ರಾಮ್ ದೇವ್ ಇಂಟರ್ ನ್ಯಾಷನಲ್ ಕಂಪೆನಿಯ ಮೂವರ ವಿರುದ್ಧ ಈಚೆಗೆ ಸಿಬಿಐನಿಂದ ದೂರು ದಾಖಲಾಗಿದೆ. ಆರು ಬ್ಯಾಂಕ್ ಗಳ ಒಕ್ಕೂಟದಿಂದ 411 ಕೋಟಿ ರುಪಾಯಿ ಸಾಲ ಮಾಡಿ, ಈಗಾಗಲೇ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಸ್ಟೇಟ್ ಬ್ಯಾಂಕ್ ಇಂಡಿಯಾವು ಸಿಬಿಐ ಬಳಿ ದೂರು ಒಯ್ಯುವ ಮುನ್ನವೇ ಆ ಮೂವರು ದೇಶ ಬಿಟ್ಟುಹೋಗಿದ್ದರು ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ರಾಮ್ ದೇವ್ ಇಂಟರ್ ನ್ಯಾಷನಲ್ ಕಂಪೆನಿಯು ಪಶ್ಚಿಮ ಏಷ್ಯಾ ಮತ್ತು ಯುರೋಪ್ ರಾಷ್ಟ್ರಗಳಿಗೆ ಬಾಸ್ಮತಿ ಅಕ್ಕಿಯನ್ನು ರಫ್ತು ಮಾಡುತ್ತದೆ. ಅದರ ನಿರ್ದೇಶಕರು ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗೀತಾ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಪ್ರಕಾರ, ಕಂಪೆನಿಗೆ 173 ಕೋಟಿ ರುಪಾಯಿಗೂ ಹೆಚ್ಚು ನಷ್ಟವಾಗಿದೆ.
ಯಾವ್ಯಾವ ಬ್ಯಾಂಕ್ ಗಳಿಂದ ಸಾಲ?
ಕಂಪೆನಿಗೆ ಮೂರು ಮಿಲ್ಲಿಂಗ್ ಘಟಕಗಳಿವೆ. ಅದನ್ನು ಹೊರತುಪಡಿಸಿ, ಎಂಟು ಬೇರ್ಪಡಿಸುವ ಹಾಗೂ ಗ್ರೇಡಿಂಗ್ ಘಟಕಗಳು ಕರ್ನಲ್ ಜಿಲ್ಲೆಯಲ್ಲಿವೆ. ಇದರ ಜತೆಗೆ ವ್ಯಾಪಾರ- ವಹಿವಾಟಿಗಾಗಿ ಸೌದಿ ಅರೇಬಿಯಾ, ದುಬೈನಲ್ಲಿ ಕಚೇರಿಗಳಿವೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ದೂರಿನಲ್ಲಿ ತಿಳಿಸಿದೆ. ಅಂದ ಹಾಗೆ ಸಾಲ ನೀಡಿರುವ ಬ್ಯಾಂಕ್ ಗಳ ಒಕ್ಕೂಟದಲ್ಲಿ ಎಸ್ ಬಿಐ ಹೊರತುಪಡಿಸಿ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೊರೇಷನ್ ಬ್ಯಾಂಕ್ ಒಳಗೊಂಡಿವೆ ಎಂದು ತಿಳಿಸಲಾಗಿದೆ.
ಶೋಧ ಕಾರ್ಯಾಚರಣೆ ನಡೆದಿಲ್ಲ
ಸದ್ಯಕ್ಕೆ ಕೊರೊನಾ ಲಾಕ್ ಡೌನ್ ಇರುವುದರಿಂದ ಸಿಬಿಐನಿಂದ ಯಾವುದೇ ಶೋಧ ಕಾರ್ಯಾಚರಣೆ ನಡೆದಿಲ್ಲ. ಆರೋಪಿಗಳು ವಿಚಾರಣೆಗಾಗಿ ಬಾರದಿದ್ದಲ್ಲಿ ಸಮನ್ಸ್ ನೀಡಲಾಗುತ್ತದೆ ಹಾಗೂ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಬಿಐನಿಂದ ಮಾಹಿತಿ ನೀಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ದೂರಿನ ಪ್ರಕಾರ, ಜನವರಿ 27, 2016ಕ್ಕೆ ಈ ಖಾತೆಯು ನಾನ್ ಪರ್ಫಾರ್ಮಿಂಗ್ ಅಸೆಟ್ (NPA) ಆಗಿದೆ.
ಬ್ಯಾಲೆನ್ಸ್ ಶೀಟ್ ತಿರುಚಲಾಗಿದೆ
ಅದಾಗಿ ಏಳರಿಂದ ಒಂಬತ್ತು ತಿಂಗಳ ನಂತರ ಆಸ್ತಿಗಳನ್ನು ಜಂಟಿ ಪರಿಶೀಲನೆ ಮಾಡಲಾಗಿದೆ. ವಿಚಾರಣೆ ವೇಳೆ ಗೊತ್ತಾಗಿದ್ದು ಏನೆಂದರೆ, ಸಾಲ ಪಡೆದವರು ನಾಪತ್ತೆಯಾಗಿದ್ದಾರೆ ಮತ್ತು ದೇಶವನ್ನು ಬಿಟ್ಟಿದ್ದಾರೆ ಎಂಉ ಫೆಬ್ರವರಿ 25, 2020ರಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹಳೆ ಘಟಕದಿಂದ ಎಲ್ಲ ಯಂತ್ರಗಳನ್ನೂ ಸಾಲಗಾರರು ತೆಗೆದುಬಿಟ್ಟಿದ್ದಾರೆ ಮತ್ತು ಬ್ಯಾಲೆನ್ಸ್ ಶೀಟ್ ಅನ್ನು ತಿರುಚಿ, ಅದರ ಆಧಾರದಲ್ಲಿ ಸಾಲ ಪಡೆದುಕೊಂಡಿದ್ದಾರೆ ಎಂದು ಕೂಡ ದೂರಿನಲ್ಲಿ ತಿಳಿಸಲಾಗಿದೆ.


Click it and Unblock the Notifications