ಮಧ್ಯಪ್ರಾಚ್ಯದಲ್ಲಿ ಯುದ್ಧದ (Middle East War) ಉದ್ವಿಗ್ನತೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಭಾರತದ ವಹಿವಾಟಿನ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆ, ಇಂಧನ ಆಮದಿನಲ್ಲಿ ಅಡ್ಡಿ ಹೀಗೆ ಹತ್ತು ಹಲವು ಸಮಸ್ಯೆಗಳು ಎದುರಾಗುತ್ತಿದೆ. ಈಗಾಗಲೇ ಇಸ್ರೇಲ್ ಮತ್ತು ಇರಾನ್ ಯುದ್ಧದಿಂದಾಗಿ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಅಲ್ಲದೇ ಸರ್ಕಾರ ಕೂಡ, ಹೋಟೆಲ್‌ಗಳ ಬೇಡಿಕೆಗೆ ತಕ್ಕಂತೆ ಎಲ್‌ಪಿಜಿ ಪೂರೈಸಲು ಸಾಧ್ಯವಿಲ್ಲ (LPG Shortage) ಎಂದು ಹೇಳಿದೆ. ಕರ್ನಾಟಕದಲ್ಲೂ ಎಲ್‌ಪಿಜಿ ಕೊರತೆಯ ಪ್ರಭಾವ ಬೀರಿದ್ದು, ಇದೀಗ ಈ ಕುರಿತು ವಿಧಾನಸಭೆ ಕಲಾಪದಲ್ಲೂ ಚರ್ಚೆಗೆ ಬಂದಿದೆ. ಈ ವೇಳೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್ ಮುನಿಯಪ್ಪ (K.H. Muniyappa) ಇನ್ನು 10 ದಿನದೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂದು ಭರವಸೆ ನೀಡಿದರು.

ಇನ್ನೂ 10 ದಿನ ಸಿಗಲ್ಲ ಸಿಲಿಂಡರ್!
ವಿಧಾನಸಭೆಯಲ್ಲಿ ಕಾಂಗ್ರೆಸ್ ನಾಯಕರಾದ ಐವಾನ್ ಡಿಸೋಜಾ, ನಾಗರಾಜ್ ಯಾದವ್ ಅವರು ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆ ಪ್ರಸ್ತಾಪಿಸಿದರು. ಇದೇ ವೇಳೆ ಮಾತನಾಡಿದ ಸಚಿವ ಮುನಿಯಪ್ಪ, ತೈಲ ಸಂಸ್ಥೆಗಳ ಅಧಿಕಾರಿಗಳ ಜೊತೆಗೆ ಈಗಾಗಲೇ ಸಭೆ ನಡೆಸಲಾಗಿದೆ. ಆಸ್ಪತ್ರೆ, ವಸತಿ ನಿಲಯ ಮತ್ತು ವಸತಿ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆ ಪ್ರಕಾರ ವಾಣಿಜ್ಯ ಬಳಕೆಯ ಗ್ಯಾಸ್ ಪೂರೈಸಲು ಆದೇಶ ನೀಡಲಾಗಿದೆ. ಆದರೆ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಸದ್ಯದ ಮಟ್ಟಿಗೆ ಗ್ಯಾಸ್ ಪೂರೈಸಲು ಸಾಧ್ಯವಿಲ್ಲ. ಆದರೆ ಮುಂದಿನ 10 ದಿನದೊಳಗೆ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿಶ್ವಾಸವಿದೆ. ಅಲ್ಲಿಯವರೆಗೆ ಮಾಲೀಕರು ತಾಳ್ಮೆಯಿಂದ ಇರಬೇಕು. ಅಲ್ಲದೇ ಅಲ್ಲಿಯವರೆಗೆ ಎಲೆಕ್ಟ್ರಿಕ್ ಸ್ಟೌವ್ ಬಳಸಬಹುದು ಎಂದು ಹೇಳಿದರು.
ಭಾರತಕ್ಕೆ 2 ಹಡಗುಗಳ ಆಗಮನ
ಈಗಾಗಲೇ ಮಧ್ಯಪ್ರಾಚ್ಯದಿಂದ 2 ಹಡಗುಗಳಲ್ಲಿ ತೈಲ ಬಂದಿಳಿದಿದ್ದು, ಇನ್ನೂ ಹತ್ತು ಹನ್ನೆರಡು ಹಡಗುಗಳು ಬರಲು ಬಾಕಿಯಿದೆ. ಆ ಹಡಗುಗಳು ಒಂದು ವೇಳೆ ಬಂದರೆ, ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಬ್ಲ್ಯಾಕ್ ಮಾರ್ಕೆಟ್‌ನಲ್ಲಿ, ಸಿಲಿಂಡರ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಇನ್ನು ಅಗತ್ಯವಿರುವ ಅನಿಲದಲ್ಲಿ ಶೇ. 30% ರಷ್ಟು ಅನಿಲ ಉತ್ಪಾದನೆ ಭಾರತದಲ್ಲೇ ಮಾಡಲಾಗುತ್ತಿದೆ. ಆದರೆ ಬಾಕಿ ಉಳಿದ ಶೇ.70% ರಷ್ಟು ಆಮದು ಮಾಡಿಕೊಳ್ಳುವ ಅವಶ್ಯಕತೆ ಇದೆ. ಆದ್ದರಿಂದ ಮುಂದಿನ 10 ದಿನಗಳವರೆಗೆ ಬೇಕಾದ ದಾಸ್ತಾನು ರಾಜ್ಯದಲ್ಲಿದೆ. ಆದ್ದರಿಂದ ಎಲ್ಲಾ ಕಡೆ ವಿತರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಶಾಲಾ ಬಿಸಿಯೂಟ, ಆಸ್ಪತ್ರೆ ಸೇರಿ ತುರ್ತು ಸೇವೆಗಳಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಸದ್ಯ ಎಲ್ಲಿ ನೋಡಿದರೂ ಎಲ್‌ಪಿಜಿ ಪೂರೈಕೆ ಕೊರತೆ ಬಗ್ಗೆಯೇ ಚರ್ಚೆಯಾಗುತ್ತಿದೆ. ಅಲ್ಲದೇ ಹಲವು ಕಡೆಗಳಲ್ಲಿ ಗ್ಯಾಸ್ ಕೊರತೆಯಿಂದ ಹೋಟೆಲ್, ರೆಸ್ಟೋರೆಂಟ್‌ಗಳು ಮುಚ್ಚಿದ್ದು, ಯಾವಾಗ ಪರಿಹಾರ ಸಿಗಬಹುದು ಎಂದು ಮಾಲೀಕರು ಕಾಯುತ್ತಿದ್ದಾರೆ.


Click it and Unblock the Notifications