ತುಮಕೂರು, ಮೈಸೂರಿನಿಂದ ಪ್ರತಿನಿತ್ಯ ಬೆಂಗಳೂರಿನಲ್ಲಿ ಪ್ರಯಾಣಿಸುವವರಿಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಸಿಹಿ ಸುದ್ದಿ ಕೊಟ್ಟಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿನಿಂದ ತುಮಕೂರು ಮತ್ತು ಮೈಸೂರಿಗೆ ನಮೋ ಭಾರತ ರೈಲು ಸೇವೆಯನ್ನು ಆರಂಭಿಸುವುದಾಗಿ ಶನಿವಾರ ಘೋಷಣೆ ಮಾಡಿದ್ದಾರೆ. ಈ ರೈಲುಗಳ ಸಂಚಾರದಿಂದ ಎರಡು ಪ್ರಮುಖ ನಗರಗಳಿಂದ ಬೆಂಗಳೂರಿಗೆ ಪ್ರತಿನಿತ್ಯ ಓಡಾಡುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರ ಜೊತೆ ಮಾತನಾಡಿ, ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ಈ ಸೆಮಿ ಹೈಸ್ಪೀಡ್ ರೈಲು ಸಂಚಾರ ಆರಂಭಿಸಲು ರೈಲ್ವೆ ಸಚಿವಾಲಯ ಯೋಜಿಸಿದೆ ಎಂದು ಹೇಳಿದರು.

ಬೆಂಗಳೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ, ಸಿಲಿಕಾನ್ ಸಿಟಿಯಲ್ಲಿ ರೈಲು ಸಾರಿಗೆಯನ್ನು ಸುಧಾರಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಸಬ್ ಅರ್ಬನ್ ರೈಲು ಯೋಜನೆಗಳ ಜೊತೆಯಲ್ಲಿ ಹೊಸ ನಮೋ ಭಾರತ್ ರೈಲು ಸೇವೆಯನ್ನು ಆರಂಭಿಸಲು ಯೋಜಿಸುತ್ತಿದ್ದೇವೆ. ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ನಮೋ ಭಾರತ್ ರೈಲು ಸೇವೆ ಆರಂಭಿಸಲು ಚಿಂತಿಸಲಾಗಿದೆ. ಇದರಿಂದ ಬೆಂಗಳೂರು ನಗರಕ್ಕೆ ಅಕ್ಕ ಪಕ್ಕದ ನಗರಗಳಿಂದ ಸಾರಿಗೆ ವ್ಯವಸ್ಥೆ ಸುಲಭವಾಗುತ್ತದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಯೋಜನೆಗಳು ಸಹಕಾರಿಯಾಗಿವೆ ಎಂದರು.
ಬೆಂಗಳೂರಿನಲ್ಲೇ ರೈಲು ತಯಾರಿ
ಪ್ರಸ್ತುತ ನಮೋ ಭಾರತ್ ರೈಲುಗಳನ್ನು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ನಲ್ಲಿ ತಯಾರಿಸಲಾಗುತ್ತಿದೆ. ಈ ರೈಲುಗಳು ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದ್ದು, ಬೆಂಗಳೂರಿಗೆ ಸುತ್ತಮುತ್ತಲಿನ ನಗರಗಳ ಸಂಚಾರವನ್ನು ಸುಧಾರಿಸುವ ಗುರಿ ಹೊಂದಿದೆ.
ಮಧ್ಯಮ ವರ್ಗದ ಜನರಿಗೆ ಅಗ್ಗದ ದರದಲ್ಲಿ ರೈಲು ಸೇವೆಯನ್ನು ಒದಗಿಸುವ ಗುರಿಯನ್ನು ಭಾರತೀಯ ರೈಲ್ವೆ ಹೊಂದಿದೆ. ನಮೋ ಭಾರತ್ ರೈಲುಗಳ ದರಗಳು ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ಇರಲಿದೆ. ಇದರಲ್ಲಿ ಸಂವೇದಕಗಳು ಇರುವುದರಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ನಮೋ ಭಾರತ್ ರೈಲುಗಳಲ್ಲಿ ಅತ್ಯಾಧುನಿಕ ಸುರಕ್ಷತಾ ವಿಧಾನಗಳನ್ನು ಅಳವಡಿಕೆ ಮಾಡಲಾಗಿದ್ದಯ, ಯಾವುದೇ ಅಪಾಯದ ಬಗ್ಗೆ ಲೋಕೋ ಪೈಲಟ್‌ಗೆ ಎಚ್ಚರಿಕೆ ಕೊಡುವ ಕವಚ ಸಿಸ್ಟಂ ಅನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭುಜ್ ಮತ್ತು ಅಹಮದಾಬಾದ್ ನಡುವೆ 'ನಮೋ ಭಾರತ್ ರಾಪಿಡ್ ರೈಲ್' ಸಂಚಾರಕ್ಕೆ ಚಾಲನೆ ನೀಡಿದ್ದರು. ಇದು ಭಾರತದ ಮೊದಲನೇ ವಂದೇ ಮೆಟ್ರೋ ರೈಲು ಆಗಿದ್ದು, ಅಹಮದಾಬಾದ್ ಬುಜ್ ನಡುವೆ ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ 360 ಕಿಲೋಮೀಟರ್ ದೂರವನ್ನು 5 ಗಂಟೆ 45 ನಿಮಿಷಗಳಲ್ಲಿ ಸಂಚರಿಸುತ್ತದೆ ಎಂದು ವರದಿಯಾಗಿದೆ.
ತುಮಕೂರು, ಮೈಸೂರು ನಗರಗಳಿಗೆ ಬೆಂಗಳೂರಿನಿಂದ ವಂದೇ ಮೆಟ್ರೋ ರೈಲು ಸೇವೆ ಆರಂಭವಾದ ಬಳಿಕ, ಪ್ರತಿನಿತ್ಯ ಸಂಚರಿಸುವ ಐಟಿ ಉದ್ಯೋಗಿಗಳು, ನೌಕಕರು, ವಿದ್ಯಾರ್ಥಿಗಳು ವ್ಯಾಪಾರಿಗಳು ಭಾರಿ ಅನುಕೂಲವಾಗಲಿದೆ. ರೈಲು ದರ ಕೂಡ ಕಡಿಮೆ ಇರುತ್ತದೆ ಎಂದು ಸಚಿವರು ಭರವಸೆ ಕೊಟ್ಟಿರುವುದು, ರೈಲು ಸಂಚಾರ ಆರಂಭಕ್ಕೆ ಜನ ಕಾಯುವಂತೆ ಮಾಡಿದೆ.


Click it and Unblock the Notifications