ಸರ್ಕಾರಿ ಸ್ವಾಮ್ಯದ ಒಎನ್ ಜಿಸಿ ಕಂಪೆನಿಯ ಷೇರುಗಳು ಸೋಮವಾರ ದಿನಾಂತ್ಯಕ್ಕೆ 100 ರುಪಾಯಿಯೊಳಗೆ ಬಂದಿದೆ. ದಿನದ ಕೊನೆಗೆ ರು. 99.95ಕ್ಕೆ ವಹಿವಾಟು ಮುಗಿಸಿದೆ. ಇದರ ಜತೆಗೆ ವಾರ್ಷಿಕ ಕನಿಷ್ಠ ಮಟ್ಟವಾದ ರು. 98.85 ಅನ್ನು ಮುಟ್ಟಿತು. ಆ ಮೂಲಕ 11 ವರ್ಷದಲ್ಲೇ ಕನಿಷ್ಠ ಮಟ್ಟವನ್ನು ತಲುಪಿತು.
ಡಿಸೆಂಬರ್ ಗೆ ಕೊನೆಯಾದ ತ್ರೈ ಮಾಸಿಕಕ್ಕೆ ದಾಖಲಿಸಿದ ಫಲಿತಾಂಶ ದುರ್ಬಲವಾಗಿದೆ. ಅಂದಹಾಗೆ ಒಎನ್ ಜಿಸಿ ಈ ಹಿಂದೆ 2008ರ ಅಕ್ಟೋಬರ್ ನಲ್ಲಿ ರು. 89.68 ತಲುಪಿತ್ತು. ಅದು ಈ ಹಿಂದಿನ ಕನಿಷ್ಠ ಮಟ್ಟವಾಗಿತ್ತು. ಕಳೆದ ಶುಕ್ರವಾರದಂದು ಷೇರು ಮಾರುಕಟ್ಟೆ ವ್ಯವಹಾರದ ಅವಧಿ ಮುಗಿದ ನಂತರ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ನ (ಒಎನ್ ಜಿಸಿ) ತ್ರೈ ಮಾಸಿಕ ಫಲಿತಾಂಶ ಬಂದಿತ್ತು.
ಆ ಫಲಿತಾಂಶದಲ್ಲಿ 49.75 ಪರ್ಸೆಂಟ್ ನಷ್ಟು ನಿವ್ವಳ ಲಾಭ ಕಡಿಮೆಯಾಗಿ, 4,151.63 ಕೋಟಿ ಲಾಭ ಗಳಿಸಿರುವುದಾಗಿ ಘೋಷಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಎನ್ ಜಿಸಿ 8,262.70 ಕೋಟಿ ರುಪಾಯಿ ಲಾಭವನ್ನು ದಾಖಲಿಸಿತ್ತು.

ಇನ್ನು ಈ ತ್ರೈಮಾಸಿಕದಲ್ಲಿ ಕಳೆದ ವರ್ಷದ ಅವಧಿಗೆ ಹೋಲಿಸಿದರೆ ಕಂಪೆನಿಯ ಒಟ್ಟು ಆದಾಯ 16 ಪರ್ಸೆಂಟ್ ಕುಸಿತ ಕಂಡಿದೆ. ನಿರೀಕ್ಷೆ ಮಾಡಿದ್ದಕ್ಕಿಂತ ಮೂರನೇ ತ್ರೈಮಾಸಿಕದ ಫಲಿತಾಂಶವು ಬಹಳ ಕಡಿಮೆ ಇದೆ. ಅಂದ ಹಾಗೆ ಮಹಾರತ್ನ ಕಂಪೆನಿಗಳಲ್ಲಿ ಒಎನ್ ಜಿಸಿ ಕೂಡ ಒಂದು.
ಒಎನ್ ಜಿಸಿ ಷೇರು ಖರೀದಿಸಬಹುದಾ?
ಈಗ ಷೇರು ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ಷೇರುಗಳು ಸತತವಾಗಿ ಇಳಿಕೆ ಕಾಣುತ್ತಿವೆ. ಆದ್ದರಿಂದ ವಾರ್ಷಿಕ ಕನಿಷ್ಠ ಮಟ್ಟಕ್ಕೆ ಬಂದಿದೆ ಅನ್ನೋ ಕಾರಣದಿಂದ ಮಾತ್ರ ಖರೀದಿಗೆ ಮುಗಿಬೀಳುವುದು ಸರಿಯಲ್ಲ ಎಂದು ಮಾರುಕಟ್ಟೆ ತಜ್ಞರು ಮತ್ತು ಅಂಕಣಕಾರರಾದ ಕೆ.ಜಿ. ಕೃಪಾಲ್ ಅವರು ಕನ್ನಡ ಗುಡ್ ರಿಟರ್ನ್ಸ್ ಗೆ ತಿಳಿಸಿದರು.
ಹಾಗೆ ನೋಡಿದರೆ ಒಎನ್ ಜಿಸಿಗಿಂತ ಆಯಿಲ್ ಇಂಡಿಯಾ ಷೇರುಗಳು ಆಕರ್ಷಕವಾಗಿ ಕಾಣುತ್ತಿವೆ. ಫೆಬ್ರವರಿ ಇಪ್ಪತ್ತನೇ ತಾರೀಕಿನ ತನಕ ಆ ಷೇರುಗಳನ್ನು ಇಟ್ಟುಕೊಂಡರೆ ತಲಾ 9 ರುಪಾಯಿಯಂತೆ ಡಿವಿಡೆಂಡ್ ಕೂಡ ದೊರೆಯುತ್ತದೆ ಎಂದು ಅವರು ಹೇಳಿದರು.
ಆದರೆ, ಈಗಿನ ಮಾರುಕಟ್ಟೆ ಸನ್ನಿವೇಶದಲ್ಲಿ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು. ಏಕೆಂದರೆ ಸರ್ಕಾರಿ ಸ್ವಾಮ್ಯದ ಷೇರುಗಳು ದಿನ ದಿನಕ್ಕೂ ವಾರ್ಷಿಕ ಕನಿಷ್ಠ ಮಟ್ಟದತ್ತ ಇಳಿಯುತ್ತಿದೆ. ಹಾಗಂತ ಈ ಕಂಪೆನಿಗಳು ಚೆನ್ನಾಗಿಲ್ಲ ಅಂತಲ್ಲ. ಮೂಲಭೂತವಾಗಿ ಬಲಿಷ್ಠವಾಗಿವೆ. ಆದರೆ ಇತರ ಅಂಶಗಳು ಪೂರಕವಾಗಿಲ್ಲ ಎಂದು ಕೆ.ಜಿ. ಕೃಪಾಲ್ ಅವರು ವಿವರಿಸಿದರು.


Click it and Unblock the Notifications