ಇತ್ತೀಚೆಗೆ ಕರ್ನಾಟಕದಲ್ಲಿ ಬೆಲೆ ಏರಿಕೆಗಳು ಹೆಚ್ಚಾಗಿವೆ. ಒಂದಾದ ಮೇಲೊಂದರ ಅಗತ್ಯತೆಗಳ ಬೆಲೆ ಏರುತ್ತಲೇ ಇವೆ. ಆದಾಯ ಕಡಿಮೆ ಖರ್ಚು ಜಾಸ್ತಿ ಎಂಬ ಒದ್ದಾಟದಲ್ಲೇ ಜನರು ಜೀವನ ಸಾಗಿಸ್ತಿದ್ದಾರೆ. ವಿದ್ಯುತ್ ಬಿಲ್ ದರ, ಹಾಲಿನ ದರ ಬಳಿಕ ಡೀಸೆಲ್ ದರ ಹೆಚ್ಚಳವಾಯ್ತು. ಇದರಿಂದ ರಾಜ್ಯದ ಜನತೆಗೆ ಅಸಮಾಧಾನವಿದೆ. ಆದರೆ ಲಾರಿ ಮಾಲೀಕರು ಡೀಸೆಲ್ ದರ ಏರಿಕೆ ವಿರುದ್ಧ ಅಸಮಾಧಾನ ಎನ್ನುವುದಕ್ಕಿಂತ, ಕೆಂಡಾಮಂಡಲವಾಗಿದ್ದಾರೆ ಎನ್ನಬಹುದು. ಏಕೆಂದರೆ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಡೀಸೆಲ್ ಬೆಲೆ ಏರಿಕೆಯ ವಿರುದ್ಧವಾಗಿ ಟ್ರಕ್ ಮಾಲೀಕರು ಮತ್ತು ಏಜೆಂಟ್‌ಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯ ಮುನ್ನೋಟ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ರಂದು ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿಗೆ ಮುಷ್ಕರಕ್ಕೆ ಕರೆಯಲಾಗಿದೆ.

ಪ್ರತಿಭಟನೆಯ ತೀವ್ರತೆ ಹೇಗಿರುತ್ತದೆ..?
ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್‌ಗಳ ಒಕ್ಕೂಟ ಈ ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದೆ. FKSLOA ಸಂಸ್ಥೆಯ ಅಧ್ಯಕ್ಷರಾದ ಜಿ.ಆರ್. ಷಣ್ಮುಗಪ್ಪ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಅವರು ಹೇಳಿರುವ ಪ್ರಕಾರ, ರಾಜ್ಯದ ಒಳಗೂ ಹಾಗೂ ಹೊರಗೂ ಸಂಚರಿಸುವ ತೀವ್ರ ಪರಿಣಾಮ ಬೀರುವಂತಹ ಈ ಮುಷ್ಕರದಲ್ಲಿ ಸುಮಾರು 5 ಲಕ್ಷ ಟ್ರಕ್‌ಗಳು ಹಾಗೂ 9 ಲಕ್ಷಕ್ಕೂ ಹೆಚ್ಚು ವಾಹನಗಳು ಭಾಗವಹಿಸಲಿವೆ. ಇದರಿಂದ ಸಾಕಷ್ಟು ಕೆಲಸಗಳು ಬಾಕಿ ಉಳಿಯುತ್ತವೆ. ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುವುದರಿಂದ ಆಮದು, ರಫ್ತು ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.
ಬೆಲೆ ಏರಿಕೆಯ ಪರಿಣಾಮ ಏನಾಗಿದೆ..?
ಇನ್ನು ಕಳೆದ ವರ್ಷ..ಅಂದರೆ 2024ರ ಜೂನ್‌ನಲ್ಲಿ ರಾಜ್ಯ ಸರ್ಕಾರ ಡೀಸೆಲ್ ದರವನ್ನು 3 ರೂಪಾಯಿ ಹೆಚ್ಚಿಸಿತ್ತು. ಈಗ ಮತ್ತೆ ಯಾವುದೇ ಮುನ್ನೋಟವಿಲ್ಲದೆ ಮತ್ತೆ 2 ರೂಪಾಯಿ ಹೆಚ್ಚಿಸಲಾಗಿದೆ. ಅಂದರೆ ಒಟ್ಟು 5 ರೂಪಾಯಿಯಷ್ಟು ಡೀಸೆಲ್ ದರ ಏರಿಕೆಯಿಂದ ಟ್ರಕ್ ಮಾಲೀಕರು ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದಾರೆ. ಷಣ್ಮುಗಪ್ಪ ಅವರ ವಿವರಗಳ ಪ್ರಕಾರ, ಈ ಏರಿಕೆಯಿಂದ ನಿರ್ಮಾಣ ಸಾಮಗ್ರಿಗಳ ಸಾಗಣೆ, ಇಂಧನ ಟ್ಯಾಂಕರ್‌ಗಳ ಚಲನೆ, ವಿಮಾನ ನಿಲ್ದಾಣ ಸಂಪರ್ಕ ವಹಿಸುವ ಕ್ಯಾಬ್‌ಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ.
ಹೊರ ರಾಜ್ಯಗಳ ಮೇಲೆ ಪರಿಣಾಮ:
ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಮಾಡಿದರೆ, ಕರ್ನಾಟಕದಲ್ಲಿ ಡೀಸೆಲ್ ಬೆಲೆ ಮೊದಲು ಕಡಿಮೆ ಇತ್ತು. ಇದರಿಂದಾಗಿ ಟ್ಯಾಕ್ಸ್ ಕಡಿಮೆ ಇದ್ದ ಕಾರಣ ಪರರಾಜ್ಯಗಳ ವಾಹನಗಳು ಇಲ್ಲಿ ಡೀಸೆಲ್ ತುಂಬಿಸುತ್ತಿದ್ದವು. ಇದರಿಂದ ಕರ್ನಾಟಕ ಸರ್ಕಾರಕ್ಕೆ ತೆರಿಗೆಯ ರೂಪದಲ್ಲಿ ಸಾಕಷ್ಟು ಆದಾಯ ಬರುತ್ತಿತ್ತು. ಈಗ ಡೀಸೆಲ್ ಬೆಲೆ ಏರಿಕೆಯಿಂದ ಆ ವರ್ಗದ ವಾಹನಗಳು ಕರ್ನಾಟಕದಿಂದ ಡೀಸೆಲ್ ಖರೀದಿಸಲು ಹಿಂದೇಟು ಹಾಕುವ ಸಾಧ್ಯತೆ ಇದೆ.
ಪ್ರತಿಭಟನೆ ಹಿಂದಿರುವ ಬೇಡಿಕೆಗಳೇನು..?
- ಡೀಸೆಲ್ ದರ ಇಳಿಕೆಯಾಗಬೇಕು ಎನ್ನುವುದು ಈ ಪ್ರತಿಭಟನೆಯ ಮೊದಲ ಬೇಡಿಕೆ
- ಟೋಲ್ ಸಂಗ್ರಹವೂ ಹೆಚ್ಚಾಗಿದ್ದು ಅದನ್ನು ರದ್ದುಪಡಿಸಬೇಕು ಎಂದು ಒತ್ತಾಯ
-ಗಡಿ ಪ್ರದೇಶದ ಆರ್‌ಟಿಒ ಚೆಕ್‌ಪೋಸ್ಟ್‌ಗಳನ್ನು ತೆಗೆದುಹಾಕಬೇಕು ಎಂದು ಆಗ್ರಹ
- ಫಿಟ್‌ನೆಸ್ ಪ್ರಮಾಣಪತ್ರ ನವೀಕರಣ ಶುಲ್ಕ ₹15,000 ಜಾರಿಯನ್ನೆ ನಿಲ್ಲಿಸಬೇಕು
- ಬೆಂಗಳೂರು ಪ್ರವೇಶ ನಿರ್ಬಂಧ ನಿಯಮಗಳನ್ನು ಸಡಿಲಿಸಬೇಕು
ಸರ್ಕಾರಕ್ಕೆ ನೀಡಿರುವ ಅಂತಿಮ ಗಡುವು:
ಪ್ರತಿಭಟನೆ ನಡೆಸುತ್ತಿರುವ ಒಕ್ಕೂಟ ಸರ್ಕಾರಕ್ಕೆ ಏಪ್ರಿಲ್ 15ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಗಡುವು ನೀಡಿದೆ. ಏಪ್ರಿಲ್ 15ರ ಅಂದು ಮುಷ್ಕರ ಪ್ರಾರಂಭವಾಗಲಿದೆ. ಸರ್ಕಾರ ಬೆಲೆ ಪರಿಷ್ಕರಣೆ ಅಥವಾ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ರಾಜ್ಯದ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಅಸ್ತವ್ಯಸ್ತವಾಗುವ ಭೀತಿ ಇದೆ.
ಒಟ್ಟಿನಲ್ಲಿ ಡೀಸೆಲ್ ದರ ಏರಿಕೆ ವಿಚಾರಕೇವಲ ಲಾರಿ ಮಾಲೀಕರಷ್ಟೇ ಅಲ್ಲದೆ, ರಾಜ್ಯದ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುವಂತಹ ಮಹತ್ವದ ವಿಷಯವಾಗಿದೆ. ಈ ಮುಷ್ಕರ ಬೃಹತ್ ಪ್ರಮಾಣದಲ್ಲಿದ್ದು, ಸರ್ಕಾರಿ ತಂತ್ರಜ್ಞಾನ, ಸರಕು ಸಾಗಣೆ, ನಿತ್ಯೋಪಯೋಗಿ ವಸ್ತುಗಳ ಪೂರೈಕೆ, ಇಂಧನ ತಲುಪುವಿಕೆ ಎಲ್ಲದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಸರ್ಕಾರ ಈ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಾಲೋಚನೆಯ ಮೂಲಕ ಬಗೆಹರಿಸದಿದ್ದರೆ, ಜನಜೀವನವೇ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ.


Click it and Unblock the Notifications