ನವದೆಹಲಿ, ಮೇ 10: ಟಾಟಾ ಗ್ರೂಪ್ ಏರ್‌ಲೈನ್ ಹಾಗೂ ಏರ್ ಇಂಡಿಯಾ ಎಕ್ಸ್ ಪ್ರೆಸ್'ನ ವಿಲೀನ ಪ್ರಕ್ರಿಯೆಯ ನಡುವೆ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಇನ್ನೊಂದೆಡೆ 200ಕ್ಕೂ ಹೆಚ್ಚು ಸಿಬ್ಬಂದಿಗಳು "ಸಾಮೂಹಿಕ ಅನಾರೋಗ್ಯ ರಜೆ" ತೆರಳಿದ್ದರಿಂದ ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮ ಕಳೆದ ಮೂರು ದಿನಗಳಿಂದ ಅನೇಕ ವಿಮಾನಗಳ ಹಾರಾಟ ರದ್ದುಗೊಂಡಿದೆ.
ಈ ಎಲ್ಲಾ ಬೆಳವಣಿಗೆಗೆಳ ನಡುವೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಯು ತನ್ನ ಕನಿಷ್ಠ 30 ಕ್ಯಾಬಿನ್ ಸಿಬ್ಬಂದಿಗೆ ಗುರುವಾರ ಪಿಂಕ್ ಸ್ಲಿಪ್ ನೀಡಿದೆ. 250 ಕ್ಕೂ ಹೆಚ್ಚು ದೇಶೀಯ ಮತ್ತು 120 ಅಂತರರಾಷ್ಟ್ರೀಯ ಮಾರ್ಗಗಳನ್ನು ಒಳಗೊಂಡಂತೆ ಪ್ರತಿದಿನ 350 ಮತ್ತು 400 ವಿಮಾನಗಳ ನಡುವೆ ಕಾರ್ಯನಿರ್ವಹಿಸುವ ಏರ್‌ಲೈನ್, ಮೇ 13 ರವರೆಗೆ ದಿನಕ್ಕೆ ಸರಿಸುಮಾರು 40 ವಿಮಾನಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

ಮಂಗಳವಾರ ಮಧ್ಯಾಹ್ನದಿಂದ, ಏರ್ ಇಂಡಿಯಾ ಎಕ್ಸ್ ಪ್ರೆಸ್ 300 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿಗಳು ಅನಾರೋಗ್ಯ ನೆಪ ನೀಡಿ ರಜೆ ಮೇಲೆ ತೆರಳಿ ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಮಾಡಿಕೊಂಡಿದ್ದರು. ಇದರ ಪರಿಣಾಮ ವಿಮಾನ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾಗಿತ್ತು. ಬುಧವಾರ ಸಂಜೆಯ ವೇಳೆಗೆ 90 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಅನಾರೋಗ್ಯವನ್ನು ಕಾರಣ ನೀಡಿ ದೀಢೀರ್ ರಜೆ ಮಾಡಿದ ಸಿಬ್ಬಂದಿಗಳಿಗೆ ವಿಮಾನಯಾನ ಸಂಸ್ಥೆಯು ವಜಾ ಪತ್ರ ರವಾನಿಸಿದೆ. ಇದಲ್ಲದೇ ಸಂಸ್ಥೆಯು ಮತ್ತಷ್ಟು ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆಯ ಹೊಸ ಉದ್ಯೋಗ ನಿಯಮಗಳ ಬಗ್ಗೆ ಅನೇಕ ಉದ್ಯೋಗಿಗಳಿಗೆ ಅಸಮಾಧಾನ ಇದೆ. ಜೊತೆಗೆ ಸಿಬ್ಬಂದಿಯೊಳಗೆ ತಾರತಮ್ಯತೆ ಮಾಡಲಾಗುತ್ತಿದೆ ಎಂಬ ಅಸಮಾಧಾನವೂ ಹಲವರಿಗಿದೆ. ಹೀಗಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿಗಳು ಮತ್ತು ಆಡಳಿತದ ನಡುವಿನ ವಿವಾದ ಉಲ್ಬಣಗೊಂಡಿದೆ. ಇನ್ನು ವಿಮಾನಗಳ ಹಾರಾಟ ರದ್ದತಿಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಯಿಂದ ವರದಿ ಕೇಳಿದ್ದು ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ವಿಮಾನಯಾನ ಸಂಸ್ಥೆಗೆ ಸೂಚಿಸಿದೆ.
ವಿಮಾನಗಳ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರು ಬುಕ್ ಮಾಡಿದ ಫ್ಲೈಟ್ ರದ್ದಾಗಿದ್ದರೆ ಟಿಕೆಟ್ ಹಣವನ್ನು ಯಾವುದೇ ಶುಲ್ಕವಿಲ್ಲದೇ ಸಂಪೂರ್ಣವಾಗಿ ರೀಫಂಡ್ ಮಾಡಲಾಗುತ್ತದೆ ಅಥವಾ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ತಮ್ಮ ಹಾರಾಟವನ್ನು ಮರುಹೊಂದಿಸಬಹುದು ಎಂದು ಏರ್‌ಲೈನ್ ಹೇಳಿದೆ.


Click it and Unblock the Notifications