ದೇಶದಲ್ಲಿರುವ ಪ್ರಮುಖ ಟಯರ್ ಉತ್ಪಾದನ ಸಂಸ್ಥೆಯಾದ ಎಂಆರ್‌ಎಫ್ (ಮದ್ರಾಸ್ ರಬ್ಬರ್ ಫಾಕ್ಟರಿ) ಲಿಮಿಡೆಟ್ ಸ್ಟಾಕ್ ಮಾರುಕಟ್ಟೆಯಲ್ಲಿ ಸಾರ್ವಕಾಲಿಕವಾಗಿ ಏರಿಕೆಯನ್ನು ಕಂಡಿದೆ. ಸ್ಟಾಕ್ ಸುಮಾರು ಶೇಕಡ 1ರಷ್ಟು ಹೆಚ್ಚಳವನ್ನು ಕಾಣುವ ಮೂಲಕ ದಾಖಲೆಯನ್ನು ಬರೆದಿದೆ. ಈ ಮೂಲಕ ಎಂಆರ್‌ಎಫ್ ಸ್ಟಾಕ್ ದೇಶದಲ್ಲಿ ಸೆನ್ಸೆಕ್ಸ್‌ನಲ್ಲಿ ಒಂದು ಸ್ಟಾಕ್‌ಗೆ 1 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಮೊದಲ ಸ್ಟಾಕ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಮಂಗಳವಾರ (ಜೂನ್ 13) ವಹಿವಾಟಿನ ಆರಂಭದಲ್ಲಿ ಏರಿಕೆಯೊಂದಿಗೆ ವಹಿವಾಟಿಗಿಳಿದ ಎಂಆರ್‌ಎಫ್ ಸ್ಟಾಕ್ ಬಳಿಕ ಶೇಕಡ 1.48ರಷ್ಟು ಜಿಗಿತ ಕಂಡಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆಯು 52 ವಾರಗಳ ಗರಿಷ್ಠ ಮಟ್ಟ 1,00,439.95 ರೂಪಾಯಿಗೆ ತಲುಪಿದೆ. ಇನ್ನು ಬಿಎಸ್‌ಇಯಲ್ಲಿ ದಾಖಲೆಯನ್ನು ಬರೆದ ಎಂಆರ್‌ಎಫ್ ಸ್ಟಾಕ್ ಬೆಲೆಯು ಪ್ರತಿ ಷೇರಿಗೆ 1,00,300 ರೂಪಾಯಿಗೆ ಜಿಗಿತ ಕಂಡಿದೆ.

ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಏರಿಕೆಯನ್ನು ಕಂಡ ಎಂಆರ್‌ಎಫ್ (ಮದ್ರಾಸ್ ರಬ್ಬರ್ ಫಾಕ್ಟರಿ) ಲಿಮಿಡೆಟ್ ಸ್ಟಾಕ್ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ಶೇಕಡ 46ಕ್ಕಿಂತಲೂ ಅಧಿಕ ಏರಿಕೆಯನ್ನು ಕಂಡಿದೆ. ಕಳೆದ ಬಾರಿ ಮೇ 8ರಂದು ಎಂಆರ್‌ಎಫ್ ಸ್ಟಾಕ್ ಸಾರ್ವಕಾಲಿಕ ಏರಿಕೆಯನ್ನು ಕಂಡಿತ್ತು. ಪ್ರತಿ ಷೇರು ದರವು 99,933 ರೂಪಾಯಿಗೆ ತಲುಪಿತ್ತು. ತ್ರೈಮಾಸಿಕ ಹಾಗೂ ವಾರ್ಷಿಕ ಹಣಕಾಸು ವರದಿಯ ಬಳಿಕ ಈ ಬೆಳವಣಿಗೆ ಕಂಡು ಬಂದಿತ್ತು.
2021ರ ಜನವರಿ ತಿಂಗಳಿನಲ್ಲಿ ಸ್ಟಾಕ್ ಸುಮಾರು 90,000 ರೂಪಾಯಿಗೂ ಅಧಿಕ ಬೆಲೆಯೊಂದಿಗೆ ವಹಿವಾಟನ್ನು ಅಂತ್ಯಗೊಳಿಸಿತ್ತ. ಅದಾದ ಬಳಿಕ ಸುಮಾರು ಎರಡುವರೆ ವರ್ಷದ ಬಳಿಕ ಎಂಆರ್‌ಎಫ್ ಪ್ರತಿ ಷೇರು ಬೆಲೆ 1 ಲಕ್ಷಕ್ಕೂ ಅಧಿಕವಾಗುವ ಮೂಲಕ ತನ್ನ ಈ ದಾಖಲೆಯನ್ನು ಮುರಿದಿದೆ. ಎಂಆರ್‌ಎಫ್ 2012ರ ಫೆಬ್ರವರಿಯಲ್ಲಿ ಪ್ರತಿ ಷೇರು ಮೌಲ್ಯ 10 ಸಾವಿರ ರೂಪಾಯಿಯನ್ನು ದಾಟಿದೆ.
ಬೋನಸ್ ಷೇರು ಅಥವಾ ಷೇರು ವಿಭಜನೆ ಮಾಡದ ಸಂಸ್ಥೆ
ಇನ್ನು ಆಸಕ್ತಿದಾಯಕ ವಿಚಾರವೆಂದರೆ ಎಂಆರ್‌ಎಫ್ ಎಂದಿಗೂ ಕೂಡಾ ತನ್ನ ಷೇರುಗಳ ಸಂಖ್ಯೆ ಹೆಚ್ಚಳವಾಗಲು, ಅಥವಾ ಷೇರು ಅಧಿಕವಾಗಲು ಬೋನಸ್ ಷೇರು (ಸ್ಟಾಕ್ ಹೋಲ್ಡರ್‌ಗಳಿಗೆ ಷೇರನ್ನು ಬೋನಸ್ ರೂಪದಲ್ಲಿ ನೀಡುವುದು) ಅಥವಾ ಷೇರು ವಿಭಜನೆ ಅಥವಾ stock split (ಒಂದು ಷೇರನ್ನು ಎರಡು ಷೇರಾಗಿ ವಿಭಜನೆಯನ್ನು ಮಾಡುವುದು. ಈ ಮೂಲಕ ಷೇರು ಹೆಚ್ಚಳ ಮಾಡುವುದು. ಆದರೆ ಮಾರುಕಟ್ಟೆ ಮೌಲ್ಯ ಹಾಗೆಯೇ ಇರುತ್ತದೆ) ಮಾಡಿಲ್ಲ.
ಹಣಕಾಸು ವರ್ಷ 2022-23ರ ಅಂತಿಮ ಡಿವಿಡೆಂಡ್ ಅನ್ನು ಈಗಾಗಲೇ ಎಂಆರ್‌ಎಫ್ ಸಂಸ್ಥೆಯು ಘೋಷಣೆ ಮಾಡಿದೆ. ಕಂಪನಿಯು ಮೇ 3 ರಂದು 2022-23ಕ್ಕೆ 10 ರೂಪಾಯಿಯ ಪ್ರತಿ ಷೇರಿಗೆ 169 ರೂಪಾಯಿ (ಶೇ 1690) ಅಂತಿಮ ಲಾಭಾಂಶವನ್ನು ಘೋಷಣೆ ಮಾಡಿದೆ.
ಎಂಆರ್‌ಎಫ್ ಮೊದಲು ಹಣಕಾಸು ವರ್ಷ 2023ಕ್ಕಾಗಿ 3 ರೂಪಾಯಿಯ ಎರಡು ಮಧ್ಯಂತರ ಡಿವಿಡೆಂಡ್ ಅನ್ನು ಘೋಷಣೆ ಮಾಡಿದೆ, ಪಾವತಿ ಮಾಡಿದೆ. ಹಣಕಾಸು ವರ್ಷ 2023ರಲ್ಲಿನ ಒಟ್ಟು ಲಾಭಾಂಶ ಪಾವತಿಯು ಮಾರ್ಚ್ 31ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಷೇರಿಗೆ 175 (ಶೇ 1,750) ರೂಪಾಯಿ ಆಗಿದೆ.
ತ್ರೈಮಾಸಿಕ, ವಾರ್ಷಿಕ ನಿವ್ವಳ ಆದಾಯ
ಎಂಆರ್‌ಎಫ್ (ಮದ್ರಾಸ್ ರಬ್ಬರ್ ಫಾಕ್ಟರಿ) ಲಿಮಿಡೆಟ್ ಹಣಕಾಸು ವರ್ಷ 2023ರ ಮಾರ್ಚ್ ತ್ರೈಮಾಸಿಕದಲ್ಲಿ 410.7 ಕೋಟಿ ರೂಪಾಯಿಯ ನಿವ್ವಳ ಲಾಭವನ್ನು ಹೊಂದಿದೆ. ಹಿಂದಿನ ವರ್ಷದ ಇದೇ ಅವಧಿಯ ನಿವ್ವಳ ಆದಾಯವು 157 ಕೋಟಿ ರೂಪಾಯಿ ಆಗಿದೆ. ಅದಕ್ಕೆ ಹೋಲಿಕೆ ಮಾಡಿದಾಗ ಈ ವರ್ಷವು ಆದಾಯವು ಎರಡು ಪಟ್ಟಿ ಜಿಗಿತವನ್ನು ಕಂಡಿದೆ.
ಕಾರ್ಯಾಚರಣೆಯ ಆದಾಯವು ಮಾರ್ಚ್ ತ್ರೈಮಾಸಿಕದಲ್ಲಿ 5,200.3 ಕೋಟಿ ರೂಪಾಯಿಯಿಂದ 5,725.4 ಕೋಟಿ ರೂಪಾಯಿಗಳಿಗೆ ಶೇಕಡ 10.1ರಷ್ಟು ಏರಿಕೆಯಾಗಿದೆ. ಅದರ ಕಾರ್ಯಾಚರಣೆಯ ಲಾಭವು ವರ್ಷದ ಹಿಂದಿನ 527.6 ಕೋಟಿ ರೂಪಾಯಿಗೆ ಹೋಲಿಸಿದರೆ ತ್ರೈಮಾಸಿಕದಲ್ಲಿ 843.1 ಕೋಟಿ ರೂಪಾಯಿಗೆ ಅಂದರೆ ವರ್ಷದಲ್ಲಿ ಶೇಕಡ 59.8 ರಷ್ಟು ಏರಿಕೆಯಾಗಿದೆ.
ಎಂಆರ್‌ಎಫ್‌ನ ಮಾರ್ಜಿನ್‌ಗಳು ಹಣಕಾಸು ವರ್ಷ 2022ರ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 10.2ರಿಂದ ಈ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡ 14.7ಕ್ಕೆ ಸುಧಾರಣೆ ಕಂಡಿದೆ. ಎಂಆರ್‌ಎಫ್ ಷೇರುಗಳು ಬೆಳಗ್ಗೆ 10.43ಕ್ಕೆ ಬಿಎಸ್‌ಇಯಲ್ಲಿ ಶೇ.1.07ರಷ್ಟು ಹೆಚ್ಚಾಗಿ 1,00,000 ರೂಪಾಯಿಯಂತೆ ವಹಿವಾಟು ನಡೆಸುತ್ತಿವೆ.


Click it and Unblock the Notifications