ನವದೆಹಲಿ, ನವೆಂಬರ್ 11: ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ತನ್ನ ಅಕ್ಟೋಬರ್ ತಿಂಗಳ ಉತ್ಪಾದನಾ ವರದಿ ನೀಡಿದೆ. ವರದಿ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಸಂಸ್ಥೆಯ ಉತ್ಪಾದನೆ ಶೇ 26ರಷ್ಟು ಕುಸಿತ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಸೆಮಿಕಂಡೆಕ್ಟರ್ ಚಿಪ್ಸ್ ಕೊರತೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಷೇರುಪೇಟೆಗೆ ವಿವರ ನೀಡಿರುವ ಸಂಸ್ಥೆ ಒಟ್ಟು 1,34,779 ವಾಹನಗಳನ್ನು ಉತ್ಪಾದಿಸಲಾಗಿದೆ ಎಂದು ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,82, 490 ವಾಹನಗಳನ್ನು ಉತ್ಪಾದಿಸಲಾಗಿತ್ತು. ಅಕ್ಟೋಬರ್ 2021ರಲ್ಲಿ ಉತ್ಪಾದನೆ ಪ್ರಮಾಣ ಕುಸಿತಕ್ಕೆ ಸೆಮಿಕಂಡೆಕ್ಟರ್ ಚಿಪ್ ಅಭಾವ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳ ಕೊರತೆ ಎಂದು ಸಂಸ್ಥೆ ಹೇಳಿದೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚು ಕುಂಠಿತವಾಗದಂತೆ ನೋಡಿಕೊಂಡಿದ್ದ ಮಾರುತಿ ಸುಜುಕಿಗೆ ಈಗ ಚಿಪ್ಸ್ ಕೊರತೆ ಕಾಡುತ್ತಿದೆ.
ಉತ್ಪಾದನೆ ಎಷ್ಟಾಗಿದೆ?
ಪ್ರಯಾಣಿಕರ ವಾಹನಗಳ ಉತ್ಪಾದನೆ ಅಕ್ಟೋಬರ್ ತಿಂಗಳಲ್ಲಿ 1,30, 763 ಯೂನಿಟ್ ಆಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 1,96, 942 ಯೂನಿಟ್ ಉತ್ಪಾದನೆ ಕಂಡಿತ್ತು. ಆಲ್ಟೋ ಹಾಗೂ ಎಸ್ ಪ್ರೆಸ್ಸೋ ಮಾಡೆಲ್ 23, 632 ಉತ್ಪಾದನೆಯಾಗಿದ್ದರೆ, 2020ರ ಅಕ್ಟೋಬರ್ ತಿಂಗಳಲ್ಲಿ 31, 779 ಉತ್ಪಾದನೆಯಾಗಿತ್ತು. ಇನ್ನು ವ್ಯಾಗನ್ ಆರ್, ಸೆಲೆರಿಯೋ, ಇಗ್ನಿಸ್, ಬಲೆನೋ, ಡಿಜೈರ್ ಎಲ್ಲದರ ಉತ್ಪಾದನೆ 1, 02, 666 ಯೂನಿಟ್ ನಿಂದ 62, 824 ಯೂನಿ ಟ್ ಗೆ ಕುಸಿದಿದೆ.
ಸತತ ಉತ್ಪಾದನೆ ಪ್ರಮಾಣ ಕುಸಿತ
ಎಕೋ ವ್ಯಾನ್ 10, 440 ಯೂನಿಟ್ ಉತ್ಪಾದನೆ ಕಂಡಿದ್ದರೆ, 2020ರ ಅಕ್ಟೋಬರ್ ತಿಂಗಳಲ್ಲಿ 13, 342 ಯೂನಿಟ್ ಉತ್ಪಾದಿಸಲಾಗಿತ್ತು. ಲಘು ವಾಣಿಜ್ಯ ಉದ್ದೇಶಿತ ವಾಹನಗಳಾದ ಸೂಪರ್ ಕ್ಯಾರಿ 4,016 ವಾಹನ ಉತ್ಪಾದನೆಯಾಗಿದೆ. 2020ರಲ್ಲಿ ಇದೇ ಅವಧಿಯಲ್ಲಿ 5,548 ಯೂನಿಟ್ ಉತ್ಪಾದನೆಯಾಗಿತ್ತು. ಸೆಪ್ಟೆಂಬರ್ ತಿಂಗಳಲ್ಲಿ ಶೇ 51ರಷ್ಟು (81, 278 ಯೂನಿಟ್) ಉತ್ಪಾದನೆ ಕುಸಿತವಾಗಿತ್ತು.
ಆಯ್ದ ವಾಹನಗಳ ಬೆಲೆ ಏರಿಕೆ
2020-21 ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಪ್ರಯಾಣಿಕ ವಾಹನ ರಫ್ತು ಶೇ. 75ರಷ್ಟು ಇಳಿಕೆಯಾಗಿತ್ತು. ಜೊತೆಗೆ ಬಿಎಸ್ 6 ಮಾನ್ಯತೆ ಸಿಗದ ಹಿನ್ನೆಲೆಯಲ್ಲಿ ಡೀಸೆಲ್ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿರಲಿಲ್ಲ. ಡೀಸೆಲ್ ಕಾರುಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲು ಕೂಡಾ ಮುಂದಾಗಿದೆ. ಜೊತೆಗೆ, ಮಾರುತಿ ಸುಜುಕಿಯ ಆಯ್ದ ವಾಹನಗಳ ಎಕ್ಸ್ ಷೋರೂಂ ಬೆಲೆ ಶೇ 1.9ರಷ್ಟು ಏರಿಕೆ ಮಾಡಲಾಗಿದೆ ಎಂದು ಸೆಪ್ಟೆಂಬರ್ ತಿಂಗಳಲ್ಲೇ ಷೇರುಪೇಟೆಗೆ ಸಂಸ್ಥೆ ತಿಳಿಸಿದೆ. ಜನವರಿ ತಿಂಗಳಲ್ಲಿ ಹಲವು ಮಾಡೆಲ್ ಮೇಲಿನ ಬೆಲೆ 34,000 ರುಪಾಯಿಯಷ್ಟು ಏರಿಕೆ ಮಾಡಲಾಗಿತ್ತು. ನಂತರ ಆಯ್ದ ವಾಹನಗಳ ಎಕ್ಸ್ ಶೋರೂಂ ಮೇಲಿನ ಬೆಲೆ ಶೇ 1.6ರಷ್ಟು ಹೆಚ್ಚಳ ಕಂಡಿತ್ತು.
ಬೆಲೆ ಏರಿಕೆ ಏಕೆ?
ಕಚ್ಚಾವಸ್ತು ಕೊರತೆ, ಸೆಮಿಕಂಡೆಕ್ಟರ್ ಚಿಪ್, ಬಿಡಿ ಭಾಗಗಳ ಕೊರತೆ, ಉತ್ಪದನಾ ವೆಚ್ಚ ಹೆಚ್ಚಳವಾಗಿದ್ದು, ಬೇಡಿಕೆಗೆ ತಕ್ಕ ಮಾರಾಟವಾಗದ ಕಾರಣ ಬೆಲೆ ಏರಿಕೆ ಮಾಡಲಾಗಿದೆ. ಸೆಲೆರಿಯೊ ಹೊರತುಪಡಿಸಿ ಎಲ್ಲಾ ಮಾದರಿ ವಾಹನಗಳ ಬೆಲೆ ಏರಿಕೆ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ''ಉತ್ಪಾದನಾ ವೆಚ್ಚ ನಿರ್ವಹಣಾ ಹೊರೆ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿದೆ'' ಎಂದು ಎಂಎಸ್ಐ( ಮಾರ್ಕೆಟಿಂಗ್) ಕಾರ್ಯಕಾರಿ ನಿರ್ದೇಶಕ ಶಶಾಂಕ್ ವಾಸ್ತವ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications