ಇತ್ತೀಚೆಗೆ ಉದ್ಯೋಗಿಗಳ ಕೆಲಸಕ್ಕೆ ಹೊಡಲಿ ಬೀಳುತ್ತಿರುವ ಸುದ್ದಿಗಳು ಹರಿದಾಡುತ್ತಲೇ ಇವೆ. ದೈತ್ಯ ಕಂಪನಿಗಳ ಲೇಆಫ್ ಸಿಸ್ಟಮ್ ಉದ್ಯೋಗಿಗಳ ಹೊಟ್ಟೆ ಮೇಲೆ ಬರೆ ಎಳೆಯುತ್ತಿವೆ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಸಾಕಷ್ಟು ಲೇಆಫ್ ಸುದ್ದಿಗಳು ಹೊರಬಿದ್ದಿದೆ. ಈಗ ಮೈಕ್ರೋಸಾಫ್ಟ್ ಕೂಡ ಮತ್ತೆ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸಿದ್ದು, ಲೇಆಫ್ ಪದ್ದತಿಗೆ ಸದ್ಯಕ್ಕೆ ಬ್ರೇಕ್ ಇಲ್ಲವೇನೋ ಎಂಬಂತೆ ಭಾಸವಾಗುತ್ತಿದೆ.

ಅಂದಹಾಗೆ, ದೈತ್ಯ ಸಾಫ್ಟ್‌ವೇರ್ ಕಂಪನಿಯಾದ ಮೈಕ್ರೋಸಾಫ್ಟ್‌ನಲ್ಲಿ 100 ಅಲ್ಲ, 200 ಅಲ್ಲ..ಬರೋಬ್ಬರಿ 6000 ಜನ ಉದ್ಯೋಗಿಗಳನ್ನು ಕಂಪನಿ ಕೈಬಿಟ್ಟಿದೆ. ಉದ್ಯೋಗಿಗಳ ಕೈಬಿಟ್ಟಿರುವ ಕಂಪನಿ, ಹೊಸ ತಂತ್ರಜ್ಞಾನದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದೆ ಎಂದು ಮೈಕ್ರೋಸಾಫ್ಟ್ ಮಂಗಳವಾರ ತಿಳಿಸಿದೆ.
ಅಮೆರಿಕಾದ 1,985 ಉದ್ಯೋಗಿಗಳು ಲೇಆಫ್!
ಇನ್ನು ಈ ಕಂಪನಿ ಒಟ್ಟು ಉದ್ಯೋಗದ ನಷ್ಟದ ಪ್ರಮಾಣವನ್ನು ಕೂಡ ಬಹಿರಂಗಪಡಿಸಲಿಲ್ಲ. ಆದರೆ ಈಗ ಕಡಿತಗೊಂಡಿರುವ 6000 ಉದ್ಯೋಗಿಗಳಲ್ಲಿ, 1,985 ಮಂದಿ ಅಮೆರಿಕಾದ ವಾಷಿಂಗ್ಟನ್‌ನಲ್ಲಿ ಕೆಲಸ ಮಾಡುತ್ತಿದ್ದವರು ಎನ್ನಲಾಗಿದೆ.
ಕಂಪನಿಯ ಸ್ಪಷ್ಟನೆ ಏನು?
ಇನ್ನು ಮೈಕ್ರೋಸಾಫ್ಟ್ ತನ್ನ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಅಂದರೆ ಐಟಿ ಮಾರುಕಟ್ಟೆಯಲ್ಲಿ ನಾವು ಸ್ಪರ್ಧಾತ್ಮಕವಾಗಿ ಮುಂದುವರೆಯಬೇಕು. ಇದಕ್ಕಾಗಿ ಕಂಪನಿಯ ಗಾತ್ರ ಮತ್ತು ರಚನೆಯಲ್ಲಿ ಈ ಬದಲಾವಣೆ ಅಗತ್ಯವಾಗಿದೆ ಎಂದು ತಿಳಿಸಿದೆ. ಅಲ್ಲದೇ ಕಂಪನಿ ಮುಂದುವರಿಯುತ್ತಿರುವ ಎಲ್ಲ ಬದಲಾವಣೆಗಳು ಸಂಸ್ಥೆಯ ಪರಿಣಾಮಕಾರಿತ್ವ ಹೆಚ್ಚಿಸುವತ್ತ ಮತ್ತು ದೀರ್ಘಕಾಲೀನ ಬೆಳವಣಿಗೆಗೆ ನೆರವಾಗುವ ಉದ್ದೇಶವನ್ನು ಹೊಂದಿವೆ ಎಂದು ಹೇಳಲಾಗಿದೆ.
AI ಲಾಭಕ್ಕೆ ಸಿಬ್ಬಂದಿಯ ಬಲಿ?
ಇನ್ನು ಇತ್ತೀಚೆಗೆ AI ತಂತ್ರಜ್ಞಾನ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಇದೂ ಕೂಡ ಕೆಲಸಗಳ ಕಡಿತಕ್ಕೆ ಕಾರಣವಾಗಿರಬಹುದು. ಈ ತಂತ್ರಜ್ಞಾನದ ಬಳಕೆ ಹೆಚ್ಚಿಸುವ ಉದ್ದೇಶದಿಂದಲೂ, ಮೈಕ್ರೋಸಾಫ್ಟ್ ಕಂಪನಿ ತನ್ನೆಲ್ಲಾ ಉತ್ಪನ್ನಗಳಲ್ಲಿ ಸ್ವಯಂಚಾಲಿತ, ಕೃತಕ ಬುದ್ಧಿಮತ್ತೆ ಸಾಮರ್ಥ್ಯವನ್ನು ಅಳವಡಿಸುತ್ತಿದೆ.
ಮೈಕ್ರೋಸಾಫ್ಟ್ ತನ್ನ 50ನೇ ವರ್ಷಾಚರಣೆಯನ್ನಾಚರಿಸುತ್ತಿರುವಾಗಲೇ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆ ಮಾಡುತ್ತಿರುವ ಈ ನಡೆ, ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಕ್ರಾಂತಿಯ ಸಂಕೇತವಾಗಿದೆ. AI ಹಾಗೂ ಕ್ಲೌಡ್‌ಗೆ ಕಂಪನಿಯ ಬೃಹತ್ ಬಂಡವಾಳ ಹೂಡಿಕೆಯಿಂದಾಗಿ, ಸಂಪ್ರದಾಯಬದ್ಧ ಕೆಲಸಗಳು ಕ್ಷೀಣವಾಗುತ್ತಿರುವುದು ಸ್ಪಷ್ಟವಾಗಿದೆ.
ಈ ಕಾರ್ಯಕ್ಷಮತೆ ಹೆಚ್ಚಿಸಬಹುದು, ಆದರೆ ಇದರಿಂದ ಸಾವಿರಾರು ಕುಟುಂಬಗಳು ನಿರೀಕ್ಷೆಗೂ ಹೊರಗಿನ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಮೈಕ್ರೋಸಾಫ್ಟ್‌ನಂತಹ ದೊಡ್ಡ ಕಂಪನಿಯೂ AI ದಡದತ್ತ ಸಾಗುತ್ತಿರುವಾಗ, ಇಡೀ ಉದ್ಯೋಗ ಮಾರುಕಟ್ಟೆಯು ಹೇಗೆ ರೂಪುಗೊಳ್ಳಲಿದೆ ಎಂಬುದೇ ಇದೀಗ ಮುಖ್ಯವಾದ ಚರ್ಚೆಯ ವಿಷಯ.
ಇವು ಅತ್ಯಂತ ದೊಡ್ಡ ಕಂಪನಿಗಳ ಕೆಲಸದಿಂದ ತೆಗೆದುಹಾಕುವ ನಿರ್ಧಾರಗಳ ಆಯ್ದ ಉಲ್ಲೇಖಗಳು. ವಿವಿಧ ತಂತ್ರಜ್ಞಾನ, ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಈ ತೀವ್ರ ಉದ್ಯೋಗ ಕಡಿತಗಳು ನಡೆದಿದ್ದು, ಖರ್ಚು ಕಡಿತ, ಹೊಸ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಣ ಮತ್ತು ವ್ಯವಹಾರ ಪುನರ್‌ರಚನೆಯ ಭಾಗವಾಗಿ ಕಾಣಿಸುತ್ತಿವೆ.
ಈ ಎಲ್ಲಾ ಕಂಪನಿಗಳ ನಿರ್ಧಾರಗಳು ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳು, ಕೃತಕ ಬುದ್ಧಿಮತ್ತೆ (AI) ನಂತಹ ತಂತ್ರಜ್ಞಾನಗಳ ಪ್ರಭಾವ ಮತ್ತು ಜಾಗತಿಕ ಆರ್ಥಿಕ ಆವಶ್ಯಕತೆಗಳಿಗೆ ಸ್ಪಂದನೆ ಎಂದೇ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉದ್ಯೋಗ ಕಡಿತದ ಈ ಪ್ರವೃತ್ತಿ ಮುಂದಿನ ತಿಂಗಳುಗಳಲ್ಲಿಯೂ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಉದ್ಯೋಗಾಕಾಂಕ್ಷಿಗಳಿಗೆ ಇದು ಎಚ್ಚರಿಕೆಯ ಸೂಚನೆಯಂತಿದೆ.
ಸರಕಾರಗಳು ಮತ್ತು ಉದ್ಯಮಗಳನ್ನು ನಿಯಂತ್ರಿಸುವ ಸಂಸ್ಥೆಗಳು ಈ ಪರಿಸ್ಥಿತಿಗೆ ಸ್ಪಂದಿಸಬೇಕಿದೆ ಎಂಬ ಒತ್ತಡವೂ ಇದೇ ಸಂದರ್ಭದಲ್ಲಿ ಹೆಚ್ಚಾಗಿದೆ. ಬದಲಾವಣೆಯಾದ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂಬ ನಂಬಿಕೆಯಿದ್ದರೂ, ಅವುಗಳಿಗೆ ತಯಾರಾಗುವುದು ಪ್ರತಿ ಉದ್ಯೋಗಿಯ ಹೊಣೆಗಾರಿಕೆಯಾಗುತ್ತಿದೆ.


Click it and Unblock the Notifications