ಷೇರುಪೇಟೆಯು ಕಳೆದ ಒಂದು ವಾರದಲ್ಲಿ ಕೊಂಚ ಚೇತರಿಕೆ ಕಂಡಿದೆ. ಈ ವಾರ ಷೇರು ಮಾರುಕಟ್ಟೆ ಕೊಂಚ ಪುಟಿದೆದ್ದಿದೆ. ಷೇರುಪೇಟೆಯಲ್ಲಿ ಲಾಭ ಕಂಡು ಬಂದಿದೆ. ಈ ನಡುವೆ ಟಾಪ್ 10 ಕಂಪನಿಗಳ ಮಾರುಕಟ್ಟೆ ಮೌಲ್ಯ ಹೇಗಿದೆ?, ಎಷ್ಟು ನಷ್ಟ, ಎಷ್ಟು ಲಾಭವಾಗಿದೆ ಎಂದು ತಿಳಿಯೋಣ ಮುಂದೆ ಓದಿ..
ಈ ವಾರದಲ್ಲಿ ಟಾಪ್ 10 ಕಂಪನಿಗಳ ಪೈಕಿ 8 ಸಂಸ್ಥೆಗಳ ಮಾರುಕಟ್ಟೆ ಮೌಲ್ಯವು 42,173.42 ಕೋಟಿ ರೂಪಾಯಿ ಏರಿಕೆ ಕಂಡಿದೆ. ಟಿಸಿಎಸ್, ಐಸಿಐಸಿಐ ಬ್ಯಾಂಕ್, ಇನ್ಪೋಸಿಸ್ ಷೇರುಗಳು ಟಾಪ್ ಗೇನರ್‌ಗಳು ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಸ್ಟಾಕ್‌ಗಳು ಏರಿಕೆಯನ್ನು ಕಂಡಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಹಿಂದೂಸ್ತಾನ್ ಯೂನಿಲಿವರ್ ಸ್ಟಾಕ್ ಭಾರೀ ಇಳಿಕೆಯಾಗಿದೆ.
ಕಳೆದ ವಾರದಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್ 131.56 ಅಂಕ ಅಥವಾ ಶೇಕಡ 0.21ರಷ್ಟು ಕುಸಿದಿದೆ. ಉಕ್ರೇನ್ ಹಾಗೂ ರಷ್ಯಾದ ಯುದ್ಧದ ನಡುವೆ ಹಣದುಬ್ಬರವನ್ನು ನಿಯಂತ್ರಣ ಮಾಡಲು ಜಾಗತಿಕ ಕೇಂದ್ರ ಬ್ಯಾಂಕ್‌ಗಳು ಬಡ್ಡಿದರವನ್ನು ಏರಿಕೆ ಮಾಡಿದೆ. ಈ ನಡುವೆ ಕಚ್ಚಾ ತೈಲ ದರವು ಕೂಡಾ ಏರಿಕೆ ಕಂಡಿದೆ. ಈ ಎಲ್ಲಾ ಬೆಳವಣಿಗೆಯೂ ಷೇರು ಪೇಟೆಯ ಮೇಲೆ ಪರಿಣಾಮವನ್ನು ಉಂಟು ಮಾಡಿದೆ.
ಟಿಸಿಎಸ್ ಮಾರುಕಟ್ಟೆ ಮೌಲ್ಯ ಎಷ್ಟಿದೆ?
ಭಾರತದ ಟಾಪ್ 10 ಕಂಪನಿಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಈ ವಾರ ಲಾಭವನ್ನು ಅನುಭವಿಸಿದೆ. ಈ ಸಂಸ್ಥೆಯ ಷೇರುಗಳು ಹೆಚ್ಚಳವಾಗಿದೆ. ಟಿಸಿಎಸ್ ಮಾರುಕಟ್ಟೆ ಮೌಲ್ಯವು ರೂ 9,403.76 ಕೋಟಿ ಏರಿ ರೂ 12,22,781.79 ಕೋಟಿಗೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
ಕಳೆದ ಕೆಲವು ವಾರಗಳ ಹಿಂದೆ ಟಾಪ್ ಸ್ಥಾನದಲ್ಲಿದ್ದ ರಿಲಯನ್ಸ್ ಸಂಸ್ಥೆ ಷೇರುಗಳು ಈ ವಾರ ಭಾರೀ ಕುಸಿತ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (ಆರ್‌ಐಎಲ್) ಮಾರುಕಟ್ಟೆ ಮೌಲ್ಯವು ರೂ 22,866.5 ಕೋಟಿ ಕುಸಿದು ರೂ 17,57,339.72 ಕೋಟಿಗೆ ತಲುಪಿದೆ. ಅದಾನಿ ಎಂಟರ್‌ಪ್ರೈಸಸ್ ಮಾರುಕಟ್ಟೆ ಮೌಲ್ಯ ರೂ 1,271.1 ಕೋಟಿ ಹೆಚ್ಚಳವಾಗಿ 4,58,263.35 ಕೋಟಿ ರೂಪಾಯಿಗೆ ತಲುಪಿದೆ.
ಇನ್ಫೋಸಿಸ್, ಎಲ್‌ಐಸಿ
ಇನ್ಫೋಸಿಸ್ ಮೌಲ್ಯವು 9,614.89 ಕೋಟಿ ರೂಪಾಯಿ ಏರಿ 6,70,264.99 ಕೋಟಿ ರೂ.ಗೆ ಏರಿದೆ ಮತ್ತು ಜೀವ ವಿಮಾ ನಿಗಮದ (ಎಲ್‌ಐಸಿ) ಮೌಲ್ಯವು ರೂ.4.04 ಟ್ರಿಲಿಯನ್ ಆಗಿದೆ. ಎಚ್‌ಡಿಎಫ್‌ಸಿ ಮಾರುಕಟ್ಟೆ ಮೌಲ್ಯವು 3,415.33 ಕೋಟಿ ರೂಪಾಯಿ ಹೆಚ್ಚಳವಾಗಿ 4,85,234.16 ಕೋಟಿ ರೂಪಾಯಿಗೆ ಏರಿದೆ.
ಐಸಿಐಸಿಐ ಬ್ಯಾಂಕ್, ಎಚ್‌ಯುಎಲ್
ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯವು 9,706.86 ಕೋಟಿ ರೂ ಹೆಚ್ಚಳವಾಗಿ 6,41,898.91 ಕೋಟಿ ರೂ.ಗೆ ಏರಿದೆ. ಈ ಸಂದರ್ಭದಲ್ಲೇ ಹಿಂದೂಸ್ತಾನ್ ಯೂನಿಲಿವರ್ (ಎಚ್‌ಯುಎಲ್) ಮಾರುಕಟ್ಟೆ ಮೌಲ್ಯ ರೂ 4,757.92 ಕೋಟಿ ಕುಸಿದು ರೂ 5,83,462.25 ಕೋಟಿಗೆ ಇಳಿದಿದೆ.
ಎಸ್‌ಬಿಐ, ಭಾರ್ತಿ ಏರ್‌ಟೆಲ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮಾರುಕಟ್ಟೆ ಮೌಲ್ಯವು 1,383.32 ಕೋಟಿ ರೂ ಏರಿ 5,37,841.73 ಕೋಟಿ ರೂ.ಗೆ ಏರಿದೆ. ಹಾಗೆಯೇ ಈ ವಾರದಲ್ಲಿ ಭಾರ್ತಿ ಏರ್‌ಟೆಲ್ ರೂ.5,869.21 ಕೋಟಿ ಹೆಚ್ಚಳವಾಗಿ ರೂ.4,65,642.49 ಕೋಟಿಗೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಮೌಲ್ಯ 1,508.95 ಕೋಟಿ ರೂಪಾಯಿ ಏರಿಕೆಯಾಗಿ 8,99,489.20 ಕೋಟಿ ರೂಪಾಯಿಗೆ ಜಿಗಿದಿದೆ.
ಟಾಪ್-10 ಸಂಸ್ಥೆಗಳು ಯಾವುದು?
ಟಾಪ್-10 ಸಂಸ್ಥೆಗಳ ಶ್ರೇಯಾಂಕದಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಮುಂದುವರೆದಿದೆ. ನಂತರದ ಸ್ಥಾನದಲ್ಲಿ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಚ್‌ಯುಎಲ್, ಎಲ್‌ಐಸಿ, ಎಸ್‌ಬಿಐ, ಎಚ್‌ಡಿಎಫ್‌ಸಿ, ಭಾರ್ತಿ ಏರ್‌ಟೆಲ್, ಅದಾನಿ ಎಂಟರ್‌ಪ್ರೈಸಸ್ ಇದೆ.


Click it and Unblock the Notifications