ನವದೆಹಲಿ, ನವೆಂಬರ್ 1: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಇಳಿಮುಖಗೊಂಡಿದೆ. ಕಳೆದ 7 ತಿಂಗಳ ನಂತರ ದೇಶದ ಉತ್ಪಾದನಾ ಚಟುವಟಿಕೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಗಳು ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಿವೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಕಳೆದ ಮಾರ್ಚ್ ತಿಂಗಳಿನಿಂದ ಈವರೆಗೆ ಕಂಪನಿಗಳ ಉತ್ಪಾದನೆಯಲ್ಲಿ ಗಣನೀಯ ಏರಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.53.70ರಷ್ಟಿದ್ದ ಉತ್ಪಾದನೆ ಪ್ರಮಾಣ ಅಕ್ಟೋಬರ್ ತಿಂಗಳಿನಲ್ಲಿ ಶೇ.55.90ರಷ್ಟಾಗಿದೆ.
ಭಾರತದ ಮಾರಾಟ ಮತ್ತು ಖರೀದಿ ನಿರ್ವಹಣೆ ಸೂಚ್ಯಂಕದ ಪ್ರಕಾರ, ನಾಲ್ಕು ತಿಂಗಳ ಅವಧಿಯಲ್ಲಿ ಉತ್ಪಾದನಾ ಚಟುವಟಿಕೆಯು ಏರಿಕೆಯಾಗಿದೆ. ಫೆಬ್ರವರಿ ತಿಂಗಳ ನಂತರದಲ್ಲಿ ಪ್ರತಿ ತಿಂಗಳು ಕಂಪನಿಗಳ ಉತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಿರುವುದು ಅಂಕಿ-ಅಂಶಗಳಿಂದ ಗೊತ್ತಾಗಿದೆ. ಸೂಚ್ಯಂಕದ ಪ್ರಕಾರ ಉತ್ಪಾದನೆ ಜೊತೆಗೆ ವ್ಯಾಪಾರಿ ಸೂಚ್ಯಂಕದಲ್ಲೂ ಶೇ.50ರಷ್ಟು ಏರಿಕೆಯಾಗಿರುವುದು ಕಂಡು ಬಂದಿದೆ.

ಬೆಲೆ ಏರಿಕೆ ಬಿಸಿ:
ಭಾರತದಲ್ಲಿ ಕೆಲವು ಸಾಮಗ್ರಿಗಳ ಬೆಲೆ ಮತ್ತು ಸಾಗಾಣಿಕೆ ವೆಚ್ಚವು ನಿರಂತರವಾಗಿ ಏರಿಕೆಯಾಗುತ್ತಿರುವುದು ಅಂಕಿ-ಅಂಶಗಳಲ್ಲಿ ಸ್ಪಷ್ಟವಾಗುತ್ತಿದೆ. 2014ರ ಫೆಬ್ರವರಿಯಿಂದ ಒಟ್ಟಾರೆ ವೆಚ್ಚದ ಪ್ರಮಾಣ ಹೆಚ್ಚಾದ ಹಿನ್ನೆಲೆ ಮಾರಾಟ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ. "ಸಾಂಕ್ರಾಮಿಕ ರೋಗವು ನಿಯಂತ್ರಣದಲ್ಲಿದ್ದರೆ 2021 ಮತ್ತು 2022ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉತ್ಪಾದನಾ ಚಟುವಟಿಕೆಯು ವಿಸ್ತರಿಸುವುದನ್ನು ಮುಂದುವರಿಸುತ್ತದೆ" ಎಂದು ಐಎಚ್‌ಎಸ್ ಮಾರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕ ಪೊಲಿಯಾನ್ನಾ ಡಿ ಲಿಮಾ ಹೇಳಿದ್ದಾರೆ.
ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚಿನ ಬೇಡಿಕೆ:
ಕಳೆದ ಅಕ್ಟೋಬರ್‌ನಲ್ಲಿ ಹೊಸ ಆರ್ಡರ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಹೊಸ ಆರ್ಡರ್‌ಗಳಲ್ಲಿನ ಏರಿಕೆಯೂ ಹೆಚ್ಚಾಗಿದ್ದು, ಈ ಹಿನ್ನೆಲೆ ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮಾರ್ಚ್ ತಿಂಗಳಿನಿಂದ ಬೇಡಿಕೆ ಹೆಚ್ಚಾದ ಹಿನ್ನೆಲೆ ಉತ್ಪಾದನೆ ಪ್ರಮಾಣವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. "ಮುಂಬರುವ ತಿಂಗಳುಗಳಲ್ಲಿ ವ್ಯಾಪಾರ ವಹಿವಾಟಿನ ಸ್ಥಿತಿಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಉತ್ಪಾದನೆಯನ್ನು ಮತ್ತಷ್ಟು ಬೆಂಬಲಿಸಬೇಕಿದೆ," ಎಂದು ಡಿ ಲಿಮಾ ತಿಳಿಸಿದ್ದಾರೆ.
ಹಣದುಬ್ಬರದ ನಡುವೆ ವಿರಳ ಕಚ್ಚಾ ವಸ್ತುಗಳಿಗೆ ಜಾಗತಿಕ ಬೇಡಿಕೆಯಿದೆ. ಅಕ್ಟೋಬರ್‌ನಲ್ಲಿ ವೆಚ್ಚದ ಹಣದುಬ್ಬರವು ಸುಮಾರು ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ವೆಚ್ಚದ ಹಣದುಬ್ಬರದ ಒಟ್ಟಾರೆ ದರವು 92 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಡಿ ಲಿಮಾ ಹೇಳಿದ್ದಾರೆ. ಬಹುಪಾಲು ಉತ್ಪಾದಕರು ತಮ್ಮ ಶುಲ್ಕದಲ್ಲಿ ಯಾವುದೇ ರೀತಿ ಬದಲಾವಣೆಗೆ ಅವಕಾಶ ನೀಡದ ಹಿನ್ನೆಲೆ 'ಒಟ್ಟಾರೆ ಹಣದುಬ್ಬರ'ಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಉದ್ಯೋಗ ಸೃಷ್ಟಿಯಲ್ಲಿ ಏರಿಕೆಯಾಗಿಲ್ಲ:
"ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿದೆ. ದೇಶದಲ್ಲಿ ಉತ್ಪಾದನಾ ಚಟುವಟಿಕೆಯೂ ಏರಿಕೆಯಾಗುತ್ತಿದೆ. ಆದರೆ ಉದ್ಯೋಗ ಸೃಷ್ಟಿ ಪ್ರಮಾಣದಲ್ಲಿ ಮಾತ್ರ ಯಾವುದೇ ಏರಿಕೆ ಕಂಡು ಬಂದಿಲ್ಲ. ಉದ್ಯೋಗ ಸೃಷ್ಟಿ ಸರಿಯಾದ ನಿಟ್ಟಿನಲ್ಲಿ ಆಗುತ್ತಿಲ್ಲ. ಹೀಗಾಗಿ ಪ್ರಸ್ತುತ ಕೆಲಸದ ಹೊರೆಯು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆಯೇ ಬೀಳುತ್ತಿದೆ. ಶಿಫ್ಟ್ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ," ಡಿ ಲಿಮಾ ಹೇಳಿದ್ದಾರೆ.
ಭಾರತದಲ್ಲಿ ಹೇಗಿದೆ ಕೊರೊನಾವೈರಸ್ ಪರಿಸ್ಥಿತಿ:
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿದೆ. ಅದಾಗ್ಯೂ, ದೇಶದಲ್ಲಿ ಒಂದೇ ದಿನ 12,514 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ. ಕಳೆದ 24 ಗಂಟೆಗಳಲ್ಲಿ 12,718 ಸೋಂಕಿತರು ಗುಣಮುಖರಾಗಿದ್ದು, 251 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಈವರೆಗೂ ಒಟ್ಟು 3,42,85,814 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, 3,36,68,560 ಮಂದಿ ಗುಣಮುಖರಾಗಿದ್ದಾರೆ. ಈವರೆಗೂ 4,58,437 ಜನರು ಸೋಂಕಿನಿಂದ ಪ್ರಾಣ ಬಿಟ್ಟಿದ್ದರೆ, 1,58,817 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.


Click it and Unblock the Notifications