ಕೊರೊನಾವೈರಸ್ ವಿಶ್ವದಲ್ಲೆಡೆ ಆರ್ಥಿಕತೆ ಮೇಲೆ ಪರಿಣಾಮ ಬೀರಿರುವಂತೆ ಭಾರತದಲ್ಲೂ ಭಾರೀ ನಷ್ಟವನ್ನುಂಟುಮಾಡಿದೆ. ಲಾಕ್‌ಡೌನ್‌ನಿಂದಾಗಿ ಭಾರತದಲ್ಲಿ ಕೈಗಾರಿಕೆಗಳು ಮತ್ತು ವ್ಯಾಪಾರ, ವ್ಯವಹಾರಗಳು ಸ್ಥಗಿತಗೊಂಡಿದ್ದರಿಂದ ಐವರಲ್ಲಿ ಒಬ್ಬರು ಭಾರತೀಯರು ತಮ್ಮ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ ಎಂದು ಹೊಸ ಸಮೀಕ್ಷೆ ಬುಧವಾರ ಎಚ್ಚರಿಸಿದೆ.
ಇಂಟರ್ನೆಟ್ ಆಧಾರಿತ ಮಾರುಕಟ್ಟೆ ಸಂಶೋಧನೆ ಮತ್ತು ದತ್ತಾಂಶ ವಿಶ್ಲೇಷಣಾ ಸಂಸ್ಥೆಯಾದ ಯೂಗೋವ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ 20 ಪರ್ಸೆಂಟ್ ಜನರು ಉದ್ಯೋಗಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಮತ್ತು 16 ಪರ್ಸೆಂಟ್ ಜನರು ವೇತನ ಕಡಿಗೊಳ್ಳುವ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನು ಈ ವರ್ಷ ಬೋನಸ್ ಅಥವಾ ಸಂಬಳ ಏರಿಕೆ ಪಡೆಯದಿರುವುದರ ಕುರಿತು 8 ಪರ್ಸೆಂಟ್‌ರಷ್ಟು ಉದ್ಯೋಗಿಗಳು ಆತಂಕಗೊಂಡಿದ್ದಾರೆ.
ಭಾರತದಲ್ಲಿ ನಿರುದ್ಯೋಗ ದರ ಹೆಚ್ಚಳ
ಕೊರೊನಾವೈರಸ್ ಆರ್ಥಿಕತೆ ಮೇಲೆ ಪರಿಣಾಮ ಬೀರಿರುವುದರಿಂದ ಆರಂಭಿಕ ಅಂದಾಜುಗಳಲ್ಲಿ ಭಾರತದಲ್ಲಿ ಲಕ್ಷಾಂತರ ಉದ್ಯೋಗಗಳು ಅಪಾಯದಲ್ಲಿದೆ. ಲಾಕ್‌ಡೌನ್‌ನಿಂದ ನಗರ ನಿರುದ್ಯೋಗ ದರವು 30.9 ಪರ್ಸೆಂಟ್ ಏರಿದೆ. ಒಟ್ಟಾರೆ ನಿರುದ್ಯೋಗ ಈಗಾಗಲೇ 23.4 ಪರ್ಸೆಂಟ್ ಏರಿಕೆಯಾಗಿದೆ.
ಜನರು ಈಗಾಗಲೇ ಮೂರು ವಾರಗಳ ಕಾಲ ಮನೆಯಲ್ಲಿಯೇ ಇರುವುದರಿಂದ, ಯುಗೋವ್ ಕೊರೊನಾ ವೈರಸ್ ಕುರಿತು ಜನರಲ್ಲಿನ ಭಯದ ಮಟ್ಟದ ಕುರಿತು ಸಮೀಕ್ಷೆ ನಡೆಸಿದ್ದು , ಕಾಲಾನಂತರದಲ್ಲಿ ಜನರಲ್ಲಿ ಭಯದ ಮಟ್ಟವು ಸ್ಥಿರವಾಗಿದೆ ಎಂದು ತೋರಿಸುತ್ತದೆ. ವೈರಸ್ ಸೋಂಕಿಗೆ ತಾವು ತುಂಬಾ ಅಥವಾ ತಕ್ಕಮಟ್ಟಿಗೆ ಹೆದರುತ್ತಿದ್ದೇವೆ ಎಂದು ಹೇಳುವವರ ಸಂಖ್ಯೆಯಲ್ಲಿ ಅಲ್ಪ ಕುಸಿತ ಕಂಡುಬಂದಿದೆ. ಕಳೆದ ವಾರ 66 ಪರ್ಸೆಂಟ್ ಇದ್ದ ಪ್ರಮಾಣ 64 ಪರ್ಸೆಂಟ್‌ಗೆ ಇಳಿದಿದೆ.
ಅಗತ್ಯ ವಸ್ತುಗಳ ಕೊರತೆಯ ಭಯ
ಕೊರೊನಾವೈರಸ್ ಕುರಿತು ಜನರು ಭಯಭೀತರಾಗಿರುವುದರ ಜೊತೆಗೆ ಅಗತ್ಯ ವಸ್ತುಗಳು ಎಲ್ಲಿ ಖಾಲಿ ಆಗಿಬಿಡುತ್ತವೋ ಎಂಬ ಆತಂಕವು ಹಲವರಲ್ಲಿದೆ. ಸುಮಾರು 37 ಪರ್ಸೆಂಟ್‌ರಷ್ಟು ಭಾರತೀಯರು ಅಗತ್ಯ ವಸ್ತುಗಳ ಅಲಭ್ಯತೆ ಕುರಿತು ಚಿಂತಿತರಾಗಿದ್ದಾರೆ. ಏಪ್ರಿಲ್ 7 ರಿಂದ 10ರ ನಡುವೆ ಭಾರತದಲ್ಲಿ 1,000 ಜನರ ಸಮೀಕ್ಷೆಯನ್ನು ನಡೆಸುವುದರ ಅಂಕಿ-ಅಂಶ ಇದಾಗಿದೆ.
ಸುಮಾರು ಅರ್ಧದಷ್ಟು ಜನರಿಂದ ವ್ಯಾಯಾಮ ಪ್ರಾರಂಭ
ಕೊರೊನಾವೈರಸ್ ಸೋಂಕಿಗೆ ತುತ್ತಾಗಬಾರದು ಎಂಬ ಭಯ ಎಲ್ಲರಲ್ಲಿಯೂ ಇರುವುದು ಸಹಜ. ಇದರ ಜೊತೆಗೆ ಸುಮಾರು ಅರ್ಧದಷ್ಟು (47 ಪರ್ಸೆಂಟ್) ಜನರು ತಮ್ಮನ್ನು ತಾವು ಫಿಟ್ ಆಗಿಡಲು ವ್ಯಾಯಾಮ ಮಾಡಲು ಪ್ರಾರಂಭಿಸಿದ್ದಾರೆ. ಇನ್ನು ಅನೇಕ ಜನರು (46 ಪರ್ಸೆಂಟ್) ಸ್ನೇಹಿತರು ಮತ್ತು ಕುಂಟುಬಕ್ಕೆ ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಸಾಮಾನ್ಯ ಸಮಯದಲ್ಲಿ ಇದು ಹೆಚ್ಚು ಇರಲಿಲ್ಲ ಎಂದು ಅಂಕಿ-ಅಂಶಗಳು ತಿಳಿಸಿವೆ.
ಮಹಿಳೆಯರಿಂದಲೇ ಹೆಚ್ಚು ತಂತ್ರಜ್ಞಾನ ಬಳಕೆ
ಕೊರೊನಾ ವೈರಸ್‌ನಿಂದ ಪಾರಾಗಲು ತಮ್ಮನ್ನು ತಾವು ಫಿಟ್‌ಗೊಳಿಸುವುದರ ಜೊತೆಗೆ ವಿಡಿಯೋ ಕರೆಗಳನ್ನು ಮಾಡುವುದರ ಮೂಲಕ ತಂತ್ರಜ್ಞಾನ ಬಳಕೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿದ್ದಾರೆ. 43 ಪರ್ಸೆಂಟ್‌ನಷ್ಟು ಪುರುಷರು ಈ ತಂತ್ರಜ್ಞಾನ ಬಳಸುತ್ತಿದ್ದರೆ, 50 ಪರ್ಸೆಂಟ್‌ನಷ್ಟು ಮಹಿಳೆಯರು ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.


Click it and Unblock the Notifications