ಬೆಂಗಳೂರು, ಏಪ್ರಿಲ್ 5: ಬೆಂಗಳೂರು ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಬಂದಿದೆ. ನಮ್ಮ ಮೆಟ್ರೋ ನೆಟ್‌ವರ್ಕ್‌ನ 3ನೇ ಹಂತದ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲು ಕರ್ನಾಟಕ ಕ್ಯಾಬಿನೆಟ್ ಇತ್ತೀಚೆಗೆ ಅನುಮೋದನೆ ನೀಡಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) 2028 ರ ವೇಳೆಗೆ ಯೋಜನೆಯನ್ನು ಪೂರ್ಣಗೊಳಿಸಲು ಗಡುವನ್ನು ನಿಗದಿಪಡಿಸಿದೆ. ಯೋಜನೆಯು ಸುಮಾರು 15,611 ಕೋಟಿ ರೂ. ಮೊತ್ತದ್ದಾಗಿದೆ.

ಈ ಮಾರ್ಗವು ಚಾಲುಗೊಂಡ ನಂತರ ಬೆಂಗಳೂರು ನಗರದ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಬೃಹತ್ ಸಂಚಾರ ದಟ್ಟಣೆಯನ್ನು ನಿವಾರಿಸುತ್ತದೆ. ಬೆಂಗಳೂರು ನಗರ ಟ್ರಾಫಿಕ್ ಜಾಮ್‌ಗೆ ಕುಖ್ಯಾತವಾಗಿದೆ. ಹೀಗಾಗಿ ನಮ್ಮ ಮೆಟ್ರೋದಂತಹ ಸಮೂಹ ಸಾರಿಗೆ ವ್ಯವಸ್ಥೆಯು ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಿದೆ. ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ಬೆಂಗಳೂರು ಮೆಟ್ರೋ 3 ಹಂತವು ಹೊರ ವರ್ತುಲ ರಸ್ತೆ (ORR) ಉದ್ದಕ್ಕೂ ಬರಲಿದ್ದು, 44.65 ಕಿಲೋಮೀಟರ್ (ಕಿಮೀ) ದೂರದಲ್ಲಿ ಚಲಿಸುವ ನಿರೀಕ್ಷೆಯಿದೆ.
ನಮ್ಮ ಮೆಟ್ರೋ ಹಂತ 3ರ ಅಪಡೇಟ್
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸಿವಿಲ್ ಕಾಮಗಾರಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, 3ನೇ ಹಂತದ ಅಡಿಯಲ್ಲಿ ಮೊದಲ ಮೆಟ್ರೋ ಕಾರಿಡಾರ್ ಅನ್ನು ಹೆಬ್ಬಾಳ ಮತ್ತು ಜೆಪಿ ನಗರ ನಡುವೆ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಈ ಕಾರಿಡಾರ್ 32.15 ಕಿಲೋಮೀಟರ್ ಉದ್ದವನ್ನು ವ್ಯಾಪಿಸಲಿದೆ. ಎರಡನೇ ಮಾರ್ಗವು ಗೊರಗುಂಟೆಪಾಳ್ಯ, ಮಾಗಡಿ ರಸ್ತೆ, ಮೈಸೂರು ರಸ್ತೆ ಮತ್ತು ಜೆಪಿ ನಗರ ಸೇರಿದಂತೆ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದರೊಂದಿಗೆ 3ನೇ ಹಂತವು ಹೊಸಹಳ್ಳಿಯಿಂದ ಮಾಗಡಿ ರಸ್ತೆಯಿಂದ ಕಡಬಗೆರೆಗೆ ಸಂಪರ್ಕ ಕಲ್ಪಿಸಲಿದೆ.
ಇದು ಜೆಪಿ ನಗರದಿಂದ ಸಿಲ್ಕ್ ಬೋರ್ಡ್‌ಗೆ, ಸಿಲ್ಕ್ ಬೋರ್ಡ್‌ನಿಂದ ಕೆಆರ್ ಪುರಂಗೆ ಮತ್ತು ಕೆಆರ್ ಪುರಂನಿಂದ ಹೆಬ್ಬಾಳಕ್ಕೆ ಹಾದುಹೋಗುತ್ತದೆ. ಹೆಬ್ಬಾಳದಿಂದ ಮುಂದುವರಿದು ಡಾ.ರಾಜ್‌ಕುಮಾರ್ ಸ್ಮಾರಕದ ಬಳಿಯಿಂದ ತುಮಕೂರು ರಸ್ತೆ ದಾಟಿ ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ ಮೂಲಕ ಜೆಪಿ ನಗರ ಸೇರಲಿದೆ. ಇದು ಸಂಪೂರ್ಣ ಹೊರ ವರ್ತುಲ ರಸ್ತೆಯನ್ನು ಮುಟ್ಟುತ್ತದೆ ಎಂದು ಅವರು ಹೇಳಿದ್ದಾರೆ.
ನಮ್ಮ ಮೆಟ್ರೋ ಜಾಲ ವಿಸ್ತರಣೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಈಗಾಗಲೇ ಕಾರ್ಯಸಾಧ್ಯತಾ ಪರೀಕ್ಷೆ ನಡೆಸಲಾಗಿದೆ. ನಮ್ಮ ಮೆಟ್ರೋದ 3ನೇ ಹಂತದ ಕಾಮಗಾರಿ 2028 ರ ವೇಳೆಗೆ ಪೂರ್ಣಗೊಳಿಸಬಹುದು ಎಂದು ಬಿಎಂಆರ್‌ಸಿಎಲ್ ಹೇಳಿದೆ. ರಾಜ್ಯ ಸರ್ಕಾರವು ಯೋಜನೆಯ ಶೇಕಡಾ 80 ರಿಂದ 85 ರಷ್ಟು ವೆಚ್ಚವನ್ನು ಭರಿಸಲಿದೆ ಮತ್ತು ಕೇಂದ್ರದಿಂದ ಶೇಕಡಾ 13 ರಿಂದ 15 ರಷ್ಟು ನಿರೀಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications