೀವನಕ್ಕೆ ಒತ್ತು ನೀಡುತ್ತದೆ. ಅದೇ ಸಮಯದಲ್ಲಿ ನಾಗರೀಕರು ಮೂಲಭೂತ ನಿಯಮಗಳನ್ನು ಅನುಸರಿಸುವ ಮೂಲಕ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕಾಗುತ್ತದೆ.
ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ವಿನಾಯಿತಿ ನೀಡಬಹುದು. ಹಸಿರು ವಲಯದಲ್ಲಿನ ಸಾರಿಗೆ ಮತ್ತು ಕೈಗಾರಿಕೆಗಳಿಗೆ ವಿನಾಯಿತಿ ಸಿಗಬಹುದು. ಹಸಿರು ವಲಯ ಜಿಲ್ಲೆಗಳ ಬಸ್ ಟ್ಯಾಕ್ಸಿಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿರ್ವಹಿಸಲು ಅನುಮತಿ ಅಥವಾ ವಿನಾಯಿತಿ ನೀಡಬಹುದು.
ಯಾವೆಲ್ಲಾ ರಿಯಾಯಿತಿ ಸಿಗಬಹುದು?
ಹಸಿರು ವಲಯದಲ್ಲಿರುವ ಪ್ರದೇಶಗಳಲ್ಲಿ ಕೈಗಾರಿಕೆ, ಕಾರ್ಖಾನೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸಲು ಅವಕಾಶ ನೀಡುವ ಸಾಧ್ಯತೆ ಇದೆ. ಆದಾಗ್ಯೂ ಕಾರ್ಮಿಕರು ಮತ್ತು ಕಾರ್ಮಿಕರನ್ನು ಕರೆತರಲು ರಾಜ್ಯಗಳು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಹಾರ್ಡ್‌ವೇರ್, ಗ್ಯಾರೇಜ್ ಅಂಗಡಿ ಸೇರಿದಂತೆ ಅನೇಕ ಅಂಗಡಿಗಳನ್ನು ತೆರೆಯಲು ಅನುಮತಿ ಸಿಗಬಹುದು. ಆದರೂ ಎಲ್ಲೆಡೆ ಸಾಮಾಜಿಕ ದೂರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.
ವಿಶೇಷ ರೈಲು ಸಂಚಾರ
ವಿಶೇಷ ರೈಲುಗಳ ಸಂಚಾರ ಆಗಬಹುದು. ದೇಶಾದ್ಯಂತ ಕಾರ್ಮಿಕರಿಗಾಗಿ ಸುಮಾರು 1000 ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಈಗಾಗಲೇ ಘೋಷಿಸಿದ್ದಾರೆ. ಈ ಎಲ್ಲಾ ವಿಶೇಷ ರೈಲುಗಳು ನಿರಂತರವಾಗಿ ಚಲಿಸುತ್ತವೆ. ವಿಶೇಷ ರೈಲುಗಳ ಸಂಖ್ಯೆ ಮತ್ತು ಮಾರ್ಗ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ. ಹೀಗಾಗಿ ರೈಲ್ವೆ ಕ್ರಮೇಣ ಸಂಚಾರ ಹೆಚ್ಚಿಸಬಹುದು.
ಕೆಲವು ಮಾರ್ಗಗಳಲ್ಲಿ ವಿಮಾನ ಹಾರಾಟ?
ಲಾಕ್‌ಡೌನ್ 4.0 ದಲ್ಲಿ ವಿಮಾನಯಾನ ಸಂಸ್ಥೆಗಳು ಕೆಲವು ರಿಯಾಯಿತಿಗಳನ್ನು ಪಡೆಯಬಹುದು. ಮೇ 18 ರಿಂದ ದೇಶೀಯ ಮಾರ್ಗಗಳಲ್ಲಿ ವಿಮಾನಗಳನ್ನು ಓಡಿಸಲು ಅನುಮತಿಸಬಹುದು. ಆದಾಗ್ಯೂ ವಿಮಾನವು ಆಯ್ದ ಮಾರ್ಗದಲ್ಲಿ ಮಾತ್ರ ಪ್ರಾರಂಭವಾಗುತ್ತದೆ. ಇದನ್ನು ಮುಂದಿನ ದಿನಗಳಲ್ಲಿ ಅಥವಾ ತಿಂಗಳುಗಳಲ್ಲಿ ಹೆಚ್ಚಿಸಬಹುದು. ಆದರೆ ಅನೇಕ ರಾಜ್ಯಗಳು ಇನ್ನೂ ಕೂಡ ಯಾವುದೇ ವಿಮಾನ ಸೇವೆ ಬೇಡ ಎಂದು ವಿರೋಧಿಸುತ್ತಾ ಬಂದಿವೆ. ಆದರೆ ಕೇಂದ್ರ ಸರ್ಕಾರ ಈ ಕುರಿತು ಏನು ಕ್ರಮ ಕೈಗೊಳ್ಳುತ್ತದೆ ಎಂದು ಲಾಕ್‌ಡೌನ್ 4.0 ಮಾರ್ಗಸೂಚಿ ಬಿಡುಗಡೆ ಬಳಿಕ ತಿಳಿದುಬರಲಿದೆ.


Click it and Unblock the Notifications