ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ತನ್ನ ಹಣಕಾಸು ಸೇವೆಗಳ ವಿಭಾಗವಾದ ರಿಲಯನ್ಸ್ ಸ್ಟ್ರಾಟೆಜಿಕ್ ಇನ್‌ವೆಸ್ಟ್‌ಮೆಂಟ್‌ನ ವಿಭಜನೆಯನ್ನು (ಡಿಮರ್ಜ್) ಜುಲೈ 20 ರಂದು ನಿಗದಿಪಡಿಸಿದೆ. ಅದಾದ ಬಳಿಕ ಆರ್‌ಎಸ್‌ಐಎಲ್ ಅನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್ (ಜೆಎಫ್‌ಎಸ್‌ಎಲ್) ಎಂದು ಮರುನಾಮಕರಣ ಮಾಡಲಾಗುತ್ತದೆ.
ಕಳೆದ ವಾರ ಸುದ್ದಿಯನ್ನು ಪ್ರಕಟಣೆ ಮಾಡಲಾಗಿದೆ. ಕಂಪನಿಯ ಮಾರುಕಟ್ಟೆ ಕ್ಯಾಪ್‌ನಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. ವಿಂಗಡಣೆಯ ಸುದ್ದಿ ಪ್ರಕಟವಾದ ಕೇವಲ ಐದು ದಿನಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) 69,990.57 ಕೋಟಿ ರೂಪಾಯಿ ಗಳಿಸಿದೆ. ಇದರ ನಂತರ, ರಿಲಯನ್ಸ್ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯವು 18,53,033.73 ಕೋಟಿ ರೂಪಾಯಿಗೆ ತಲುಪಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ಜುಲೈ 14 ರ ಶುಕ್ರವಾರದಂದು 2,751 ರೂಪಾಯಿ ಆಗಿತ್ತು.

ಜಿಯೋ ಫೈನಾನ್ಷಿಯಲ್ ಸರ್ವಿಸಸ್ (ಜೆಎಫ್‌ಎಸ್) ವಿಂಗಡಣೆಯ ನಂತರ ನಿವ್ವಳ ಮೌಲ್ಯದ ಲೆಕ್ಕಾಚಾರದಲ್ಲಿ ಐದನೇ ಅತಿ ದೊಡ್ಡ ಹಣಕಾಸು ಸೇವಾ ಸಂಸ್ಥೆಯಾಗಲಿದೆ ಎಂದು ವರದಿ ಹೇಳುತ್ತದೆ. ರಿಲಯನ್ಸ್ ಸ್ಟ್ರಾಟೆಜಿಕ್ ಇನ್‌ವೆಸ್ಟ್‌ಮೆಂಟ್ಸ್ ರೆಕಾರ್ಡ್ ದಿನಾಂಕದಂದು ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರತಿ ಒಂದು ಷೇರಿಗೆ ತಲಾ 10 ರೂಪಾಯಿಯ ಮುಖಬೆಲೆಯ ಆರ್‌ಎಸ್‌ಐಎಲ್‌ನ ಈಕ್ವಿಟಿ ಷೇರನ್ನು ಹಂಚಿಕೆ ಮಾಡುತ್ತದೆ.
"ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಮೌಲ್ಯವು 90,000-150,000 ಕೋಟಿ ರೂಪಾಯಿ ಆಗಿದ್ದು, ಪ್ರತಿ ಷೇರಿನ ದರ 134-224 ರೂಪಾಯಿ ಆಗಿರಲಿದೆ. ನಾವು ಎಲ್ಲ ಲೆಕ್ಕಾಚಾರದಲ್ಲಿ ಪ್ರತಿ ಷೇರಿನ ದರ 179 ರೂಪಾಯಿ ಎಂದು ನಿಗದಿ ಮಾಡುತ್ತೇವೆ," ಎಂದು ಜೆಫೆರೀಸ್ ತಿಳಿಸಿದೆ. ಬ್ಯುಜಿನೆಸ್ ಟೈಮ್ಸ್ ಪ್ರಕಾರ ಇದರ ಒಟ್ಟು ನಿವ್ವಳ ಆದಾಯವು 1,50,000 ಕೋಟಿ ರೂಪಾಯಿ ಆಗಿರಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು 1,10,000 ಕೋಟಿ ರೂಪಾಯಿ ಸೇರಿದಂತೆ ಈ ಲೆಕ್ಕಾಚಾರವಾಗಿದೆ.
ಈ ಹೊಸ ಸಂಸ್ಥೆಯ ಸಿಇಒ ಹಾಗೂ ಮ್ಯಾನೆಜಿಂಗ್ ಡೈರೆಕ್ಟರ್ ಆಗಿ ಈ ಹಿಂದೆ ಸಂಸ್ಥೆಯು ಹಿತೇಶ್ ಕುಮಾರ್ ಸೇಥಿಯಾರನ್ನು ನೇಮಕ ಮಾಡಿದೆ. ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿಯನ್ನು ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕ ಮಾಡಲಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸ್ಪರ್ಧೆ
ಭಾರತದ ಅತೀ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್‌ಮನ್ ಮುಕೇಶ್ ಅಂಬಾನಿ ತನ್ನ ಉದ್ಯಮವನ್ನು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಣೆ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆರಂಭದಿಂದ ಈವರೆಗೆ ಹಲವಾರು ಕ್ಷೇತ್ರಗಳಿಗೆ ತನ್ನ ಉದ್ಯಮವನ್ನು ವಿಸ್ತರಿಸುತ್ತಾ ಸಾಗುತ್ತಿದ್ದಾರೆ. ಈಗ ಮುಕೇಶ್ ಅಂಬಾನಿ ಹಾಗೂ ಪುತ್ರ ಆಕಾಶ್ ಅಂಬಾನಿ ಹೊಸ ಉದ್ಯಮಕ್ಕೆ ಎಂಟ್ರಿ ನೀಡಿದ್ದು ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸ್ಪರ್ಧೆ ನೀಡುತ್ತಿದ್ದಾರೆ.
ಹೌದು, ಭಾರತದ, ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಎಂದಿಗೂ ಕೂಡಾ ಅತೀ ದೊಡ್ಡ ರಿಸ್ಕ್‌ಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಹೊಸ ಕ್ಷೇತ್ರಕ್ಕೆ ಎಂಟ್ರಿ ನೀಡಿ ಮಾರುಕಟ್ಟೆಯ ಸ್ಥಿತಿಯನ್ನೇ ಬದಲಾವಣೆ ಮಾಡುವ ವಿಚಾರದಲ್ಲಿ ಹೆಸರುವಾಸಿಯಾಗಿದ್ದಾರೆ. ಈಗ ಮುಕೇಶ್ ಅಂಬಾನಿಯ ಹಿರಿಯ ಪುತ್ರ ಆಕಾಶ್ ಅಂಬಾನಿ ಕನ್ಸ್ಯೂಮರ್ ಫೈನಾನ್ಸ್ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ.


Click it and Unblock the Notifications