ಏಳು ವರ್ಷಗಳ ಬಳಿಕ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತರಿತ ನಮ್ಮ ಮೆಟ್ರೊ ರೈಲು ಮಾರ್ಗವು ಗುರುವಾರ (ನ.7) ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. ಈ ಮಾಗರ್ದಲ್ಲಿ ಬೆಳಗ್ಗೆ 5 ಗಂಟೆಯಿಂದ ಮೆಟ್ರೋ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಈ ಮಾರ್ಗವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಪ್ರಾಯೋಗಿಕವಾಗಿ ಉದ್ಘಾಟಿಸಿದರು.
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕು ಆದ ಕಾರಣ ನಾಗಸಂದ್ರದಿಂದ ಮಾದಾವರ ಮೆಟ್ರೋ ಕಾಮಗಾರಿ ನಿಧಾನಗತಿಯಲ್ಲಿ ಸಾಗಿತ್ತು. 2017ರಲ್ಲಿ 3.14 ಕಿಲೋಮೀಟರ್ ಉದ್ದದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಏಳು ವರ್ಷಗಳ ಬಳಿಕ ಇಲ್ಲಿನ ಜನರು ಮೆಟ್ರೋ ಸೇವೆಯ ಲಾಭವನ್ನು ಪಡೆಯಲಿದ್ದಾರೆ. ಗುರುವಾರದಿಂದ ಈ ಮಾರ್ಗದಲ್ಲಿ ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆಯ ವರೆಗೆ ನಮ್ಮ ಮೆಟ್ರೋ ಸಂಚರಿಸಲಿದೆ.

ಪ್ರತಿ ಹತ್ತು ನಿಮಿಷಕ್ಕೆ ಒಂದು ಮೆಟ್ರೋ ಸಾರ್ವಜನಿಕರ ಸೇವೆಗೆ ಲಭ್ಯ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ಉಳಿದಂತೆ ನಾಗಸಂದ್ರ ಹಾಗೂ ರೇಷ್ಮೆ ಸಂಸ್ಥೆ ನಡುವಿನ ಮಾರ್ಗದಲ್ಲಿ ಪ್ರತಿ ನಿತ್ಯದಂತೆ ರೈಲುಗಳ ಓಡಾಟ ನಡೆಯಲಿದೆ. ನಮ್ಮ ಮೆಟ್ರೋ ಪ್ರಯಾಣ ದರವನ್ನು ಸಹ ಬಹಿರಂಗೊಳಿಸಿದ್ದು, ಕನಿಷ್ಠ 10 ರೂಪಾಯಿ ಹಾಗೂ ಗರಿಷ್ಠ 60 ರೂಪಾಯಿಗಳಿಗೆ ನಿಗದಿ ಪಡಿಸಲಾಗಿದೆ.
ನಾಗಸಂದ್ರದಿಂದ ಮಾದಾವರೆಗಿನ 3.14 ಕಿಲೋ ಮೀಟರ್ ನಮ್ಮ ಮೆಟ್ರೋ 298.65 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ನಾಗಸಂದ್ರ ಹಾಗೂ ರೇಷ್ಮೆ ಸಂಸ್ಥೆ ವರೆಗೆ ಈ ಮೊದಲೇ ಮೆಟ್ರೋ ಸಂಚಾರ ನಡೆಯುತ್ತಿತ್ತು. ಈಗ ಈ ಸಂಚಾರವನ್ನು ವಿಸ್ತರಿಸಾಲಾಗಿದ್ದು, ಈ ಮಾರ್ಗದ ಒಟ್ಟು ಉದ್ದವು 33.46 ಕಿ.ಮೀ ಆಗಿದೆ. ಈ ಸೇವೆಯಿಂದ ಸಂಚಾರ ದಟ್ಟಣೆ ಸಹ ಕಡಿಮೆ ಆಗಲಿದ್ದು, ಈ ಭಾಗದ ಬಹು ವರ್ಷಗಳ ಕನಸು ನನಸಾದಂತೆ ಆಗಿದೆ.

ಡಿಕೆಶಿ ಪ್ರಯಾಣ
ಕರ್ನಾಟಕದ ಉಪಮುಖ್ಯಂತ್ರಿ ಡಿಕೆ ಶಿವಕುಮಾರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಬುಧವಾರ ಯಶವಂತಪುರದಿಂದ ಮಾದವಾರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು. ಈ ಮೆಟ್ರೋ ಮಾರ್ಗವನ್ನು ಪ್ರಾಯೋಗಿಕವಾಗಿ ಉದ್ಘಾಟಿಸಲಾಗಿದೆ. ಇದರ ಲಾಭವನ್ನು ಸಾರ್ವಜನಿಕರು ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಸಂಸದರು, ಜನಪ್ರತಿನಿಧಿಗಳಿಂದ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂದು ಇದೇ ವೇಳೆ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ದೇಶದ ಬೇರೆ ಬೇರೆ ನಗರಗಳಲ್ಲಿರುವ ಮೆಟ್ರೊಗಳಲ್ಲಿ ಪ್ರಯಾಣಿಸುವರ ಸಂಖ್ಯೆಗಿಂತಲೂ ಬೆಂಗಳೂರಿನಲ್ಲಿ ಜನ ಇದರ ಲಾಭವನ್ನು ಹೆಚ್ಚಾಗಿ ಪಡೆದಿದ್ದಾರೆ. 2026ರ ವೇಳೆಗೆ ನಮ್ಮ ಮೆಟ್ರೊ ರೈಲು ಜಾಲವನ್ನು ಒಟ್ಟು 175 ಕಿಲೋ ಮೀಟರ್‌ಗೆ ವಿಸ್ತರಿಸಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ.
ಮೊದಲ ಹಾಗೂ ಎರಡನೇ ಹಂತದ ಮೆಟ್ರೋ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ. ಮೂರನೇ ಹಂತದ ನಮ್ಮ ಮೆಟ್ರೋ ನಿರ್ಮಾಣಕ್ಕೆ ಕೇಂದ್ರ ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಈಗಾಗಲೇ 1130 ಕೋಟಿ ರೂ. ಪಾವತಿಸಿದೆ. ಇನ್ನು 21 ರೈಲುಗಳ ಖರೀದಿಗೆ ಟೇಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.


Click it and Unblock the Notifications