ನಂದಿನಿಗೆ ಸರಿ ಸಾಟಿಯಿಲ್ಲ! ಮೂರೇ ದಿನದಲ್ಲಿ 2,250 ಮೆಟ್ರಿಕ್ ಟನ್ ಹಿಟ್ಟು ಮಾರಾಟ ಹೌದು, ಕನ್ನಡಿಗರ ಸ್ವಾಭಿಮಾನದ ಪ್ರತೀಕವಾದ ನಂದಿನಿಯ ರುಚಿಕರ ದೋಸೆ ಇಡ್ಲಿ ಹಿಟ್ಟಿಗೆ ಗ್ರಾಹಕರು ಮನಸೋತಿದ್ದು, ಮಾರುಕಟ್ಟೆಗೆ ಲಗ್ಗೆಯಿಟ್ಟ ಮೂರೇ ದಿನಗಳಲ್ಲಿ ದಾಖಲೆಯ ಮಟ್ಟದಲ್ಲಿ ಮಾರಾಟವಾಗುವ ಮೂಲಕ ತನ್ನ ಛಾಪು ಮೂಡಿಸಿದೆ.ಇನ್ನುಂದೆ ನಂದಿನಿ ಬ್ರ್ಯಾಂಡ್ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಮತ್ತೊಂದು ಮೈಲಿಗಲ್ಲು ಬರೆಯಲು ಸಜ್ಜಾಗಿದೆ.
ಇತ್ತೀಚಿಗಷ್ಟೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೆಡಿ ಟು ಕುಕ್' ದೋಸೆ ಹಿಟ್ಟು ಮತ್ತು ಇಡ್ಲಿ ಹಿಟ್ಟು ಕೂಡ ಕೆಎಂಎಫ್ ಪರಿಚಯ ಮಾಡಿದ್ದು ಇಡ್ಲಿ ಹಾಗೂ ದೋಸೆ ಹಿಟ್ಟಿಗೆ ಭಾರೀ ಬೇಡಿಕೆ ಇದೆ. ಈ ಯಶಸ್ವಿ ಬೆನ್ನಲ್ಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಈ ಹಿಟ್ಟನ್ನು ವಿತರಿಸಲು ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ (KMF) ನಿರ್ಧಾರ ಮಾಡಿದೆ.

ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಇದು ಲಭ್ಯವಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆರಂಭಿಸಿದ ಮೂರು ದಿನಗಳಲ್ಲೇ 2250 ಮೆಟ್ರಿಕ್ ಟನ್‌ಗಳಷ್ಟು ಹಿಟ್ಟು ಮಾರಾಟವಾಗಿದೆ. ಈ ಹಿನ್ನೆಲೆ ಮುಂದಿನ ಒಂದು ವಾರದೊಳಗೆ ಇತರ ಜಿಲ್ಲೆಗಳಲ್ಲೂ ನಂದಿನಿ ಹಿಟ್ಟಿನ ಮಾರಾಟ ಆರಂಭ ಮಾಡಲು ಕರ್ನಾಟಕ ಹಾಲು ಒಕ್ಕೂಟ ಕೆಎಂಎಫ್ (ಕೆಎಂಎಫ್) ಮುಂದಾಗಿದೆ.
ದೋಸೆ ಹಿಟ್ಟಿಗೆ ಶೇ.5 ರಷ್ಟು ವೇ-ಪ್ರೋಟಿನ್
ನಂದಿನಿ ಬ್ರ್ಯಾಂಡ್ ನ ದೋಸೆ ಹಿಟ್ಟಿನಲ್ಲಿ ವೇ-ಪ್ರೊಟೀನ್ ಇದೆ.ಇದರಿಂದ ಜಿಮ್, ಡಯಟ್ ಬಗ್ಗೆ ಹೆಚ್ಚಿನ ಆಸಕ್ತಿ ತೋರುವವರು ಕೂಡ ಈ ಹಿಟ್ಟಿನ್ನು ಬಳಕೆ ಮಾಡುತ್ತಿದ್ದಾರೆ ಆದ್ದರಿಂದ ವ್ಯಾಪಾರ ಜೋರಾಗಿದೆ.
ಎರಡು ಮಾದರಿಯ ಪ್ಯಾಕ್‌ನಲ್ಲಿ ಹಿಟ್ಟು ಮಾರುಕಟ್ಟೆಗೆ ಲಗ್ಗೆ
ಬೆಂಗಳೂರಲ್ಲಿ ನಂದಿನಿ 450 ಗ್ರಾಂ ಪ್ಯಾಕ್ ದೋಸೆ ಹಿಟ್ಟಿಗೆ 40 ರೂಪಾಯಿ ಹಾಗೂ 900 ಗ್ರಾಂ ದೋಸೆ ಹಿಟ್ಟಿಗೆ 80 ರೂಪಾಯಿ ದರ ನಿಗದಿಪಡಿಸಲಾಗಿದೆ. ಇದೇ ಪ್ರಥಮ ಬಾರಿಗೆ ದೋಸೆ ಹಿಟ್ಟಿಗೆ ಶೇ.5 ರಷ್ಟು ವೇ-ಪ್ರೋಟಿನ್ ಸೇರಿಸಿ ಜನರಿಗೆ ನೀಡುತ್ತಿರುವುದು.
ಈಗಾಗಲೇ ಕರ್ನಾಟಕದ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ಇಡ್ಲಿ, ದೋಸೆ ಹಿಟ್ಟುಗಳಿವೆ. ಆದರೆ ಖಾಸಗಿ ಕಂಪನಿಗಳ ಇಡ್ಲಿ, ದೋಸೆ ಹಿಟ್ಟಿಗೆ ಹೋಲಿಕೆ ಮಾಡಿದರೆ ಇದರ ನಂದಿನ ಹಿಟ್ಟುಗಳ ದರ ಕಡಿಮೆ ಇದೆ.ಹಾಹಾಗಿ ಇತರಿಗೆ ಪೈಪೋಟಿ ನೀಡಲು ಕೆಎಂಎಫ್ ಕರ್ನಾಟಕದ ಪ್ರಸಿದ್ಧ ಬ್ರಾಂಡ್ ಆದ ನಂದಿನಿ ಬ್ರಾಂಡ್ ಹೆಸರಿನಲ್ಲಿ ದೋಸೆ, ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ತಂದಿದೆ ಎಂದು ಹೇಳಬಹುದು.
ನಂದಿನಿ ಈಗಾಗಲೇ ಹಲವು ಉತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ಜನರ ಮನಗೆದ್ದಿರುವ ನಂದಿನಿ ಬ್ರ್ಯಾಂಡ್, ಇದೀಗ ತನ್ನ ಹೊಸ ಪ್ರಾಡಕ್ಟ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅವರು ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶದ್ಯಾಂತ ಮಾರುಕಟ್ಟೆಯನ್ನು ಸೃಷ್ಟಿ ಮಾಡಿಕೊಳ್ಳುತ್ತದೆ ಮತ್ತು ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ಈಗಲೇ ತಲುಪುತ್ತಿದೆ.
ಇನ್ನೂ ದೂರದ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳ ಪ್ರಮುಖ ನಗರಗಳಲ್ಲೂ ನಂದಿನಿ ಹಾಲಿಗೆ ಬೇಡಿಕೆ ಬರುತ್ತಿದೆ. ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿಯ ಸುಪ್ರಸಿದ್ಧ ಲಡ್ಡು ಪ್ರಸಾದವನ್ನು ನಂದಿನಿ ತುಪ್ಪದಿಂದ ಸಿದ್ಧಪಡಿಸಲಾಗುತ್ತಿದೆ.
ಹೀಗೆ ನಂದಿನಿಯ ನಾನಾ ಉತ್ಪನ್ನಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಕನ್ನಡಿಗರ ಬ್ರ್ಯಾಂಡ್ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications