ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. ಆದರೆ ಎಲ್ಲ ಪ್ರಯಾಣಿಕರಿಗೂ ಅಲ್ಲ, ನಿರ್ದಿಷ್ಟವಾಗಿ ಎಂಟು ಮೆಟ್ರೋ ನಿಲ್ದಾಣಗಳ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಲಾಗಿದೆ.
ಬಿಎಂಆರ್‌ಸಿಎಲ್ ಮೆಟ್ರೋ ನಿಲ್ದಾಣಗಳ ಬಳಿ ಪಾರ್ಕಿಂಗ್ ಸ್ಥಳಗಳ ಸಂಖ್ಯೆಯನ್ನು ಅಧಿಕಗೊಳಿಸುವ ಚಿಂತನೆ ನಡೆಸಿದೆ. ಹಾಗೆಯೇ ಎಂಟು ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲು ಟೆಂಡರ್ ಕರೆದಿದೆ ಎಂದು ವರದಿಯು ಹೇಳಿದೆ.

ಬಿಎಂಆರ್‌ಸಿಎಲ್ ರೀಚ್ 1,2 ಮತ್ತು 3 ನಲ್ಲಿ ಪಾರ್ಕಿಂಗ್ ಸ್ಥಳಗಳನ್ನು ವ್ಯವಸ್ಥೆ ಮಾಡಲು ಚಿಂತನೆ ನಡೆಸಿದೆ. ಗುತ್ತಿಗೆದಾರರಿಗೆ ಪರವಾನಗಿ ಆಧಾರದ ಮೇಲೆ ಪಾರ್ಕಿಂಗ್ ಸ್ಥಳಗಳ ನಿರ್ವಹಣೆಯನ್ನು ನೀಡಲು ಮುಂದಾಗಿದೆ. ಹಾಗಾದರೆ ಯಾವೆಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಈ ಪಾರ್ಕಿಂಗ್ ಸ್ಥಳ ಹೆಚ್ಚಳ ಮಾಡಲಾಗುತ್ತಿದೆ?, ಇಲ್ಲಿದೆ ವಿವರ ಮುಂದೆ ಓದಿ...
ಯಾವೆಲ್ಲ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳ ಹೆಚ್ಚಳ
ಮೈಸೂರು ರಸ್ತೆ, ಮಂತ್ರಿ ಸ್ಕ್ವೇರ್, ಸೀತಾರಾಮಪಾಳ್ಯ, ನಲ್ಲೂರಹಳ್ಳಿ, ಸತ್ಯ ಸಾಯಿ ಬಾಬಾ, ಕಾಡುಗೋಡಿ ಟ್ರೀ ಪಾರ್ಕ್, ಬೆನ್ನಿಗಾನಹಳ್ಳಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಥಳ ವಿಸ್ತರಿಸುವ ಅಥವಾ ಅಧಿಕ ಮಾಡುವ ಪ್ರಸ್ತಾಪವನ್ನು ಮಾಡಲಾಗಿದೆ.
ಪಾರ್ಕಿಂಗ್‌ಗಾಗಿ ಅಂದಾಜು 8,956 ಚದರ ಮೀಟರ್ ಜಾಗವನ್ನು ಹೆಚ್ಚಿಸಲಾಗಿದೆ. ಈ ಮೂಲಕ 2,219 ವಾಹನಗಳನ್ನು ಪಾರ್ಕ್ ಮಾಡಲು ಅವಕಾಶ ನೀಡಿಲಾಗುತ್ತದೆ. ಎಂಟು ನಿಲ್ದಾಣಗಳ ಪೈಕಿ 2 ನಿಲ್ದಾಣಗಳಲ್ಲಿ ಮಾತ್ರ ಕಾರು, ಮೊದಲಾದ ನಾಲ್ಕು ಚಕ್ರಗಳ ವಾಹನ ನಿಲ್ಲಿಸಲು ಅವಕಾಶ ನೀಡಲಾಗುತ್ತದೆ. ಒಟ್ಟಾರೆಯಾಗಿ, ಹೆಚ್ಚುವರಿ ಜಾಗದಲ್ಲಿ 2,069 ದ್ವಿಚಕ್ರ ವಾಹನಗಳು ಮತ್ತು 150 ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಬಹುದಾಗಿದೆ.
ಬೈಸಿಕಲ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್
ಪ್ರತಿ ನಿಲ್ದಾಣಕ್ಕೆ 10 ಬೈಸಿಕಲ್‌ಗಳನ್ನು ನಿಲ್ಲಿಸಲು ಸ್ಥಳವನ್ನು ನೀಡಲಾಗುತ್ತದೆ. ಬೇಡಿಕೆ ಅಧಿಕವಾಗಿರುವ ಕಾರಣದಿಂದಾಗಿ ಬಿಎಂಆರ್‌ಸಿಎಲ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪಾರ್ಕಿಂಗ್ ಸ್ಥಳ ಹೊರಭಾಗದಲ್ಲಿ ಸೈಕಲ್‌ಗಳಿಗೆ ಪಾರ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆ. ಅಲ್ಲಿ ಬೋರ್ಡ್ ಹಾಕಲಾಗುತ್ತದೆ.
ವಾರದಲ್ಲಿ ಏಳು ದಿನಗಳ ಕಾಲ ಬೆಳಗ್ಗೆ 5 ರಿಂದ 12:30 ರವರೆಗೆ ಪಾರ್ಕಿಂಗ್ ಸ್ಥಳವು ಪ್ರಯಾಣಿಕರಿಗಾಗಿ ಲಭ್ಯವಿರುತ್ತದೆ. ಮೈಸೂರು ರಸ್ತೆ ಮತ್ತು ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣಗಳನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ರಾತ್ರಿಯಲ್ಲಿ ಪಾರ್ಕಿಂಗ್ ಮಾಡಲು ಅವಕಾಶವಿಲ್ಲ.
ಇನ್ನು ಈ ಪಾರ್ಕಿಂಗ್ ಸ್ಥಳದ ಪರವಾನಗಿ ಅವಧಿಯು ಮೂರು ವರ್ಷಗಳವರೆಗೆ ಇರುತ್ತದೆ. ಗುತ್ತಿಗೆದಾರನು ಪ್ರವೇಶ ಮತ್ತು ನಿರ್ಗಮನ ಸಮಯವನ್ನು ಗಮನಿಸಿ ಅದರ ಆಧಾರದಲ್ಲಿ ಟಿಕೆಟ್ ನೀಡಬೇಕಾಗುತ್ತದೆ. ಹಾಗೆಯೇ ಜಾಗದಲ್ಲಿ ಕ್ಯಾಮೆರಾ ನಿಗಾ ಇರಿಸಲಾಗುವುದು.
ವಾಹಗಳನ್ನು ಕೂಡಾ ಸರಿಯಾಗಿ ಪರಿಶೀಲಿಸಲಾಗುತ್ತದೆ. ಪಾರ್ಕಿಂಗ್ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಇರುತ್ತಾರೆ. ದ್ವಿಚಕ್ರ ವಾಹನಗಳು ಕಳ್ಳತನವಾದರೆ ಪರವಾನಗಿದಾರರೇ ಜವಾಬ್ದಾರರಾಗಿರುತ್ತಾರೆ. ಬಿಎಂಆರ್‌ಸಿಎಲ್ ಗುತ್ತಿಗೆದಾರರಿಗೆ ಪಾರ್ಕಿಂಗ್ ಬಳಕೆ ಮಾಡುವವರಿಗೆ ನಿಗದಿತ ದರವನ್ನು ವಿಧಿಸಲು ಅವಕಾಶ ನೀಡಿದೆ.
ಪಾರ್ಕಿಂಗ್ ಶುಲ್ಕವೆಷ್ಟು?
ಕಾರುಗಳು ಪ್ರತಿ ನಾಲ್ಕು ಗಂಟೆಗಳಿಗೆ 30 ರೂಪಾಯಿ, ಪ್ರತಿ ಹೆಚ್ಚುವರಿ ಗಂಟೆಗೆ 10 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ದ್ವಿಚಕ್ರ ವಾಹನಗಳು ಪ್ರತಿ ನಾಲ್ಕು ಗಂಟೆಗಳಿಗೆ 15 ರೂಪಾಯಿ ಮತ್ತು ಪ್ರತಿ ಹೆಚ್ಚುವರಿ ಗಂಟೆಗೆ 5 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಇನ್ನು ಲಘು ವಾಣಿಜ್ಯ ವಾಹನಗಳು (ಎಲ್‌ಸಿವಿ) ಪ್ರತಿ ನಾಲ್ಕು ಗಂಟೆಗಳಿಗೆ 75 ರೂಪಾಯಿ ಮತ್ತು ಪ್ರತಿ ಹೆಚ್ಚುವರಿ ಗಂಟೆಗೆ 25 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಸೈಕಲ್ ಸವಾರರು ಗಂಟೆಗೆ 1 ರೂಪಾಯಿ ಪಾವತಿಬೇಕು. ಹಾಗೆಯೇ ದಿನಕ್ಕೆ ಗರಿಷ್ಠ 10 ರೂಪಾಯಿ ಪಾವತಿಸಬೇಕು. ಬಿಡ್ಡಿಂಗ್ ಮಾನದಂಡದ ಪ್ರಕಾರ, ಗುತ್ತಿಗೆದಾರರು ಸರ್ಕಾರಿ ಸಂಸ್ಥೆಗಳಲ್ಲಿ ಪಾರ್ಕಿಂಗ್ ನಿರ್ವಹಣೆಯಲ್ಲಿ ಕನಿಷ್ಠ ಒಂದು ವರ್ಷದ ಅನುಭವವನ್ನು ಹೊಂದಿರಬೇಕು.


Click it and Unblock the Notifications