ಕಳೆದ ಕೆಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಆರೋಪದ ಮೇಲೆ ಬಿಬಿಎಂಪಿಯ ಕಂದಾಯ ಅಧಿಕಾರಿಗಳು ಬುಧವಾರ ಬೆಳಗ್ಗೆ ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್‌ನ ಮುಖ್ಯ ದ್ವಾರವನ್ನು ಸೀಲ್ ಮಾಡಿದ್ದಾರೆ. ಈ ಹಿಂದೆಯೂ ಹಲವಾರು ಬಾರಿ ಬಿಬಿಎಂಪಿಯು ಇದೇ ಕ್ರಮವನ್ನು ಕೈಗೊಂಡಿದೆ.
ಮಂತ್ರಿ ಸ್ಕ್ವೇರ್ ಮಾಲ್ 51 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆಯನ್ನು ಪಾವತಿಸುವುದು ಬಾಕಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ.

ಆಸ್ತಿ ತೆರಿಗೆಯನ್ನು ಪಾವತಿಸದ ಕಾರಣ ಪಶ್ಚಿಮ ವಲಯದ ಅಧಿಕಾರಿಗಳು ಮಾಲ್ ಅನ್ನು ಸೀಲ್ ಮಾಡಿದ್ದಾರೆ. ಬಾಕಿ ಪಾವತಿಸದಿದ್ದಲ್ಲಿ ಬಿಬಿಎಂಪಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಹಲವು ಬಾರಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಜಪ್ತಿ ಕಾರ್ಯವನ್ನು ಕೂಡಾ ಮಾಡಲಾಗಿದೆ.
ಮಂತ್ರಿ ಸ್ಕ್ವೇರ್ ಮಾಲ್‌ನ ಚರಾಸ್ತಿ ಜಪ್ತಿ
ಈ ಹಿಂದೆ ಈ ವರ್ಷದ (2023) ಫೆಬ್ರವರಿಯಲ್ಲಿ ಆಸ್ತಿ ತೆರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್‌ನಿಂದ ವಿವಿಧ ಚರ ಆಸ್ತಿಗಳನ್ನು ಜಪ್ತಿ ಮಾಡಿದೆ.
ಅಧಿಕಾರಿಗಳು ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ಅಭಿಯಾನವನ್ನು ನಡೆಸಿದ್ದು, ಮಾರ್ಷಲ್‌ಗಳು ಸೇರಿದಂತೆ ಪಶ್ಚಿಮ ವಲಯದ ಬಿಬಿಎಂಪಿ ಸಿಬ್ಬಂದಿ ಮಾಲ್ ಮೇಲೆ ದಾಳಿ ನಡೆಸಿ ಕಂಪ್ಯೂಟರ್‌ಗಳು, ಲ್ಯಾಪ್‌ಟಾಪ್‌ಗಳು, ಕುರ್ಚಿಗಳು, ಟೇಬಲ್‌ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ವಿವಿಧ ಚರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಯೋಗೇಶ್ ಸಿ, "ಮಾಲ್ ಅಧಿಕಾರಿಗಳು 2018-19 ರಿಂದ ಆಸ್ತಿ ತೆರಿಗೆ ಪಾವತಿಸಿಲ್ಲ. ಒಟ್ಟು ಬಾಕಿ ಮೊತ್ತ 42.63 ಕೋಟಿ ರೂಪಾಯಿ. ನಾವು ಮಾಲ್ ಆಡಳಿತಕ್ಕೆ ನೋಟಿಸ್ ನೀಡಿದ್ದೇವೆ. ಆದರೆ, ಅವರು ಬಾಕಿ ಪಾವತಿಸಿಲ್ಲ. ಆದ್ದರಿಂದ, ಕಾರ್ಯವಿಧಾನದ ಪ್ರಕಾರ, ನಾವು ಮಾಲ್‌ನಿಂದ ವಿವಿಧ ಚರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದೇವೆ," ಎಂದು ತಿಳಿಸಿದ್ದರು.
ಮಾಲ್‌ಗೆ ಈ ಹಿಂದೆಯೂ ಬಿದ್ದಿತ್ತು ಬೀಗ
ಈ ಹಿಂದೆ 2021ರಲ್ಲಿಯೂ ಈ ಮಾಲ್‌ಗೆ ಬೀಗ ಜಡಿಯಲಾಗಿದೆ. ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಮಂತ್ರಿ ಮಾಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಮಲ್ಲೇಶ್ವರಂನಲ್ಲಿರುವ ಜನಪ್ರಿಯ ಮಾಲ್ ಅನ್ನು ಅದರ ಮಾಲೀಕರು 2018-19 ರಿಂದ ಆಸ್ತಿ ತೆರಿಗೆ ಪಾವತಿಸದ ಕಾರಣ ಬಿಬಿಎಂಪಿ ಅಧಿಕಾರಿಗಳು 2021ರ ಡಿಸೆಂಬರ್‌ನಲ್ಲಿ ಸೀಲ್ ಮಾಡಿದ್ದರು.
ಅಭಿಷೇಕ್ ಡೆವಲಪರ್ಸ್ ಒಡೆತನದ ಮಂತ್ರಿ ಸ್ಕ್ವೇರ್ ಮಾಲ್ ಒಟ್ಟು ಬಾಕಿ ಉಳಿದಿರುವ ಆಸ್ತಿ ತೆರಿಗೆ ಮೊತ್ತವು 39.49 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ 27.22 ಕೋಟಿ ರೂಪಾಯಿಗಳ ಆಸ್ತಿ ತೆರಿಗೆ ಬಾಕಿ ಮತ್ತು 12.26 ಕೋಟಿ ರೂಪಾಯಿಗಳ ಬಡ್ಡಿ ಸೇರಿದೆ ಎಂದು 2021ರಲ್ಲಿ ಬಿಬಿಎಂಪಿ ಹೇಳಿತ್ತು.
ಅಕ್ಟೋಬರ್ 31 ಮತ್ತು ಸೆಪ್ಟೆಂಬರ್ 30 ರಂದು ಮಾಲ್ ಅನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಗಿತ್ತು. ಅದಾದ ಬಳಿಕ ಅದರ ಆಡಳಿತವು 5 ಕೋಟಿ ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ಮತ್ತು ಬಾಕಿಯನ್ನು ತೆರವುಗೊಳಿಸಲಾಗುವುದು ಎಂದು ಉಲ್ಲೇಖಿಸಿದ ವಿನಂತಿ ಪತ್ರವನ್ನು ಹಸ್ತಾಂತರಿಸಿದ ನಂತರ ಮಾಲ್ ತೆರೆಯಲು ಅನುಮತಿಸಲಾಯಿತು.
ಈ ಹಿಂದೆ ಮಂತ್ರಿ ಮಾಲ್ 2018-19ನೇ ಸಾಲಿಗೆ 10.43 ಕೋಟಿ ರೂಪಾಯಿ ಚೆಕ್ ನೀಡಿದ್ದು, ಅದು ಬೌನ್ಸ್ ಆಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದೇ ಕಾರಣಕ್ಕಾಗಿ 2021ರ ಫೆಬ್ರವರಿಯಲ್ಲಿ ಮಾಲ್ ಅನ್ನು ಏಳು ಗಂಟೆಗಳ ಕಾಲ ಮುಚ್ಚಲಾಗಿತ್ತು.


Click it and Unblock the Notifications