ಕಳೆದ ವರ್ಷ ಹಿಂಡನ್‌ಬರ್ಗ್ ವರದಿಯ ಬಳಿಕ ತನ್ನ ಆದಾಯದಲ್ಲಿ ಭಾರೀ ನಷ್ಟವನ್ನು ಕಂಡು ದೇಶದ ಶ್ರೀಮಂತ ವ್ಯಕ್ತಿ ಎಂಬ ಸ್ಥಾನವನ್ನು ಕಳೆದುಕೊಂಡಿದ್ದ ಗೌತಮ್ ಅದಾನಿ ಈಗ ಮತ್ತೆ ಶೈನ್ ಆಗುತ್ತಿದ್ದಾರೆ. ಹಿಂಡನ್‌ಬರ್ಗ್ ಆರೋಪದಲ್ಲಿ ಉದ್ಯಮಿಗಳ ಸಮೂಹದ ವಿರುದ್ಧ ಯಾವುದೇ ಹೊಸ ತನಿಖೆಗಳ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವು ದಿನಗಳ ನಂತರ ಗೌತಮ್ ಅದಾನಿ ಮತ್ತೆ ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿಯ ನಿವ್ವಳ ಆದಾಯವು ಒಂದು ದಿನದಲ್ಲಿ 7.7 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇದರಿಂದಾಗಿ ಗೌತಮ್ ಅದಾನಿ ಆದಾಯವು 97.6 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ತಾನು ಅಗ್ರ ಸ್ಥಾನಕ್ಕೆ ಅದಾನಿ ಏರಿದ್ದಾರೆ.

ಈ ಹಿಂದೆ ಗೌತಮ್ ಅದಾನಿ ಭಾರತದ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಕಳೆದುಕೊಂಡ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾದ ಮುಕೇಶ್ ಅಂಬಾನಿ ಅಗ್ರಸ್ಥಾನದಲ್ಲಿ ಉಳಿದುಕೊಂಡಿದ್ದರು. ಈಗ ಎರಡನೇ ಸ್ಥಾನಕ್ಕೆ ಇಳಿದಿರುವ ಅಂಬಾನಿ ನಿವ್ವಳ ಆದಾಯವು 97 ಬಿಲಿಯನ್ ಡಾಲರ್ ಆಗಿದೆ. ಅಂದರೆ ಅಂಬಾನಿಗಿಂತ ಅದಾನಿ ಆದಾಯವು ಕೊಂಚವೇ ಏರಿಕೆಯಾಗಿದೆ.
ಹಿಂಡನ್‌ಬರ್ಗ್ ಆರೋಪ
1980 ರ ದಶಕದಲ್ಲಿ ವಜ್ರದ ವ್ಯಾಪಾರಿಯಾಗಿ ಪ್ರಾರಂಭವಾದ ಅಂಬಾನಿ ಸಂಸ್ಥೆಯ ಉದ್ಯಮವು ಈಗ ಹಲವಾರು ವಲಯಗಳಲ್ಲಿ ವಿಸ್ತರಿಸಿದೆ. ಬಂದರು ಉದ್ಯಮವು ಕೂಡಾ ಅದಾನಿ ಸಂಸ್ಥೆಯಲ್ಲಿದೆ. ಆದರೆ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಂಸ್ಥೆ ವಂಚನೆಯನ್ನು ಮಾಡಿದೆ ಎಂದು 2023ರ ಜನವರಿಯಲ್ಲಿ ಹಿಂಡನ್‌ಬರ್ಗ್ ವರದಿ ಮಾಡಿದ್ದು, ಅದಾದ ಬಳಿಕ ಅದಾನಿ ಸಂಸ್ಥೆ ಭಾರೀ ನಷ್ಟವನ್ನು ಕಂಡಿದೆ.
ಈ ತನಿಖಾ ಸಂಸ್ಥೆಯ ಆರೋಪಗಳನ್ನು ಅದಾನಿ ಸಂಸ್ಥೆ ಮತ್ತು ಸ್ವತಃ ಗೌತಮ್ ಅದಾನಿ ನಿರಾಕರಿಸಿದ್ದರೂ ಕೂಡಾ ಅದಾನಿ ಗ್ರೂಪ್ ಕಳೆದ ವರ್ಷ 150 ಬಿಲಿಯನ್ ಡಾಲರ್‌ಗೂ ಅಧಿಕ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ. ಹೂಡಿಕೆದಾರರು, ಸಾಲದಾತರು, ಸಾಲ ಮರುಪಾವತಿ ಮತ್ತು ನಿಯಂತ್ರಕರು ಎಲ್ಲರ ಭರವಸೆಯನ್ನು ಅದಾನಿ ಗಳಿಸುವುದರಲ್ಲಿ ಸಂಪೂರ್ಣವಾಗಿ ಹಿಂದುಳಿಯುವಂತೆ ಆಗಿತ್ತು.
ಆದರೆ ಈ ವಾರ ಸುಪ್ರಿಂಕೋರ್ಟ್ ತೀರ್ಪಿನ ಬಳಿಕ ಅದಾನಿ ಗ್ರೂಪ್‌ನ ಷೇರುಗಳು ಏರಿಕೆಯಾಗುತ್ತಾ ಸಾಗುತ್ತಿದೆ. ಸುಪ್ರೀಂ ಕೋರ್ಟ್ ಇನ್ನುಳಿದ 2 ವಿಷಯಗಳಿಗ ಸಂಬಂಧಿಸಿದ ತನಿಖೆಯನ್ನು ಮೂರು ತಿಂಗಳೊಳಗೆ ಮುಕ್ತಾಯಗೊಳಿಸುವಂತೆ ಸೆಬಿಗೆ ಆದೇಶಿಸಿದೆ. ಹಾಗೆಯೇ ಸೆಬಿಯ ಆದೇಶವನ್ನು ಎತ್ತಿ ಹಿಡಿದಿದೆ. ಅದಾದ ಬಳಿಕ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ಸುಪ್ರೀಂ ಹೇಳಿದೆ. ಊಹಾಪೋಹಗಳಿಗೆ ಕಿವಿಕೊಡದಂತೆ ಸಲಹೆ ನೀಡಿದೆ.
ಇನ್ನು ಫೋರ್ಬ್ಸ್‌ನ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ಈ ಹಿಂದಿನಂತೆಯೇ ಎಲಾನ್ ಮಸ್ಕ್ ಇದ್ದರೆ, ಎರನಡೇ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬವಿದೆ. ಟಾಪ್ 10ರಲ್ಲಿ ಯಾವುದೇ ಭಾರತೀಯರು ಕಾಣಿಸಿಕೊಂಡಿಲ್ಲ.
ಆದರೆ 12 ನೇ ಸ್ಥಾನದಲ್ಲಿ ಮುಕೇಶ್ ಅಂಬಾನಿ, 16 ನೇ ಸ್ಥಾನದಲ್ಲಿ ಗೌತಮ್ ಅದಾನಿ ಕಾಣಿಸಿಕೊಂಡಿದ್ದಾರೆ. ಅದಾದ ಬಳಿಕ 45 ನೇ ಸ್ಥಾನದಲ್ಲಿ ಶಿವ ನಾಡರ್ ಇದ್ದಾರೆ. 56 ನೇ ಸ್ಥಾನದಲ್ಲಿ ಸಾವಿತ್ರಿ ಜಿಂದಾಲ್ ಮತ್ತು ಕುಟುಂಬವಿದೆ.


Click it and Unblock the Notifications