ಪ್ರಸ್ತುತ ಎತ್ತ ಕಣ್ಣಾಯಿಸಿದರೂ ಎಐ ಸದ್ದು. ಎಲ್ಲಾ ಕ್ಷೇತ್ರದಲ್ಲೂ ಎಐ ಹಾಸುಹೊಕ್ಕಾಗಿದೆ. ಹೌದು ಎಲ್ಲಾ ವಲಯದಲ್ಲೂ ಇತ್ತೀಚಿಗೆ ಎಐ ತಂತ್ರಜ್ಞಾನ ಅಳವಡಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಮೆಟ್ರೋ ಪಿಲ್ಲರ್ ಮೇಲ್ವಿಚಾರಣೆಗೆ ಎಐ ಮತ್ತು ಡ್ರೋನ್ ಬಳಕೆ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮುಂದಾಗಿದೆ. ಹಾಗಿದ್ರೆ, ಎಐ ಮತ್ತು ಡ್ರೋನ್‌ನಲ್ಲಿ ಯಾವೆಲ್ಲಾ ವಿವರಗಳನ್ನು ಸಂಗ್ರಹಿಸಲಾಗುತ್ತದೆ ಎಂಬುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ಹೌದು, ಬೆಂಗಳೂರಿನಲ್ಲಿ 2011ರಲ್ಲಿ ಆರಂಭವಾದ ಎಂಜಿ ರಸ್ತೆ-ಬೈಯಪ್ಪನಹಳ್ಳಿ ನಮ್ಮ ಮೆಟ್ರೋ ಹಂತ-1 ಮಾರ್ಗದ ಪಿಲ್ಲರ್, ವಯಾಡಕ್ಟ್‌ಗಳ ಮೇಲೆ ಕಣ್ಗಾವಲು ಇಡಲು ಎಐ ಆಧಾರಿತ ಡ್ರೋನ್ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಶೀಘ್ರವೇ ಟೆಂಡರ್ ಕರೆಯಲು ಬಿಎಂಆರ್‌ಸಿಎಲ್ ವಿಭಾಗ ತಯಾರಿಯನ್ನು ನಡೆಸಿದೆ.

ಮೆಟ್ರೋ ಪಿಲ್ಲರ್‌ಗೆ ಶೀಘ್ರದಲ್ಲೇ AI-ಚಾಲಿತ ಡ್ರೋನ್
ಉತ್ತಮ ಗುಣಮಟ್ಟದ ಕ್ಯಾಮರಾಗಳನ್ನು ಹೊಂದಿರುವ ಡ್ರೋನ್‌ಗಳು ಈ ಮೆಟ್ರೋ ಕಂಬಗಳು, ವಯಾಡಕ್ಟ್‌ನ ಚಿತ್ರಗಳನ್ನು ಸಂಗ್ರಹ ಮಾಡಲಿವೆ. ಅವುಗಳಲ್ಲಿ ದೋಷಗಳು ಕಂಡುಬಂದರೆ, ನಿರ್ವಹಣೆ ಅಗತ್ಯವಿದ್ದರೆ ಅವುಗಳನ್ನು ಮಾಡಲು ಬಿಎಂಆರ್‌ಸಿಎಲ್‌ಗೆ ಸಹಾಯ ಮಾಡಲಿವೆ. ಮೊದಲು ಮೆಟ್ರೋ ಸಂಚಾರ ಆರಂಭವಾದ ಮಾರ್ಗದ ಪಿಲ್ಲರ್, ವಯಾಡಕ್ಟ್‌ಗಳನ್ನು ಮೊದಲು ಪರಿಶೀಲನೆಯನ್ನು ಸಹ ನಡೆಸಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಬಿಎಂಆರ್‌ಸಿಎಲ್ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಸುಮಿತ್ ಭಟ್ನಾಗರ್ ಅವರು, ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ ಪರಿಕರಗಳನ್ನು ಹೊಂದಿದ ಡ್ರೋನ್‌ಗಳು ಮೆಟ್ರೋ ಪಿಲ್ಲರ್ ಹಾಗೂ ವಯಾಡಕ್ಟ್‌ಗಳ ಕುರಿತು ಡೇಟಾವನ್ನು ಸಂಗ್ರಹಿಸುತ್ತವೆ ಎಂದು ಹೇಳಿದ್ದಾರೆ.
ಯಾವ ಸಮಸ್ಸೆಯನ್ನು AI ಪತ್ತೆ ಹಚ್ಚುತ್ತದೆ
ಕಾಂಕ್ರೀಟ್‌ನಲ್ಲಿ ಬಿರುಕುಗಳಿದ್ದಲ್ಲದೆ, ಸವಕಳಿ ಆಗಿದ್ದಲ್ಲಿ ಅಥವಾ ಜೇನುಗೂಡು ಮಾದರಿಗಳಂತಹ ಸಮಸ್ಯೆಗಳನ್ನು ಪತ್ತೆಹಚ್ಚಲು AI ಪರಿಕರಗಳು ಡೇಟಾವನ್ನು ವಿಶ್ಲೇಷಿಸಿ ಮಾಹಿತಿಯನ್ನು ನೀಡುತ್ತದೆ.
ವಯಾಡಕ್ಟ್ ಮತ್ತು ಪಿಲ್ಲರ್ ನಡುವೆ ಆಗಾಗ ದೋಷ ಕಾಣಿಸುತ್ತದೆ. ನಿರಂತರವಾಗಿ ರೈಲುಗಳು ಸಂಚಾರ ನಡೆಸುವ ಕಾರಣ ಇವುಗಳ ಮೇಲೆ ಕಣ್ಗಾವಲು ಇಡಲಾಗುತ್ತದೆ. ಎಐ ಆಧಾರಿತ ತಂತ್ರಜ್ಞಾನ ದೋಷವನ್ನು ಗುರುತಿಸುವುದು ಮಾತ್ರವಲ್ಲ, ಯಾವುದು ತುರ್ತಾಗಿ ನಿರ್ವಹಣೆ ಆಗಬೇಕು ಎಂದು ಶಿಫಾರಸು ಸಹ ಮಾಡಲಿವೆ. ಮೆಟ್ರೋ ರೈಲು ಸಂಪರ್ಕ ಸ್ಥಗಿತಗೊಳಿಸದೇ ಈ ಮಾದರಿ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲು ಬಿಎಂಆರ್‌ಸಿಎಲ್‌ಗೆ ಇದು ಸಹಾಯಕವಾಗಲಿದೆ.
ಎಐ ಆಧಾರಿತ ಡ್ರೋನ್ ಬಳಕೆ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಆದರೆ ಟೆಂಡರ್ ಕರೆಯುವ ಮೊದಲು ಯಾವ ಯಾವ ಕಾರ್ಯ ನಿರ್ವಹಣೆ ಪರಿಶೀಲನೆ ಮಾಡಬೇಕು ಎಂಬುದುನ್ನು ಅಂತಿಮಗೊಳಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಲ್ಲರ್‌ಗಳಲ್ಲಿನ ದೋಷಗಳು, ವಯಾಡಕ್ಟ್‌ನಲ್ಲಿನ ಸಮಸ್ಯೆ ಮುಂತಾದವುಗಳನ್ನು ಈ ಡ್ರೋನ್ ಕ್ಯಾಮರಾಗಳು ಪತ್ತೆ ಹಚ್ಚಿ ಇಂಜಿನಿಯರಿಂಗ್ ವಿಭಾಗಕ್ಕೆ ಕಳಿಸಲಿವೆ. ಆದ್ದರಿಂದ ಕಾಲಮಿತಿಯಲ್ಲಿ ನಿರ್ವಹಣೆಯನ್ನು ಕೈಗೊಳ್ಳಲು ಇಂಜಿನಿಯರ್‌ಗಳಿಗೆ ಸಹ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ
ಮೇಲ್ವಿಚಾರಣಾ ಕಾರ್ಯವು ವಯಾಡಕ್ಟ್‌ಗಳು ಮತ್ತು ಪಿಲ್ಲರ್‌ಗಳ ಮೇಲೆ ಪ್ರಧಾನವಾಗಿ ಕೇಂದ್ರೀಕರಿಸುತ್ತದೆ, ಇವುಗಳಲ್ಲಿ ಬಿರುಕುಗಳು ಕಂಡುಬಂದಲ್ಲಿ, ಜೇನುಗೂಡು ಕಟ್ಟಿದಲ್ಲಿ ಇದರ ಮಾಹಿತಿಯನ್ನು ನೀಡತ್ತದೆ.ಇನ್ನೂ ಎಐ ಚಾಲಿತ ವಿಶ್ಲೇಷಣೆಯು ದೋಷಗಳು ಹಾನಿಕಾರಕವೇ ಎಂಬುದನ್ನು ಗುರುತಿಸುತ್ತದೆ ಮತ್ತು ಎಪಾಕ್ಸಿ ಅಥವಾ ಇತರ ಮಧ್ಯಸ್ಥಿಕೆಗಳೊಂದಿಗೆ ಸೀಲಿಂಗ್ ಮಾಡುವಂತಹ ಸರಿಪಡಿಸುವ ಕ್ರಮಗಳನ್ನು ಶಿಫಾರಸು ಮಾಡುತ್ತದೆ ಎಂದು ಭಟ್ನಾಗರ್ ಹೇಳಿದರು.
ಬಿಎಂಆರ್‌ಸಿಎಲ್ ಎಂಜಿ ರಸ್ತೆ-ಬೈಯಪ್ಪನಹಳ್ಳಿ ಮಾರ್ಗ ಮಾತ್ರವಲ್ಲ 'ಹಳದಿ' ಮಾರ್ಗದ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿಯೂ ಈ ಮಾದರಿ ಎಐ ಕ್ಯಾಮರಾ ಬಳಕೆ ಮಾಡಲಿದೆ. ಈ ಮಾರ್ಗದಲ್ಲಿ ಶೀಘ್ರದಲ್ಲೇ ನಮ್ಮ ಮೆಟ್ರೋ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಅಲ್ಲದೇ ಇಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ಇರುವ ಕಾರಣ ಎಐ ಮಾದರಿ ಡ್ರೋನ್ ಬಳಕೆ ಮಾಡುವುದು ಸಹಾಯಕವಾಗಲಿದೆ.
ಪ್ರಸ್ತುತ, ಬೈನಾಕ್ಯುಲರ್‌ಗಳು, ಕ್ಯಾಮೆರಾಗಳು ಮತ್ತು ಹೈಡ್ರಾಲಿಕ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಂಡು ತಪಾಸಣೆಗಳನ್ನು ಮ್ಯಾನುವೆಲ್‌ಆಗಿ ನಡೆಸಲಾಗುತ್ತದೆ. ಡ್ರೋನ್‌ಗಳು ಮತ್ತು ಎಐ ಅಳವಡಿಕೆಯು ಈ ಪ್ರಯತ್ನವನ್ನು ಕಡಿಮೆ ಮಾಡುತ್ತದೆ, ನಿಖರತೆಯನ್ನು ಸುಧಾರಿಸುತ್ತದೆ ಮತ್ತು ಮೂಲಸೌಕರ್ಯದ ಸ್ಥಿತಿಯನ್ನು ವೇಗವಾಗಿ ನಿರ್ಣಯಿಸಲು ಅನುವು ಮಾಡಿಕೊಡುತ್ತದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.
ಇನ್ನೂ ಡೇಟಾವನ್ನು ಸಂಗ್ರಹಿಸಲು ಸೆನ್ಸಾರ್‌ಗಳನ್ನು ಹೊಂದಿರುವ ಡ್ರೋನ್‌ಗಳನ್ನು ಬಳಸಲಾಗುವುದು, ಇದು ಮ್ಯಾನ್ಯುಯೆಲ್ ತಪಾಸಣೆಗೆ ಸಂಬಂಧಿಸಿದ ಸಮಯ, ಅಪಾಯಗಳು ಮತ್ತು ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ. ಅಲ್ಲದೇ ರೈಲುಗಳನ್ನು ಬಳಕೆ ಮಾಡಿಕೊಂಡು ಹಳಿಗಳಲ್ಲಿನ ಸಮಸ್ಯೆಗಳನ್ನು ಸಹ ಪತ್ತೆ ಹಚ್ಚಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸುತ್ತಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.


Click it and Unblock the Notifications