ಕುಟುಂಬಗಳು, ಟ್ರಸ್ಟ್ ಗಳ ಬಳಿ ಉಪಯೋಗಿಸದೆ ಹಾಗೇ ಇರುವ ಚಿನ್ನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಪ್ರಯತ್ನ ಆರಂಭವಾಗಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಅದರದೇ ಸುದ್ದಿ ಇದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ ಬಿಐ) ಗೋಲ್ಡ್ ಮಾನೆಟೈಸೇಷನ್ ಸ್ಕೀಮ್ ಅಡಿಯಲ್ಲಿ (ಜಿಎಂಎಸ್) 13,212 ಕೇಜಿ ಸಂಗ್ರಹ ಮಾಡಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಈ ಯೋಜನೆ ಅಡಿ 3,973 ಕೇಜಿ ಸಂಗ್ರಹಿಸಲಾಗಿದೆ. ಈ ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರಂಭಿಸಿದೆ. ಕಳೆದ ಆರ್ಥಿಕ ವರ್ಷದ ಚಿನ್ನದ ಸಂಗ್ರಹವೂ ಸೇರಿ ಒಟ್ಟು ಲೆಕ್ಕ 13 ಸಾವಿರ ಕೇಜಿ ದಾಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2015ರ ನವೆಂಬರ್ ನಲ್ಲಿ ಜಿಎಂಎಸ್ ಗೆ ಚಾಲನೆ ನೀಡಿದ್ದಾರೆ.
ಭಾರತೀಯ ಕುಟುಂಬಗಳ ಬಳಿ 20,000 ಟನ್ ಗೂ ಹೆಚ್ಚು ಚಿನ್ನ
ಭಾರತದ ಆಮದು ಬಿಲ್ ಕಡಿಮೆ ಮಾಡಿಕೊಳ್ಳಬೇಕು ಹಾಗೂ ಕುಟುಂಬಗಳು ಹಾಗೂ ಟ್ರಸ್ಟ್ ಗಳ ಬಳಿ ಇರುವ ಚಿನ್ನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದು ಇದರ ಉದ್ದೇಶ. ಭಾರತೀಯ ಕುಟುಂಬಗಳ ಬಳಿ 20,000 ಟನ್ ಗೂ ಹೆಚ್ಚು ಚಿನ್ನ ಬಳಕೆ ಮಾಡದೆ ಹಾಗೇ ಇದೆ. ಇಷ್ಟು ದೊಡ್ಡ ಪ್ರಮಾಣದ ಚಿನ್ನವನ್ನು ಬಳಸಿಕೊಳ್ಳಬೇಕು ಎಂದು ನಿರ್ಧರಿಸಲಾಯಿತು. ಜತೆಗೆ ಆಮದು ಪ್ರಮಾಣವನ್ನು ಇಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಆರ್ಥಿಕ ವರ್ಷ 20ರ ಬಜೆಟ್ ನಲ್ಲಿ ಚಿನ್ನದ ಮೇಲೆ 12.5 ಪರ್ಸೆಂಟ್ ಆಮದು ಸುಂಕ ಹಾಕಲಾಯಿತು. ಚಾಲ್ತಿ ಖಾತೆ ವ್ಯತ್ಯಾಸವನ್ನು ಕಡಿಮೆ ಮಾಡಿಕೊಳ್ಳಲು ಚಿನ್ನದ ಆಮದು ಕಡಿಮೆ ಮಾಡಿಕೊಳ್ಳಲಾಯಿತು.
ಸವರನ್ ಗೋಲ್ಡ್ ಬಾಂಡ್ ಪರಿಚಯ
ಇದರ ಜತೆಗೆ ಸರ್ಕಾರದಿಂದ ಸವರನ್ ಗೋಲ್ಡ್ ಬಾಂಡ್ ಗಳನ್ನೂ ಪರಿಚಯಿಸಲಾಗಿದೆ. ಸರ್ಕಾರದ ಸೆಕ್ಯೂರಿಟೀಸ್ ಗಳನ್ನು ಚಿನ್ನದ ಗ್ರಾಮ್ ಗಳ ಮುಖಬೆಲೆಯಲ್ಲಿ ನೀಡಲಾಗುತ್ತದೆ. ಫಿಸಿಕಲ್ ಆಗಿ ಚಿನ್ನವನ್ನು ಇಟ್ಟುಕೊಳ್ಳುವ ಬದಲಿಗೆ ಹೂಡಿಕೆದಾರರು ಸವರನ್ ಬಾಂಡ್ ಮೇಲೆ ಹಣ ಹೂಡಬಹುದು. ಹೀಗೆ ಮಾಡುವುದರಿಂದ ಚಿನ್ನವನ್ನು ಸಂಗ್ರಹಿಸಿಡುವ ಖರ್ಚು ಉಳಿಯುತ್ತದೆ. ಜತೆಗೆ ಮೇಕಿಂಗ್ ಚಾರ್ಜ್, ಶುದ್ಧತೆ ಇತ್ಯಾದಿ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಕೂಡ ಇಲ್ಲ. ಸವರನ್ ಗೋಲ್ಡ್ ಬಾಂಡ್ ಮೂಲಕವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 647 ಕೇಜಿ ಚಿನ್ನವನ್ನು ಸಂಗ್ರಹಿಸಿದೆ.
ಆಮದು ಪ್ರಮಾಣ ಶೇಕಡಾ 99.9ರಷ್ಟು ಕಡಿಮೆ
ಈ ಮಧ್ಯೆ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಬೆಲೆ ಬಾಳುವ ರತ್ನಗಳು ಮತ್ತು ಆಭರಣ ವಲಯಕ್ಕೆ ಹೊಡೆತ ಬಿದ್ದಿದೆ. ವಿಶ್ವದ ಅತಿ ದೊಡ್ಡ ಚಿನ್ನದ ಆಮದು ರಾಷ್ಟ್ರವಾದ ಭಾರತ ಏಪ್ರಿಲ್ ತಿಂಗಳಿಂದ ಈಚೆಗೆ ಯಾವುದೇ ಚಿನ್ನವನ್ನು ಆಮದು ಮಾಡಿಕೊಂಡಿಲ್ಲ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಆಮದು ಪ್ರಮಾಣ ಶೇಕಡಾ 99.9ರಷ್ಟು ಕಡಿಮೆಯಾಗಿದೆ. ಇದು ಮೂರು ದಶಕದಲ್ಲೇ ಕನಿಷ್ಠ ಪ್ರಮಾಣವಾಗಿದೆ.


Click it and Unblock the Notifications