ಮೈಸೂರು ಜನತೆಗೆ ಮತ್ತೊಂದು ಬಂಪರ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಇತ್ತೀಚೆಗೆ ರೈಲ್ವೆ ನಿಲ್ದಾಣವನ್ನು ವಿಸ್ತರಣೆ ಬಗ್ಗೆ ಸಿಹಿ ಸುದ್ದಿ ಸಿಕ್ಕಿತ್ತು. ಇದೀಗ ಮತ್ತೊಂದು ವಿಶೇಷ ಸುದ್ದಿ ಏನೆಂದರೆ, ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಯೋಜನೆಗೆ ಈಗ ಹೊಸ ಚೈತನ್ಯ ದೊರೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರು ವಿಮಾನ ನಿಲ್ದಾಣದ ಪ್ರಗತಿ ಪರಿಶೀಲನೆ ನಡೆಸಿದ ನಂತರ, ಮುಂದಿನ ಹಂತದ ಕೆಲಸಗಳಿಗೆ ವೇಗ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಸ್ತರಣೆಯು ಸುದೀರ್ಘ ಅಂತರದ ವಿಮಾನಗಳ ಹಾರಾಟಕ್ಕೆ ಮಾರ್ಗ ತೆರೆದು ಮೈಸೂರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಲಿದೆ.

ವಿಸ್ತರಣಾ ಯೋಜನೆಗಾಗಿ ಈಗಾಗಲೇ 240 ಎಕರೆ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದು, ಭೂಮಿಯ ಮಾಲೀಕರಿಗೆ ಪರಿಹಾರ ವಿತರಣೆ ಪೂರ್ಣಗೊಂಡಿದೆ. ಇನ್ನೂ 40 ಎಕರೆ ಸರ್ಕಾರಿ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (AAI) ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಇಲಾಖೆ ಈ ವರ್ಗಾವಣೆಗೆ ಮುಂದಿನ 10 ದಿನಗಳಲ್ಲಿ ಅನುಮೋದನೆ ನೀಡಲಿದೆ ಎಂದು ಸಚಿವ ಮಹದೇವಪ್ಪ ಭರವಸೆ ನೀಡಿದ್ದಾರೆ. ಈ ಕ್ರಮದಿಂದ ವಿಸ್ತರಣಾ ಕಾಮಗಾರಿಗೆ ಬಹು ನಿರೀಕ್ಷಿತ ವೇಗ ಸಿಗಲಿದೆ.
ಪ್ರಸ್ತುತ ವಿಮಾನ ನಿಲ್ದಾಣದ ರನ್‌ವೇ ಉದ್ದ 1,750 ಮೀಟರ್ ಇದ್ದು, ಇದನ್ನು 2,450 ಮೀಟರ್‌ಗಳಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಈ ವಿಸ್ತರಣೆ ಪೂರ್ಣಗೊಂಡರೆ ದೊಡ್ಡ ವಿಮಾನಗಳು ಹಾಗೂ ದೂರ ಪ್ರಯಾಣದ ಸೇವೆಗಳು ಮೈಸೂರಿನಿಂದ ಪ್ರಾರಂಭವಾಗಲಿವೆ. ಪ್ರಸ್ತುತ ATR-72 ಮಾದರಿಯ ಸಣ್ಣ ವಿಮಾನಗಳೇ ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
ಮೈಸೂರು ವಿಮಾನ ನಿಲ್ದಾಣದಿಂದ ಹಿಂದೆ ಬೆಂಗಳೂರು, ಬೆಳಗಾವಿ, ಕೊಚ್ಚಿ, ಗೋವಾ, ಮಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಗರಗಳಿಗೆ ವಿಮಾನ ಸಂಪರ್ಕವಿದ್ದರೂ, ಈಗ ಹೈದರಾಬಾದ್ ಮತ್ತು ಚೆನ್ನೈಗೆ ಮಾತ್ರ ನೇರ ವಿಮಾನ ಸೇವೆ ಲಭ್ಯವಿದೆ. ವಿಸ್ತರಣೆಯ ನಂತರ ಇತರ ನಗರಗಳಿಗೂ ನೇರ ವಿಮಾನ ಸೇವೆ ಪ್ರಾರಂಭವಾಗುವ ಸಾಧ್ಯತೆ ಇದೆ.
ಕೈಗಾರಿಕಾ ವಲಯದ ತಜ್ಞರ ಪ್ರಕಾರ, ಮೈಸೂರಿನಲ್ಲಿ ನೇರ ವಿಮಾನ ಸಂಪರ್ಕಗಳು ಕೈಗಾರಿಕಾ ಹೂಡಿಕೆಗಳನ್ನು ಹೆಚ್ಚಿಸಲು ಹಾಗೂ ಉದ್ಯೋಗಾವಕಾಶಗಳನ್ನು ವಿಸ್ತರಿಸಲು ಸಹಕಾರಿಯಾಗಲಿದೆ. ಪ್ರಸ್ತುತ ಪ್ರವಾಸೋದ್ಯಮ ಮೈಸೂರಿನ ಆರ್ಥಿಕ ಚಟುವಟಿಕೆಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಆದರೆ ಕೇವಲ ಪ್ರವಾಸೋದ್ಯಮದಿಂದ ದೀರ್ಘಕಾಲಿಕ ಅಭಿವೃದ್ಧಿ ಸಾಧ್ಯವಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಮಾನ ನಿಲ್ದಾಣ ವಿಸ್ತರಣೆ ಕೈಗಾರಿಕಾ ಮತ್ತು ತಂತ್ರಜ್ಞಾನ ವಲಯದ ಬೆಳವಣಿಗೆಗೆ ಹೊಸ ದಾರಿಯನ್ನು ತೆರೆಯಲಿದೆ ಎಂದು ಶಾಸಕರಾದ ತನ್ವೀರ್ ಸೇಠ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವ ಮಹದೇವಪ್ಪ ಅವರು ಮೈಸೂರಿನ ರಸ್ತೆ ಅಭಿವೃದ್ಧಿಯ ಕುರಿತೂ ಮಾಹಿತಿ ನೀಡಿದರು. ₹393.85 ಕೋಟಿ ರೂ. ವೆಚ್ಚದಲ್ಲಿ ಸುಮಾರು 46 ಕಿಲೋಮೀಟರ್ ಉದ್ದದ 12 ಪ್ರಮುಖ ರಸ್ತೆಗಳ ವೈಟ್‌ಟಾಪಿಂಗ್ ಕೆಲಸ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆಯಿಂದ ನಗರ ರಸ್ತೆಗಳ ಬಾಳಿಕೆ ಶಕ್ತಿಯು ಹೆಚ್ಚಲಿದೆ ಎಂದು ಅವರು ತಿಳಿಸಿದರು.
ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೊಸ ಯೋಜನೆಗಳನ್ನು ಜಾರಿಗೆ ತರುವಾಗ ನಗರದ ಸೌಂದರ್ಯ ಮತ್ತು ಪೈತೃಕತೆಯನ್ನು ಕಾಪಾಡುವಂತಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು. ಅಭಿವೃದ್ಧಿಯ ಜೊತೆಗೆ ನಗರ ಸೌಂದರ್ಯಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.
ಈ ಪರಿಶೀಲನಾ ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ವಿಮಾನ ನಿಲ್ದಾಣ ನಿರ್ದೇಶಕಿ ಪಿ.ವಿ. ಉಷಾಕುಮಾರಿ ಸೇರಿದಂತೆ ಹಲವಾರು ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.


Click it and Unblock the Notifications