ಭಾರತದ ಐಟಿ ಇಂಡಸ್ಟ್ರೀಯಲ್ಲಿ ಅತೀ ದೊಡ್ಡ ನಾಯಕತ್ವ ಬದಲಾವಣೆ ಮಾಡಲಾಗಿದೆ. ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ತನ್ನ ಹುದ್ದೆಗೆ ಶನಿವಾರ ರಾಜೀನಾಮೆ ನೀಡಿದ್ದು, ಅದೇ ದಿನವೇ ಇನ್ನೊಂದು ಪ್ರಮುಖ ಸಂಸ್ಥೆಯಾದ ಟೆಕ್ ಮಹೀಂದ್ರಾದ ಎಂಡಿ ಹಾಗೂ ಸಿಇಒ ಆಗಿ ನೇಮಕಾತಿಯಾಗಿದ್ದಾರೆ. ಡಿಸೆಂಬರ್ 19, 2023ರಂದು ಟೆಕ್ ಮಹೀಂದ್ರಾದ ಎಂಡಿ, ಸಿಇಒ ಸಿಪಿ ಗುರ್ನಾನಿ ನಿವೃತ್ತಿ ಹೊಂದಲ್ಲಿದ್ದಾರೆ. ಆ ಸ್ಥಾನಕ್ಕೆ ಮೋಹಿತ್ ಜೋಶಿ ನೇಮಿಸಲಾಗಿದೆ.
"ಮಹೀಂದ್ರಾ & ಮಹೀಂದ್ರಾ ಟೆಕ್ನಾಲಜಿ ಕನ್‌ಸಲ್ಟಿಂಗ್ ಮಾಜಿ ಇನ್ಫೋಸಿಸ್ ಅಧ್ಯಕ್ಷರನ್ನು ಮ್ಯಾನೆಜಿಂಗ್ ಡೈರೆಕ್ಟರ್ (ಎಂಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ (ಸಿಇಒ) ಆಗಿ ಮುಂದಿನ 5 ವರ್ಷಗಳ ಅವಧಿಗೆ ನೇಮಿಸುತ್ತದೆ. ಡಿಸೆಂಬರ್ 20, 2023ರಿಂದ ಡಿಸೆಂಬರ್ 19, 2028ರವರೆಗೆ ಅವರ ಅಧಿಕಾರವಧಿ ಇರಲಿದೆ," ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಮೋಹಿತ್ ಜೋಶಿ ಜೂನ್ ತಿಂಗಳವರೆಗೆ ಇನ್ಫೋಸಿಸ್‌ನಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಜೂನ್ 9, 2023ರಂದು ಮೋಹಿತ್ ಜೋಶಿಗೆ ಇನ್ಫೋಸಿಸ್ ಸಂಸ್ಥೆಯಲ್ಲಿ ಕೊನೆಯ ದಿನವಾಗಲಿದೆ ಎಂದು ಇನ್ಫೋಸಿಸ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾಹಿತಿ ನೀಡಿದೆ. ಐಟಿ ದೈತ್ಯ ಸಂಸ್ಥೆಯಾದ ಇನ್ಪೋಸಿಸ್ ಮೋಹಿತ್ ಜೋಶಿಯನ್ನು ತಮ್ಮ ಸಂಸ್ಥೆಯಲ್ಲೇ ಉಳಿಸಿಕೊಳ್ಳಲು ಮನವೊಲಿಸಿದೆ. ಆದರೆ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.
ಆದರೆ ಮೋಹಿತ್ ಜೋಶಿ ಇನ್ನಷ್ಟು ಉತ್ತಮ ಅವಕಾಶದ ಹುಡುಕಾಟದಲ್ಲಿ ಟೆಕ್ ಮಹೀಂದ್ರಾ ಆಫರ್ ಅನ್ನು ಒಪ್ಪಿಕೊಂಡಿದ್ದಾರೆ. ಮಾಜಿ ಇನ್ಫೋಸಿಸ್ ಅಧ್ಯಕ್ಷ ರವಿ ಕುಮಾರ್ ಕಾಗ್ನಿಜೆಂಟ್‌ನ ಸಿಇಒ ಆಗಿ ನೇಮಕಾತಿ ಹೊಂದಿದ ಸುದ್ದಿಯ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಕಂಡು ಬಂದಿದೆ. ಈಗ ಮೋಹಿತ್ ಜೋಶಿ ಇನ್ಫೋಸಿಸ್ ತೊರೆದ ಬಳಿಕ ಪ್ರಮುಖ ಹುದ್ದೆಗಳ ನಿರ್ವಹಣೆಗೆ ಇನ್ಫೋಸಿಸ್ ಪ್ರಬುದ್ಧರ ಹುಡುಕಾಟ ಮಾಡಬೇಕಾಗಿದೆ.
ಜೋಶಿ ಅವರು ಇನ್ಫೋಸಿಸ್‌ನಲ್ಲಿ ಹಣಕಾಸು ಸೇವೆಗಳು ಮತ್ತು ಆರೋಗ್ಯ ರಕ್ಷಣೆ, ಜೀವ ವಿಜ್ಞಾನ ಸೇರಿದಂತೆ ವರ್ಟಿಕಲ್‌ಗಳನ್ನು ನಿರ್ವಹಣೆ ಮಾಡುತ್ತಿದ್ದರು. ಜೋಶಿ ಅವರು ಅದರ ಸಾಫ್ಟ್‌ವೇರ್ ವ್ಯವಹಾರದ ಅಡಿಯಲ್ಲಿ ಫಿನಾಕಲ್, ಇನ್ಫೋಸಿಸ್‌ನ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮತ್ತು ಎಐ/ ಆಟೋಮೇಷನ್ ಪೋರ್ಟ್‌ಫೋಲಿಯೊವನ್ನು ಮುನ್ನಡೆಸುತ್ತಿದ್ದರು.


Click it and Unblock the Notifications