ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ (Namma Metro) ಪ್ರಯಾಣವನ್ನು ದರ ಕೊನೆಗೂ ಏರಿಕೆ ಮಾಡಿದೆ. ಇಂದಿನಿಂದ (ಫೆ.09) ಪರಿಷ್ಕೃತ ದರ ಜಾರಿಗೆ ಬಂದಿದೆ. ಈ ಬಗ್ಗೆ BMRCL ಅಧಿಕೃತ ಆದೇಶ ಪ್ರಕಟಿಸಿದೆ. ಒಟ್ಟಾರೆ ಪ್ರಯಾಣ ದರ ಶೇ.46 ರಷ್ಟು ಏರಿಕೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರಯಾಣ ದರದ ಬಗ್ಗೆ ಚರ್ಚೆ ಮತ್ತು ಸಭೆಗಳು ನಡೆದಿತ್ತು. 8 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಯಾಣ ದರ ಏರಿಕೆಯಾಗಿದೆ.
ಮೆಟ್ರೋ ಪ್ರಯಾಣದಲ್ಲಿ ದರ ಗರಿಷ್ಠ 90 ರೂ., (30. ಕಿ.ಮೀ) ಕನಿಷ್ಠ 10 ರೂ. (0-2 ಕಿ.ಮೀ) ಏರಿಕೆಯಾಗಿದೆ. ಭಾನುವಾರ ಹಾಗೂ ರಾಷ್ಟ್ರೀಯ ರಜಾ ದಿನಗಳಲ್ಲಿ ಏಕರೂಪ ಸ್ಮಾರ್ಟ್ ಕಾರ್ಡಿಗೆ 10% ರಿಯಾಯಿತಿ ಪ್ರಕಟಿಸಲಾಗಿದೆ. ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ 90 ರೂ. ಬ್ಯಾಲೆನ್ಸ್ ಕಡ್ಡಾಯ ಮಾಡಲಾಗಿದೆ.

ಮೆಟ್ರೋ ರೈಲ್ವೆ 2002ರ ಸೆಕ್ಷನ್ 34 ಕಾಯಿದೆ ಅಡಿಯಲ್ಲಿ, ಕೇಂದ್ರ ಸರ್ಕಾರ 2024 ಅಕ್ಟೋಬರ್ 7ರಂದು ಹೈಕೋರ್ಟ್ ಮಾಜಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣೆಗಾಗಿ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ದೇಶದ ಇತರ ರಾಜ್ಯಗಳಲ್ಲಿನ ಮತ್ತು ಸಿಂಗಾಪುರದಲ್ಲಿನ ಮೆಟ್ರೋ ದರಗಳ ಬಗ್ಗೆ ಅಧ್ಯಯನ ನಡೆಸಿ, ದರವನ್ನು ಪರಿಷ್ಕರಿಸಲು ಸಲಹೆ ನೀಡಿತ್ತು.
ದರ ಪರಿಷ್ಕರಣೆ ಸಮಿತಿಯು ಪರಿಷ್ಕೃತ ದರದ ಶಿಫಾರಸು ವರದಿಯನ್ನು ಡಿಸೆಂಬರ್ 16ರಂದು ಸಲ್ಲಿಸಲಾಗಿತ್ತು. ಮೆಟ್ರೋ ನಿರ್ಮಾಣಕ್ಕಾಗಿ ತೆಗೆದುಕೊಂಡ ಸಾಲದ ಮೇಲಿನ ಬಡ್ಡಿ, ಕಾರ್ಯಾಚರಣಾ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮುಂತಾದ ಖರ್ಚುಗಳು ಪ್ರತಿ ವರ್ಷ ಹೆಚ್ಚಾಗುತ್ತಿರುವ ಕಾರಣ ದರ ಏರಿಕೆ ಅನಿವಾರ್ಯ ಎಂದು ಈ ಹಿಂದೆ ಅಧಿಕಾರಿಗಳು ತಿಳಿಸಿದ್ದರು. ಹೀಗಾಗಿ ಬಸ್ ದರ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರದ ಹೆಚ್ಚಳದ ಬಗ್ಗೆಯೂ ಸುದ್ದಿ ಹರಿದಾಡಿತ್ತು.
ಆದರೆ ಇತ್ತೀಚೆಗೆ ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಅಂಕುಶ ಹಾಕಿತ್ತು. ಈ ಹಿನ್ನಲೆಯಲ್ಲಿ ಈಹಿಂದೆ ಕರೆದಿದ್ದ ಪತ್ರಿಕಾಗೋಷ್ಟಿಯನ್ನು ಧಿಡೀರ್ ಆಗಿ ರದ್ದು ಮಾಡಿತ್ತು. ಈಗ ಅಂತಿಮವಾಗಿ ದರ ಏರಿಕೆ ಮಾಡಲಾಗಿದೆ. ವಿಶೇಷ ದಿನಗಳಲ್ಲಿ, ನಾನ್ ಪೀಕ್ ಅವರ್‌ಗಳಲ್ಲಿ, ಡಿಸ್ಕೌಂಟ್ ನೀಡಲು ಸಮಿತಿ ಶಿಫಾರಸು ಮಾಡಿದೆ.
ಈ ಕುರಿತಂತೆ ಎಕ್ಸ್ ಮಾಡಿರುವ ಬಿಎಂಆರ್‌ಸಿಎಲ್ " ಪ್ರಯಾಣ ದರ ಏರಿಕೆ ಕುರಿತ ಮಾಹಿತಿ: ದರ ಪರಿಷ್ಕರಣೆ ಸಮಿತಿಯ ಶಿಫಾರಸ್ಸಿನಂತೆ, ಇದೇ ಫೆಬ್ರವರಿ 9/2025 ರಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ. ಸ್ಮಾರ್ಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ರಿಯಾಯಿತಿ ಮುಂದುವರಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ" ಎಂದು ತಿಳಿಸಿದೆ.

ನಮ್ಮ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಿಸಿದ ಪ್ರಕಾರ
ಕಿ.ಮೀ ನೂತನ ಬೆಲೆ 0 ನಿಂದ 2 ಕಿ.ಮೀ 10 ರೂ.
- 2 ರಿಂದ 4 ಕಿ.ಮೀ 20 ರೂ.
- 4 ರಿಂದ 6 ಕಿ.ಮೀ 30 ರೂ.
- 6 ರಿಂದ 8 ಕಿ.ಮೀ 40 ರೂ.
- 8 ರಿಂದ 10 ಕಿ.ಮೀ 50 ರೂ.
- 10 ರಿಂದ 15 ಕಿ.ಮೀ 60 ರೂ.
- 15 ರಿಂದ 20 ಕಿ.ಮೀ 70 ರೂ.
- 20 ರಿಂದ 25 ಕಿ.ಮೀ 80 ರೂ.
ಸ್ಮಾರ್ಟ್ ಕಾರ್ಡ್ ರಿಯಾಯಿತಿ ಮುಂದುವರಿಸಿದ ಬಿಎಂಆರ್‌ಸಿಎಲ್
ಪರಿಷ್ಕೃತ ದರ ಪ್ರಕಾರ ಪ್ರಯಾಣಕ್ಕೆ ಬಳಸುವ ಸ್ಮಾರ್ಟ್ ಕಾರ್ಡಿನಲ್ಲಿ ಇನ್ನು ಮುಂದೆ ಕನಿಷ್ಠ ಮೊತ್ತ 90 ರೂ. ಹೊಂದಿರಬೇಕು. ಸದ್ಯ 50 ರೂ. ಕನಿಷ್ಠ ಮೊತ್ತ ಇದ್ದರೆ ಸಾಕಿತ್ತು. ಇದಲ್ಲದೆ ಬಿಎಂಆರ್‌ಸಿಎಲ್ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ರಿಯಾಯಿತಿಗಳನ್ನು ಮುಂದುವರಿಸಿದೆ. ಈಗಿರುವ 5% ರಿಯಾಯಿತಿ ಜೊತೆಗೆ, ಪ್ರಯಾಣಿಕರು ಪೀಕ್ ಅವರ್ಸ್‌ನಲ್ಲಿ ಅಲ್ಲದ ಸಮಯದಲ್ಲಿ ಮೆಟ್ರೋಗೆ ಪ್ರವೇಶಿಸಿದರೆ, ಅವರಿಗೆ ಹೆಚ್ಚುವರಿ 5% ರಿಯಾಯಿತಿ ಸಿಗುತ್ತದೆ. ಹೀಗಾಗಿ, ಅವರು ಒಟ್ಟು 10% ರಿಯಾಯಿತಿಯನ್ನು ಪಡೆಯಬಹುದು.


Click it and Unblock the Notifications