ಕರ್ನಾಟಕದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಮನೆ ಮಾತಾಗಿವೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಗಳಾಗಿವೆ. ಕೆಲವರು ಗೃಹಲಕ್ಷ್ಮಿ ಹಣವನ್ನು ಕೂಡಿಸಿ ಮನೆಗೆ ಪ್ರಯೋಜನಕಾರಿಯಾಗುವ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಆದರೆ ಇತ್ತ ಪುರುಷರಿಗೆ ಮಾತ್ರ ಕರ್ನಾಟಕ ಸರ್ಕಾರ ಏನೂ ಕೊಟ್ಟಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಡಿಮ್ಯಾಂಡ್ ಹೊಸ ಚರ್ಚೆ ಹುಟ್ಟುಹಾಕಿದೆ. ಹೊಸ ಚರ್ಚೆ ಎನ್ನುವುದಕ್ಕಿಂತ ಒಂದು ವಿವಾದಾತ್ಮಕ ವಿಚಾರ ಎನ್ನಬಹುದು.

ಹೌದು, ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ ಅವರು, ಮಹಿಳೆಯರಿಗೆ ಹೇಗೆ ಗ್ಯಾರಂಟಿ ಯೋಜನೆಗಳು ಸಿಗುತ್ತವೋ ಹಾಗೆಯೇ ಪುರುಷರಿಗೆ ಉಚಿತವಾಗಿ ಮದ್ಯ ನೀಡಬೇಕು ಎಂಬ ಪ್ರಸ್ತಾವನೆ ಮೂಲಕ ಮನವಿ ಮಾಡಿದ್ದಾರೆ. ಅಂದರೆ ಮಹಿಳೆಯರಿಗೆ ಒದಗಿಸಲಾಗುತ್ತಿರುವ, ಗೃಹಲಕ್ಷ್ಮಿ ಯೋಜನೆಯ ₹2,000 ಮಾಸಿಕ ಸಹಾಯಧನ, ಉಚಿತ ವಿದ್ಯುತ್, ಉಚಿತ ಬಸ್ ಸೇವೆಗಳಂತಹ ಯೋಜನೆಗಳನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಕಡಿಮೆ ಆದಾಯದ ವರ್ಗಕ್ಕೆ ಸೇರಿದ ಪುರುಷರು ಮದ್ಯ ಸೇವನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ತೆರಿಗೆ ಒತ್ತಡವಿಲ್ಲದೆ, ಉಚಿತವಾಗಿ ಮದ್ಯ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ಇನ್ನು ಅವರ ಈ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಮಾಜಿಕ ಮಾದ್ಯಮಗಳಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಕೆಲವೆಡೆ ಈ ಹೇಳಿಕೆ ಹಾಸ್ಯಾಸ್ಪದವಾಗಿ ತಿರುಗಾಡುತ್ತಿದೆ. ಆದರೆ ಇನ್ನೂ ಕೆಲವರು ಇದನ್ನು ಒಪ್ಪಿಕೊಂಡಿದ್ದಾರೆ. ಅಂದರೆ ಇತರರು ಇದನ್ನು ಆರ್ಥಿಕ ಅಸಮಾನತೆ ಮತ್ತು ಸರ್ಕಾರದ ಹಿತರಕ್ಷಣಾ ನೀತಿಯ ಮೇಲೆ ಒತ್ತಿಹೇಳುವ ವಾದ ಎಂದು ಪರಿಗಣಿಸಿದ್ದಾರೆ.
ಇನ್ನು ಸರ್ಕಾರ ಸದ್ಯ ಆದಾಯದ ನಿರೀಕ್ಷೆ ಹೆಚ್ಚಾಗಿ ಹೊಂದಿದ್ದು, ಅದನ್ನು ಅಬಕಾರಿ ಮೂಲಕ ಹಿಂಪಡೆಯುವ ದಾರಿಯಲ್ಲಿದ್ದಾರೆ. ಅಂದರೆ 40,000 ಕೋಟಿ ರೂ. ಅಬಕಾರಿ ಆದಾಯ ಗುರಿ ಹೊಂದಿರುವ ಸರ್ಕಾರದ ತೆರಿಗೆ ಹೆಚ್ಚಳದಿಂದ, ಈಗ ರಾಜ್ಯದಲ್ಲಿ ಮದ್ಯದ ದರವೂ ಹೆಚ್ಚಾಗಿದೆ. ಇದರಿಂದ ಬಡವರಿಗೆ ಹೆಚ್ಚು ನಷ್ಟವಾಗುತ್ತದೆ ಎಂಬುದು ಶಾಸಕ ಎಂ.ಟಿ ಕೃಷ್ಣಪ್ಪ ಅವರ ಅಭಿಪ್ರಾಯವಾಗಿದೆ. ಅವರು ಹೇಳುವ ಪ್ರಕಾರ ಈ ಈ ತೆರಿಗೆಯಿಂದ ಪ್ರತಿ ಪುರುಷನಿಗೆ ಉಚಿತ ಮದ್ಯ ನೀಡಿದರೆ, ಅದು ಪುನಃ ಜನರಿಗೆ ಮರಳಿದಂತಾಗುತ್ತದೆ ಎಂಬುದಾಗಿದೆ.
ಕೆ.ಜೆ.ಜಾರ್ಜ್ ಹಾಗೂ ಸ್ಪೀಕರ್ ಖಾದರ್ ಹೇಳಿದ್ದೇನು..?
ಇನ್ನು ಈ ಬಗ್ಗೆ ಸಚಿವ ಕೆ.ಜೆ ಜಾರ್ಜ್ ಹಾಗೂ ಸ್ಪೀಕರ್ ಯು.ಟಿ ಖಾದರ್ ಎಂ.ಟಿ ಕೃಷ್ಣಪ್ಪ ಅವರ ಮಾತುಗಳನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ವ್ಯಂಗ್ಯವಾಗಿ ಉತ್ತರ ನೀಡಿದ ಜಾರ್ಜ್ ಅವರು, ಇಂತಹ ಯೋಜನೆ ಬೇಕೆಂದರೆ ನೀವು ನಿಮ್ಮ ಸರ್ಕಾರವನ್ನೇ ರಚಿಸಿ ಎಂದು ಹೇಳಿದ್ದಾರೆ. ಅಲ್ಲದೇ ಈಗಾಗಲೇ ರಾಜ್ಯದಲ್ಲಿ ಮದ್ಯಪಾನ ನಿಯಂತ್ರಣ ದೊಡ್ಡ ಸವಾಲಾಗಿದೆ. ಇಂತಹ ಯೋಜನೆ ಹೇಗೆ ಕಾರ್ಯಗತಗೊಳ್ಳಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಇದು ನಿಜಕ್ಕೂ ಚರ್ಚೆಗೆ ಎಡೆ ಮಾಡಿಕೊಟ್ಟ ಸಂಗತಿಯಾಗಿದೆ. ಜೆಡಿಎಸ್ ಶಾಸಕ ಎಂ.ಟಿ ಕೃಷ್ಣಪ್ಪ ಅವರ ಉಚಿತ ಮದ್ಯದ ಪ್ರಸ್ತಾಪ ಕೆಲವೆಡೆ ಹಾಸ್ಯ ಸೃಷ್ಟಿಸಿದ್ದರೂ, ಇನ್ನೂ ಕೆಲವರು ಆರ್ಥಿಕ ನ್ಯಾಯದ ವಿಚಾರವಾಗಿ ಪರಿಣಮಿಸಿದೆ. ಸರ್ಕಾರದ ಯೋಜನೆಗಳು ಮಹಿಳೆಯರಿಗೆ ಹೆಚ್ಚು ಲಾಭಕರವಾಗಿವೆ ಎಂಬ ವಾದದ ಮಧ್ಯೆ, ಪುರುಷರಿಗೆ ಕೂಡ ವಿಶೇಷ ನೆರವು ನೀಡಬೇಕು ಎಂಬ ಆಲೋಚನೆ ಹೊಸ ಚರ್ಚೆಗೆ ನಾಂದಿಯಾಗಿದೆ. ಆದರೆ ಇದಕ್ಕೆ ಸಚಿಚ ಕೆ.ಜೆ ಜಾರ್ಜ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗೂ ಮದ್ಯದ ಮೇಲಿನ ತೆರಿಗೆ ಹೆಚ್ಚಳ ಕೂಡ ಬಡ ವರ್ಗದ ಜನರ ಮೇಲೆ ಹೆಚ್ಚಿನ ಹೊರೆಯಾಗುವ ಸಾಧ್ಯತೆಯೂ ಇದೆ ಎಂಬುದು ಅವರ ಸಾರಾಂಶವಾಗಿದೆ.
ಒಟ್ಟಿನಲ್ಲಿ ಇದು ಕರ್ನಾಟಕದ ಅಬಕಾರಿ ನೀತಿ, ಜನಪ್ರಿಯ ಯೋಜನೆಗಳ ದೋಷದೃಷ್ಟಿ ಮತ್ತು ಲಿಂಗ ಆಧಾರಿತ ಸರಕು-ಸಹಾಯ ಧೋರಣೆಗಳ ಕುರಿತಂತೆ ಪ್ರಚೋದಕ ಚರ್ಚೆ ಹುಟ್ಟಿಸುವ ಸಾಧ್ಯತೆ ಇದೆ. ಮದ್ಯ ಸೇವನೆ ಕುರಿತ ಸಮಾಜದ ಅಭಿಪ್ರಾಯ ಮತ್ತು ಸರ್ಕಾರದ ಸಾಮಾಜಿಕ ಕಲ್ಯಾಣ ನೀತಿಗಳ ಮಧ್ಯೆ ಈ ವಿವಾದ ಮುಂದುವರೆಯಬಹುದೆಂಬ ನಿರೀಕ್ಷೆಯಿದೆ.


Click it and Unblock the Notifications