ಕಳೆದ 2025ರಲ್ಲಿ ಕರ್ನಾಟಕ ಸರ್ಕಾರ (Karnataka Govt) ಉದ್ಯೋಗಸ್ಥ ಮಹಿಳೆಯ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿತ್ತು. ಅದೇನೆಂದರೆ ಋತುಚಕ್ರದ ರಜೆ (Menstrual Leave). ಹೌದು, ಸರ್ಕಾರಿ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಿ, ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಈ ಮಧ್ಯೆ ವಿದ್ಯಾರ್ಥಿನಿಯರು (Students) ಕೂಡಾ ರಜೆಗಾಗಿ ಒತ್ತಾಯಿಸುತ್ತಿದೆ. ಅಲ್ಲದೇ ಸರ್ಕಾರ ಕೂಡಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಂತಿಮ ವರದಿಗಾಗಿ ಕಾಯಲಾಗುತ್ತಿದೆ.

ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್!
ಕಾಲೇಜು ವಿದ್ಯಾರ್ಥಿನಿಯರಿಗೆ ಶೀಘ್ರದಲ್ಲೇ ಶುಭ ಸುದ್ದಿಯೊಂದು ಹೊರಬೀಳುವ ಸಾಧ್ಯತೆ ಇದೆ. ಉದ್ಯೋಗಸ್ಥ ಮಹಿಳೆಯರಿಗೆ ವರ್ಷದಲ್ಲಿ 12 ದಿನಗಳ ವೇತನ ಸಹಿತ ಮುಟ್ಟಿನ ರಜೆ ಘೋಷಿಸಿದ ಬೆನ್ನಲ್ಲೇ, ಇದೀಗ ರಾಜ್ಯ ಸರ್ಕಾರ ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೂ ಈ ಸೌಲಭ್ಯ ವಿಸ್ತರಿಸಲು ಮುಂದಾಗಿದೆ. ಮುಖ್ಯಮಂತ್ರಿಗಳಿಂದ ಅನುಮೋದನೆಯೊಂದು ಸಿಕ್ಕರೆ, ಶೀಘ್ರದಲ್ಲೇ ಈ ಬಗ್ಗೆ ನಿರ್ಧಾರ ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಈಗಾಗಲೇ ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಮೂಲಕ ಮಹತ್ವದ ಆದೇಶ ತೆಗೆದುಕೊಂಡಿದೆ. ಆದ್ರೆ ಇದೀಗ ಈ ನಿರ್ಧಾರವನ್ನು ವಿದ್ಯಾರ್ಥಿನಿಯರಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಇದು ಕಾಲೇಜು ಹೋಗುವ ವಿದ್ಯಾರ್ಥಿನಿಯರಿಗೆ ಬಹು ಅನುಕೂಲವಾಗಲಿದೆ ಎಂದು ಆಶಿಸಲಾಗಿದೆ. ಸದ್ಯ ಈ ಬಗ್ಗೆ ರಾಜ್ಯ ಮಟ್ಟದಲ್ಲಿ ಭಾರೀ ಚರ್ಚೆಗಳು ನಡೆಯಿತ್ತಿದೆ.
ಪ್ರಸ್ತುತ ನಿಯಮ ಏನು?
ಅಸ್ತಿತ್ವದಲ್ಲಿರುವ ನೀತಿಯ ಪ್ರಕಾರ, ಉದ್ಯೋಗಸ್ಥ ಮಹಿಳೆಯರು ವರ್ಷಕ್ಕೆ 12 ದಿನಗಳ ವೇತನ ಸಹಿತ ಮುಟ್ಟಿನ ರಜೆಗೆ ಅರ್ಹರಾಗಿದ್ದಾರೆ. ಅಂದರೆ ಪ್ರತಿ ತಿಂಗಳಿಗೆ ಒಂದು ದಿನ ಋತುಚಕ್ರದ ಸಮಯದಲ್ಲಿ ರಜೆ ಮಾಡಬಹುದು. ಅಲ್ಲದೇ ಈ ದಿನ ವೇತನ ಕೂಡಾ ನೀಡಲಾಗುತ್ತದೆ. ಈ ನಿಯಮವು ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೂ ಅನ್ವಯವಾಗುತ್ತದೆ. ಆದರೆ, ಈ ಆದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಯರನ್ನು ಸೇರಿಸದ ಕಾರಣ, ವಿದ್ಯಾರ್ಥಿನಿಯರಿಗೂ ಇದೇ ಸೌಲಭ್ಯ ನೀಡಬೇಕೆಂಬ ಬೇಡಿಕೆ ವ್ಯಾಪಕವಾಗಿದೆ.
ಇದೀಗ ಈ ಮನವಿಗಳನ್ನು ಪರಿಶೀಲಿಸಿ, ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು, ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಾಗಿದೆ. "ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ಸಿಗುತ್ತಿರುವಾಗ ಕಾಲೇಜು ವಿದ್ಯಾರ್ಥಿನಿಯರನ್ನು ಏಕೆ ಹೊರಗಿಡಬೇಕು ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಇದರ ಆದೇಶದ ಬಗ್ಗೆ ಯೋಚಿಸುತ್ತಿದೆ" ಎಂದು ಅವರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ವಿಸ್ತರಿಸಲು ತಾವು ವೈಯಕ್ತಿಕವಾಗಿ ಸಿದ್ಧರಾಗಿರುವುದಾಗಿ ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. "ಇನ್ನು ಮುಖ್ಯಮಂತ್ರಿಗಳು ಅನುಮೋದನೆ ನೀಡಿದರೆ, ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ಘೋಷಿಸಲು ನಾವು ಸಿದ್ಧರಿದ್ದೇವೆ," ಎಂದು ಅವರು ಹೇಳಿದ್ದು, ಅಂತಿಮ ನಿರ್ಧಾರ ಬಹಳ ಬೇಗ ಹೊರಬೀಳಲಿದೆ ಎಂಬ ಸುಳಿವನ್ನೂ ಈ ಮೂಲಕ ನೀಡಿದ್ದಾರೆ.


Click it and Unblock the Notifications