ಕೋವಿಡ್-19 ಎರಡನೇ ಅಲೆಯಿಂದಾಗಿ ಅನೇಕ ರಾಜ್ಯಗಳು ಹೆಚ್ಚಿನ ನಿರ್ಬಂಧಗಳಿಗೆ ಒಳಪಟ್ಟ ಹಿನ್ನಲೆಯಲ್ಲಿ ಪ್ರಮುಖ ಕಾರು ತಯಾರಕರು ಮೇ ತಿಂಗಳಿನಲ್ಲಿ ಕಡಿಮೆ ಮಾರಾಟವನ್ನು ವರದಿ ಮಾಡಿದ್ದವು. ಅದೇ ಜೂನ್ ತಿಂಗಳಿನಲ್ಲಿ ಕೊಂಚ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿತ್ತು. ಆದರೆ ಇದೀಗ ಜುಲೈ ಮಾರಾಟದ ವರದಿ ಹೊರಬಿದ್ದಿದ್ದು, ಅಗ್ರ ಕಾರು ತಯಾರಕರ ಬ್ರಾಂಡ್‌ಗಳ ಮಾರಾಟದಲ್ಲಿ ಜಿಗಿತ ಕಂಡುಬಂದಿದೆ.
ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಈಗ ಮತ್ತೆ ಟ್ರ್ಯಾಕ್‌ಗೆ ಮರಳಿವೆ ಎಂದು ವರದಿ ಸ್ಪಷ್ಟವಾಗಿ ತೋರಿಸುತ್ತಿದೆ. ಜುಲೈನಲ್ಲಿ ಈ ಮೂರು ಕಾರು ತಯಾರಕರ ವಿವಿಧ ಮಾಡೆಲ್‌ಗಳು ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
ಮಾರುತಿ ಸುಜುಕಿ
ಮಾರುತಿ, ಒಂದು ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರಾಟದ ಸ್ಪರ್ಧೆಯನ್ನು ಯಾವಾಗಲೂ ತಾನು ಮುಂದು ಎಂದು ಮತ್ತೊಮ್ಮೆ ಸಾಭೀತು ಮಾಡಿದೆ. ಈ ಹಿಂದೆ ಏಪ್ರಿಲ್‌ನಲ್ಲಿ 1,59,691 ಯೂನಿಟ್‌ಗಳಿಂದ ಮೇ ತಿಂಗಳಲ್ಲಿ ಕೇವಲ 46,555 ಯೂನಿಟ್‌ಗಳಿಗೆ ಕುಸಿದಿತ್ತು. ಆದರೆ ಜೂನ್ ನಲ್ಲಿ ಮತ್ತೆ ಟ್ರ್ಯಾಕ್ ಗೆ ಬಂದಿತು.
ಈ ವರ್ಷದ ಜೂನ್‌ನಲ್ಲಿ ಮಾರುತಿ 1,08,064 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಜುಲೈನಲ್ಲಿ, ಬ್ರಾಂಡ್ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ರಫ್ತು ಸೇರಿದಂತೆ ಒಟ್ಟು 1,62,462 ಕಾರುಗಳನ್ನು ಮಾರಾಟ ಮಾಡಿದೆ. ಇದು ಜೂನ್ 2021 ಕ್ಕೆ ಹೋಲಿಸಿದರೆ 50.33% ಬೆಳವಣಿಗೆಯಾಗಿದೆ. ಮಾರಾಟವಾದ 1,62,462 ಯೂನಿಟ್‌ಗಳ ಪೈಕಿ 1,33,732 ಪ್ಯಾಸೆಂಜರ್ ವಾಹನಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಿದೆ. ಇನ್ನು ಜುಲೈನಲ್ಲಿ ಒಟ್ಟು 21,224 ಯುನಿಟ್‌ಗಳನ್ನು ರಫ್ತು ಮಾಡಿದೆ.
ಮಾರುತಿಯ ಯಾವ ಕಾರು, ಎಷ್ಟು ಮಾರಾಟ?
ದೇಶೀಯ ಮಾರಾಟದಲ್ಲಿ ಮಾರುತಿ ಸುಜುಕಿಯ 19,685 ಮಿನಿ ಪ್ಯಾಸೆಂಜರ್ ವಾಹನಗಳು (ಆಲ್ಟೊ, ಎಸ್-ಪ್ರೆಸ್ಸೊ), 70,268 ಕಾಂಪ್ಯಾಕ್ಟ್ ಪ್ಯಾಸೆಂಜರ್ ವಾಹನಗಳನ್ನು (ವ್ಯಾಗನ್ಆರ್, ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಾಲೆನೋ, ಡಿಜೈರ್, ಟೂರ್ ಎಸ್), 1450 ಮಧ್ಯಮ ಗಾತ್ರದ ಪ್ರಯಾಣಿಕ ವಾಹನಗಳನ್ನು (ಸಿಯಾಜ್) ಮಾರಾಟ ಮಾಡಿದೆ. ಇದರ ಜೊತೆಗೆ 32,272 ಪ್ಯಾಸೆಂಜರ್ ಯುಟಿಲಿಟಿ ವಾಹನಗಳು (ಎರ್ಟಿಗಾ, ಎಸ್-ಕ್ರಾಸ್, ವಿಟಾರಾ ಬ್ರೀಜಾ, ಎಕ್ಸ್‌ಎಲ್ 6) ಮತ್ತು 10,057 ಪ್ಯಾಸೆಂಜರ್ ವ್ಯಾನ್‌ಗಳು (ಇಕೋ) ಮಾರಾಟವಾಗಿವೆ.
ಹ್ಯುಂಡೈ
ಹ್ಯುಂಡೈ, ಮೇ ತಿಂಗಳಲ್ಲಿ ಕಡಿಮೆ ಮಾರಾಟದ ಹೊರತಾಗಿಯೂ ದೇಶದ ಒಟ್ಟು ಮಾರಾಟದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಈ ವರ್ಷದ ಮೇ ತಿಂಗಳಲ್ಲಿ ಹುಂಡೈ 30,703 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಜೂನ್ ನಲ್ಲಿ 40,496 ಯುನಿಟ್ ಗಳನ್ನು ಮಾರಾಟ ಮಾಡಿದೆ. ಈ ವರ್ಷದ ಜುಲೈ ತಿಂಗಳಲ್ಲಿ ಬ್ರಾಂಡ್ ಒಟ್ಟು 48,042 ಯುನಿಟ್‌ಗಳ ಮಾರಾಟವನ್ನು ಸಾಧಿಸಿದೆ.
ಇತ್ತೀಚೆಗೆ ಬಿಡುಗಡೆಯಾದ ಹ್ಯುಂಡೈ ಅಲ್ಕಾಜಾರ್ ಒಟ್ಟು ಮಾರಾಟದಲ್ಲಿ ಪ್ರಮುಖ ಉತ್ತೇಜನ ನೀಡಿದೆ. ಈ ಪ್ರೀಮಿಯಂ ಏಳು ಆಸನಗಳ ಎಸ್‌ಯುವಿಯ ಹೊರತಾಗಿ, ಹ್ಯುಂಡೈ ಕ್ರೆಟಾ, ಹ್ಯುಂಡೈ ವೆನ್ಯೂ ಮತ್ತು ಹ್ಯುಂಡೈ ಐ 20 ಕಾರುಗಳು ಪ್ರಮುಖ ಪಾತ್ರವಹಿಸುತ್ತವೆ.
ಟಾಟಾ
ಒಟ್ಟು ಕಾರುಗಳ ಮಾರಾಟದ ವಿಚಾರದಲ್ಲಿ ಟಾಟಾ ದೇಶದಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಟಾಟಾ ಬ್ರಾಂಡ್ ಮೇ ತಿಂಗಳಲ್ಲಿ 15,181 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಈ ಅಂಕಿ ಅಂಶವು ಜೂನ್ ನಲ್ಲಿ 24,110 ಕ್ಕೆ ಏರಿತು. ಜುಲೈನಲ್ಲಿ 30,185 ಪ್ರಯಾಣಿಕ ವಾಹನಗಳ ಮಾರಾಟವನ್ನು ಗಳಿಸಿತು. ಇದು ತಿಂಗಳಿಂದ ತಿಂಗಳಿಗೆ 25.19% ಬೆಳವಣಿಗೆಯಾಗಿದೆ. ಇದಲ್ಲದೇ, ಜುಲೈನಲ್ಲಿ ಒಟ್ಟು 23,848 ವಾಣಿಜ್ಯ ವಾಹನಗಳನ್ನು ಮಾರಾಟ ಮಾಡಿದೆ, ಅದರಲ್ಲಿ 2052 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ.


Click it and Unblock the Notifications