ಬೆಂಗಳೂರು: ಮಧ್ಯಪ್ರಾಚ್ಯದ ಸಂಘರ್ಷ (Middle East War) ಇದೀಗ ಬೆಂಗಳೂರಿಗೂ ತಟ್ಟಿದೆ. ತೈಲ ಬೆಲೆ ಹೆಚ್ಚಳ, ಇಂಧನ ಪೂರೈಕೆಯಲ್ಲಾದ ವ್ಯತ್ಯಯ ಬೆಂಗಳೂರಿನ ವ್ಯಾಪಾರ, ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಎಲ್‌ಪಿಜಿ ಪೂರೈಕೆಯಲ್ಲಿನ ಉಂಟಾದ ವ್ಯತ್ಯಯದಿಂದಾಗಿ, ಬೆಂಗಳೂರಿನಲ್ಲಿ ಹಲವು ಹೋಟೆಲ್, ರೆಸ್ಟೋರೆಂಟ್‌ಗಳು, ಪಿಜಿಗಳು, ಕ್ಯಾಂಟೀನ್‌ಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಇದೀಗ ಎಲ್‌ಪಿಜಿ ಕೊರತೆಯ ಭೀತಿ ನಡುವೆಯೇ, ಇದೀಗ ಬೆಂಗಳೂರಿನಲ್ಲಿ (Bengaluru) ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರಿನಲ್ಲಿ ಸದ್ಯ ಎಲ್‌ಪಿಜಿ ಕೊರತೆ ಉಂಟಾಗಿದೆ. ಈ ಕೊರತೆಯಿಂದಾಗಿ ಸದ್ಯ ಭಾರೀ ತೊಂದರೆ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಬೆಂಗಳೂರು ದಕ್ಷಿಣದ ರಾಮನಗರದ ಚನ್ನಪಟ್ಟಣದಲ್ಲಿ ಮನೆಯೊಂದರಿಂದ ಅಡುಗೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಅನ್ನೇ ಕಳ್ಳತನ (LPG Cylinder Stolen) ಮಾಡಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಕದ್ದ ಖದೀಮರು!
ಚನ್ನಪಟ್ಟಣದ ಕೃಷ್ಣಪ್ಪ ಅವರ ಮನೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 7 ರಂದು ಕೃಷ್ಣಪ್ಪ ಮತ್ತು ಕುಟುಂಬ ಹೊರಗೆ ಹೋಗಿದ್ದಾಗ ಈ ಕಳ್ಳತನ ನಡೆದಿದೆ. ಸಾಮನ್ಯವಾಗಿ ಹೆಚ್ಚುವರಿ ಸಿಲಿಂಡರ್ ಇದ್ದರೆ ಅದನ್ನು ಮನೆಯ ಹೊರಗಡೆ ಇಡುತ್ತಿದ್ದರಂತೆ. ಆದ್ರೆ ಆ ದಿನ ಗ್ಯಾಸ್ ಬದಲಾಯಿಸಲು ಮುಂದಾದಾಗ ಹೊರಗಿಟ್ಟಿದ್ದ ಗ್ಯಾಸ್ ಸಿಲಿಂಡರ್ ಕಾಣೆಯಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಕೃಷ್ಣಪ್ಪ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಎಲ್‌ಪಿಜಿ ಸಿಲಿಂಡರ್ ಕಳ್ಳತನ ಆಗಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು ಆ ಖತರ್ನಾಕ್ ಕಳ್ಳ ಸ್ಕೂಟರ್‌ನಲ್ಲಿ ಬಂದು ಗ್ಯಾಸ್ ಸಿಲಿಂಡರ್ ಅನ್ನು ಹೊತ್ತೊಯ್ದಿದ್ದಾನೆ ಎಂದು ಹೇಳಲಾಗಿದೆ.
ಎಲ್‌ಪಿಜಿ ಕೊರತೆ ಬಗ್ಗೆ ಮೋದಿ ಪ್ರತಿಕ್ರಿಯೆ
ಇಂದು ದೆಹಲಿಯಲ್ಲಿ ನಡೆದ NXT ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು, ಈ ವೇಳೆ ಎಲ್‌ಪಿಜಿ ಪೂರೈಕೆಯ ವಿರುದ್ಧ ಹಠಾತ್ ಭೀತಿ ಹುಟ್ಟಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕೇವಲ ಜನರಲ್ಲಿ ಭಯ ಹುಟ್ಟಿಸಲು ಈ ಕೊರತೆಯನ್ನು ಅವಕಾಶವಾಗಿ ಬಳಸಿಕೊಳ್ಳುವುದು ತಪ್ಪು." ಎಂದು ಹೇಳಿದ್ದಾರೆ. ಇನ್ನು ದೇಶದ ಇಂಧನ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮಾಡುತ್ತಿರುವ ಪ್ರಯತ್ನಗಳ ಬಗ್ಗೆಯೂ ನಮೋ ವಿವರಿಸಿದರು. "ಈ ಜಾಗತಿಕ ಬಿಕ್ಕಟ್ಟಿನಿಂದ ಯಾವುದೇ ದೇಶ ಹೊರತಾಗಿಲ್ಲ. ಎಲ್ಲರಿಗೂ ಈ ಬಿಕ್ಕಟ್ಟಿನ ಪ್ರಭಾವ ಬೀರಿದೆ. ಭಾರತವು ಸೌಲಭ್ಯಗಳ ಕೊರತೆಯನ್ನು ನಿವಾರಿಸಲು ನಿರಂತರ ಕೆಲಸ ಮಾಡುತ್ತಿದ್ದು, ಪೂರೈಕೆಯಲ್ಲಾಗುವ ಅಡ್ಡಿಗಳನ್ನು ನಿವಾರಿಸಲು ನಿರಂತರ ಕಾರ್ಯಚರಣೆಗಳು ನಡೆಯುತ್ತಿದೆ ಎಂದು ಹೇಳಿದರು.
ಜನರಿಗೆ ಮೋದಿ ಮನವಿ
ಈ ಸಂದರ್ಭದಲ್ಲಿ ಎಲ್ಲಾ ನಾಗರಿಕರು ಶಾಂತ ಮನಸ್ಸಿನಿಂದ, ಅಧಿಕೃತ ಮಾಹಿತಿಯನ್ನೇ ನಂಬಿ ಎಂದು ಸಲಹೆ ನೀಡಿದರು. ಅಲ್ಲದೇ ಯಾರೂ ಅನಗತ್ಯ ಭಯ ಹುಟ್ಟಿಸಬಾರದು ಎಂದು ಎಚ್ಚರಿಕೆ ನೀಡಿದರು. ಸದ್ಯ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ಕೊರತೆಯು ತಾತ್ಕಾಲಿಕವಾಗಿದೆ. ಈ ಬಗ್ಗೆ ಸುಳ್ಳು ಮಾಹಿತಿ ರವಾನಿಸುವುದು ದೇಶದ ಒಕ್ಕೂಟಕ್ಕೆ ಹಾನಿಯಾಗಲಿದೆ ಎಂದು ಹೇಳಿದ್ದಾರೆ.


Click it and Unblock the Notifications