ಇದು ಲಂಡನ್ ನಲ್ಲಿನ ಅತ್ಯಂತ ಪುಟಾಣಿ ಮನೆ. ಈಗ ಮಾರಾಟಕ್ಕಿದೆ. ಶಸ್ತ್ರಚಿಕಿತ್ಸೆ ಮಾಡುವ ಕ್ಲಿನಿಕ್ ಹಾಗೂ ಹೇರ್ ಡ್ರೆಸ್ ಸಲೂನ್ ಮಧ್ಯೆ, ನಾನೂ ಇದೀನಿ ಎಂಬಂತೆ ಇದರ ಅತ್ಯಂತ ಕಿರಿದಾದ ಭಾಗದಲ್ಲಿ ಐದಡಿ ಆರಿಂಚು (5 ಅಡಿ 6 ಇಂಚು) ಅಗಲ ಇರುವ ಕಟ್ಟಡವನ್ನು 950,000 ಪೌಂಡ್ ಗೆ ಮಾರಲು ಇಡಲಾಗಿದೆ. ಅಂದರೆ ಭಾರತದ ರುಪಾಯಿ ಲೆಕ್ಕದಲ್ಲಿ 9,49,86,296.72 (9.50 ಕೋಟಿ ರುಪಾಯಿ).
ಶೆಫರ್ಡ್ ಬುಶ್ ನಲ್ಲಿ ಇರುವ ಐದು ಅಂತಸ್ತಿನ ಅಪರೂಪದ ಕಟ್ಟಡ ಇದು. ಮೂಲತಃ ವಿಕ್ಟೋರಿಯನ್ ಟೋಪಿ ಮಳಿಗೆ ಇದಾಗಿತ್ತು. ಅದರ ಮೇಲಂತಸ್ತಿನಲ್ಲಿ ಉಳಿದುಕೊಳ್ಳುವುದಕ್ಕೆ ಕ್ವಾರ್ಟರ್ಸ್ ಇತ್ತು. 19ನೇ ಶತಮಾನದ ಕೊನೆಗೆ ಅಥವಾ 20ನೇ ಶತಮಾನದ ಶುರುವಿನಲ್ಲಿ ಈ ಕಟ್ಟಡದ ನಿರ್ಮಾಣ ಆಗಿದೆ.
ಆದರೆ, ಇವತ್ತಿಗೂ ಹಳೇ ಜಮಾನದಲ್ಲಿ ಹೇಗಿತ್ತೋ ಅದೇ ರೀತಿಯಲ್ಲಿ ಮಳಿಗೆ ಮುಂಭಾಗದ ಗಾಜು ಹಾಗೂ ಬೌಲರ್ ಟೋಪಿ ಆಕಾರದ ದೀಪ ಇದೆ. ಈ ಆಸ್ತಿಯನ್ನು ಮಾರಾಟ ಮಾಡುತ್ತಿರುವ ವಿಂಕ್ ವರ್ಥ್ ಸಹಾಯಕ ಸೇಲ್ಸ್ ಮ್ಯಾನೇಜರ್ ಡೇವಿಡ್ ಮೈಯರ್ ಹೇಳುವಂತೆ, ಲಂಡನ್ ಇತಿಹಾಸದಲ್ಲಿ ವಿಶಿಷ್ಟ ಭಾಗದಲ್ಲಿ ಇರುವುದರಿಂದ ಇಷ್ಟು ಮೊತ್ತಕ್ಕೆ ಈ ಕಟ್ಟಡ ಅರ್ಹವಿದೆ.

ಇಡೀ ಕಟ್ಟಡದಲ್ಲಿ ಒಂದೊಂದು ಕಡೆ ಒಂದೊಂಡು ಅಳತೆ ಇದೆ. ಕೆಳಗಿನ ಅಂತಸ್ತಿನ ತುದಿಯಲ್ಲಿ ಇರುವ ಅಡುಗೆ ಮನೆ ಅತ್ಯಂತ ಕಿರಿದಾದ ಸ್ಥಳದಲ್ಲಿದೆ. ಅದರ ಎರಡರಷ್ಟು ಅಳತೆಯಲ್ಲಿ ತೆರೆದ ರೀತಿಯಲ್ಲಿ ಡೈನಿಂಗ್ ಪ್ರದೇಶ ಇದೆ. ಫ್ರೆಂಚ್ ಶೈಲಿಯ ಕಿಟಕಿ ಹಿಂಭಾಗ ಹದಿನಾರು ಅಡಿ ಅಗಲದ ಉದ್ಯಾನ ಇದೆ.
ಸದ್ಯಕ್ಕೆ ನೆಲ ಮಹಡಿಯಲ್ಲಿ ರಿಸೆಪ್ಷನ್ ಇದೆ. ಅದೇ ಅಳತೆಯಲ್ಲೇ ಮೊದಲ ಅಂತಸ್ತು ಕೂಡ ಇದೆ. ಅಲ್ಲಿ ಮಲಗುವ ಕೋಣೆ ಹಾಗೂ ಓದುವ ಕೋಣೆ ಇದ್ದು, ಜತೆಗೆ ರೂಫ್ ಟೆರೇಸ್ ಕೂಡ ಇದೆ. ಪಶ್ಚಿಮ ಲಂಡನ್ ನ ಚಿಮಣಿ ಪಾಟ್ ಗಳು ಸಹ ಇವೆ.
ಎರಡನೇ ಅಂತಸ್ತಿನಲ್ಲಿ ವೃತ್ತಾಕಾರದ ಮೆಟ್ಟಿಲುಗಳಿದ್ದು, ಸ್ನಾನದ ಕೋಣೆ ಮತ್ತು ಮೂರನೇ ಅಂತಸ್ತಿನಲ್ಲಿ ಮಾಸ್ಟರ್ ಬೆಡ್ ರೂಮ್ ಇದೆ. ಅಲ್ಲಿ ಅಟ್ಟಣಿಗೆ ಇದ್ದು, ಮಂಚದ ಬಳಿ ತೆರಳುವುದಕ್ಕೆ ವ್ಯವಸ್ಥೆ ಮಾಡಿದ್ದು, ಆ ಮೂಲಕ ಜಾಗ ಉಳಿಸಲಾಗಿದೆ.
ಲಂಡನ್ ನಲ್ಲಿ ಐದು ಅಂತಸ್ತಿನ ಬೇಕಾದಷ್ಟು ಮನೆಗಳು ಸಿಗುತ್ತವೆ. ಆದರೆ ಐದು ಅಡಿ ಆರಿಂಚಿನ ಮನೆ ಹಾಗೂ ಅಷ್ಟು ವಿಶಿಷ್ಟವಾದದ್ದು ದೊರೆಯುವುದಿಲ್ಲ ಎನ್ನುತ್ತಾರೆ ಮೈಯರ್. ಲಂಡನ್ ನಲ್ಲಿ ಸರಾಸರಿ ಆಸ್ತಿ ಬೆಲೆ 256,000 ಪೌಂಡ್. ಆದರೆ ಶೆಫರ್ಡ್ ಬುಶ್ ನಂತಹ ಸ್ಥಳದಲ್ಲಿ ಇದ್ದು, ಲಂಡನ್ ನ ಹೃದಯ ಭಾಗಕ್ಕೆ ಈ ಕಟ್ಟಡದಿಂದ ಹತ್ತರಿಂದ ಹದಿನೈದು ನಿಮಿಷದಲ್ಲಿ ತೆರಳಬಹುದು ಎಂದು ಹೇಳುತ್ತಾರೆ ಮೈಯರ್.
ಕೋವಿಡ್ ಇರುವುದರಿಂದ ಲಂಡನ್ ನಿಂದ ಹೊರ ಭಾಗಕ್ಕೆ ತೆರಳಲು ಜನರು ನೋಡುತ್ತಿದ್ದಾರೆ. ಆದ್ದರಿಂದ ಈಗಲೇ ಈ ಆಸ್ತಿ ಮಾರಾಟ ಆಗುವುದು ಕಷ್ಟ. ಈಗಿನ ಸನ್ನಿವೇಶ ಬದಲಾಗುತ್ತದೆ. ಇಂಥ ವಿಶಿಷ್ಟ ಮನೆ ಖರೀದಿಸಲು ಜನ ಬರುತ್ತಾರೆ ಎಂದು ಮೈಯರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.


Click it and Unblock the Notifications