ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆಯು ಭವಿಷ್ಯದ ಪ್ರಮುಖ ಸವಾಲು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ. ಕಳೆದ ವರ್ಷದ ಆಗಸ್ಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹತ್ತು ಬ್ಯಾಂಕ್ ಗಳ ವಿಲೀನದ ಬಗ್ಗೆ ಘೊಷಣೆ ಮಾಡಿದ್ದಾರೆ.
ರಜನೀಶ್ ಕುಮಾರ್ ಮಾತನಾಡಿ, ವಿಲೀನ ಪ್ರಕ್ರಿಯೆಯಲ್ಲಿ ಇರುವ ಬ್ಯಾಂಕ್ ಗಳು ಮಾಹಿತಿ ತಂತ್ರಜ್ಞಾನದ ಏಕೀಕರಣದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.
ವಿಲೀನ ಪ್ರಕ್ರಿಯೆ ಎಂಬುದು ಸಾರ್ವಜನಿಕ ಬ್ಯಾಂಕ್ ಗಳ ಮುಂದೆ ಇರುವ ಭವಿಷ್ಯದ ಸವಾಲು. ಮಾಹಿತಿ ತಂತ್ರಜ್ಞಾನದ ವಿಲೀನವನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

2017ರ ಏಪ್ರಿಲ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಳಗೆ ಸ್ಟೇಟ್ ಬ್ಯಾಂಕ್ ಬಿಕನೇರ್ ಅಂಡ್ ಜೈಪುರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು- ಈ ಐದು ಬ್ಯಾಂಕ್ ಗಳು ವಿಲೀನವಾಗಿವೆ.
ಇದೀಗ ಹೊಸ ವಿಲೀನ ಕೂಡ ಪ್ರಸ್ತಾವ ಮಾಡಲಾಗಿದೆ. ಆ ಪ್ರಕಾರ: ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಸೇರಿ ದೇಶದ ಎರಡನೇ ಅತಿ ದೊಡ್ಡ ಸಾಲ ನೀಡುವ ಬ್ಯಾಂಕ್ ಆಗಲಿದೆ. ಕೆನರಾಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಖ್ ವಿಲೀನ ಆಗಲಿದೆ.
ಯೂನಿಯನ್ ಬ್ಯಾಂಕ್ ಇನ್ನು ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಜತೆ ಸೇರಲಿದೆ. ಅದೇ ರೀತಿ ಇಂಡಿಯನ್ ಬ್ಯಾಂಕ್ ಹಾಗೂ ಅಲಹಾಬಾದ್ ಬ್ಯಾಂಕ್ ಒಂದಾಗಲಿವೆ. 2017ರಲ್ಲಿ 27ರಷ್ಟಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಸಂಖ್ಯೆ 12ಕ್ಕೆ ಇಳಿಯಲಿದೆ.


Click it and Unblock the Notifications