ನಮ್ಮ ವಂದೇ ಭಾರತ್ (Vande Bharat Express) ಇಂದು ಹಲವರ ಜೀವನಾಡಿಯಾಗಿದೆ. ಎಲ್ಲಾದರೂ ಟ್ರಾವೆಲ್ ಮಾಡುವಾಗ ಅಗತ್ಯವಾಗಿ ಬೇಕಾಗುವ ಸಾರಿಗೆ ವ್ಯವಸ್ಥೆಯಲ್ಲಿ ರೈಲು ಕೂಡಾ ಒಂದು. ಈಗಾಗಲೇ ಬೆಂಗಳೂರು ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಮೋದಿ ಸರ್ಕಾರ (Modi Govt) ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಮತ್ತಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಶನಿವಾರ (ನ.08) ಒಟ್ಟು 4 ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಲಾಂಚ್ ಮಾಡಿದ್ದಾರೆ.

ಹೌದು, ಪ್ರಧಾನಿ ಮೋದಿ ಶನಿವಾರ ತಮ್ಮ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ್ದರು. ಈ ವೇಳೆ ಡಿಜಿಟಲ್ ಮೂಲಕ ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನ ತೋರಿಸಿದ್ದಾರೆ. ಹಾಗಿದ್ರೆ ಆ ಸ್ಥಳಗಳು ಯಾವುದೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಹೈಸ್ಪೀಡ್ ರೈಲು ಎಂದು ಗುರುತಿಸಿಕೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಇಂದು ಭಾರೀ ಬೇಡಿಕೆಯಿದೆ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಇದು ಗುರುತಿಸಿಕೊಂಡಿದ್ದಲ್ಲದೇ ಪ್ರವಾಸೋದ್ಯಮಗಳಿಗೂ ಇದು ಉತ್ತೇಜನ ನೀಡುತ್ತದೆ. ಅಲ್ಲದೇ ಪ್ರಯಾಣ ಸಮಯವನ್ನು ಸಹ ಕಡಿಮೆ ಮಾಡಿ, ಪ್ರಯಾಣಿಕರಿಗೆ ಪ್ರಯೋಜನ ನೀಡುತ್ತದೆ.
ದೇಶಕ್ಕೆ ಬಂದು 4 "ವಂದೇ ಭಾರತ್ ಎಕ್ಸ್‌ಪ್ರೆಸ್"!
ಪ್ರಧಾನಿ ಮೋದಿ ಶನಿವಾರ ನಾಲ್ಕು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿಸಿದ್ದಾರೆ. ಈ ರೈಲುಗಳು ಬನಾರಸ್-ಖಜುರಾಹೊ, ಲಕ್ನೋ-ಸಹಾರನ್‌ಪುರ, ಫಿರೋಜ್‌ಪುರ-ದೆಹಲಿ ಮತ್ತು ಎರ್ನಾಕುಲಂ-ಬೆಂಗಳೂರು ಮಾರ್ಗಗಳಲ್ಲಿ ಸಂಚಾರ ಮಾಡಲಿದೆ. ಹಸಿರು ನಿಶಾನೆ ತೋರಿಸಿದ ನಂತರ ಪ್ರಧಾನಿ ಮೋದಿ, ಇದನ್ನು "ಅಭಿವೃದ್ಧಿಯ ಹಬ್ಬ" ಎಂದು ಕರೆದರು.
ದೇಶವನ್ನು ಹಾಡಿ ಹೊಗಳಿದ "ನಮೋ"!
ಹೊಸ ವಂದೇ ಭಾರತ್ ರೈಲುಗಳ ಬಿಡುಗಡೆ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ವಂದೇ ಭಾರತ್, ನಮೋ ಭಾರತ್, ಅಮೃತ್ ಭಾರತ್‌ನಂತಹ ರೈಲುಗಳು ಇಂದು ಭಾರತೀಯ ರೈಲ್ವೆಯ ಭವಿಷ್ಯಕ್ಕೆ ಹೊಸ ಅಡಿಪಾಯ ಹಾಕುತ್ತಿದೆ" ಎಂದು ಹೇಳಿದರು. ಇದು ಕೇವಲ ರೈಲು ಯೋಜನೆಗಳಲ್ಲಿ, ಇದೊಂದು ಭಾರತೀಯ ರೈಲ್ವೇಯ ಬದಲಾವಣೆಗಾಗಿ ತಂದಿರುವ ರಾಷ್ಟ್ರೀಯ ಅಭಿಯಾನ ಎಂದರು. ಅಲ್ಲದೇ ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು "ಭಾರತೀಯರು, ಭಾರತೀಯರಿಗಾಗಿ ನಿರ್ಮಿಸಿದ್ದು" ಎಂದು ಬಣ್ಣಿಸಿದರು.
ನಾಲ್ಕು ವಂದೇ ಭಾರತ್ ರೈಲಿನ ಸಂಚಾರದ ವಿವರ:
ಬನಾರಸ್-ಖಜುರಾಹೋ ವಂದೇ ಭಾರತ್: ವಾರಣಾಸಿ, ಪ್ರಯಾಗ್‌ರಾಜ್, ಚಿತ್ರಕೂಟ ಮತ್ತು ಖಜುರಾಹೋವನ್ನು ಇದು ಸಂಪರ್ಕಿಸಲಿದೆ. ಈಗಾಗಲೇ ಇರುವ ರೈಲುಗಳಿಗೆ ಹೋಲಿಸಿದ್ರೆ, ಈ ವಂದೇ ಭಾರತ್ ರೈಲು 2 ಗಂಟೆ 40 ನಿಮಿಷಗಳಷ್ಟು ಉಳಿಸುತ್ತದೆ.
ಲಕ್ನೋ-ಸಹಾರನ್‌ಪುರ: ಲಕ್ನೋ, ಬರೇಲಿ, ಮೊರಾದಾಬಾದ್, ಸಹಾರನ್‌ಪುರ ಸೇರಿ ಮಧ್ಯಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಸಂಚರಿಸಲಿದೆ. 7 ಗಂಟೆ 45 ನಿಮಿಷಗಳಲ್ಲಿ ಈ ರೈಲು ಸಂಚರಿಸಿ, ಒಂದು ಗಂಟೆಯ ಪ್ರಯಾಣ ಉಳಿಸಲಿದೆ.
ಫಿರೋಜ್‌ಪುರ-ದೆಹಲಿ: ದೆಹಲಿ ಮತ್ತು ಫೀರೋಜ್‌ಪುರ, ಬಟಿಂಡಾ, ಪಟಿಯಾಲದಂತಹ ಪಂಜಾಬ್ ನಗರಗಳ ಮೂಲಕ ಈ ರೈಲು ಸಂಚಾರ ಮಾಡಲಿದೆ. ಅಲ್ಲದೇ ಈ ರೈಲು ಗಡಿ ಪ್ರದೇಶಗಳಲ್ಲಿ ವ್ಯಾಪಾರೋದ್ಯಮಕ್ಕೆ ಹೆಚ್ಚಿನ ಬೆಂಬಲ ನೀಡಲಿದೆ.
ಎರ್ನಾಕುಲಂ-ಬೆಂಗಳೂರು: ಕೇರಳ, ತಮಿಳುನಾಡು, ಬೆಂಗಳೂರು ನಗರಗಳನ್ನು ಇದು ಸಂಪರ್ಕಿಸಲಿದೆ. ಈ ಮೂಲಕ 8 ನಿಲ್ದಾಣಗಳಲ್ಲಿ ಸಂಚಾರ ಮಾಡಲಿರುವ ಈ ರೈಲು ಹಲವು ಅಭಿವೃದ್ಧಿಗಳಿಗೆ ಸಾಕ್ಷಿಯಾಗಲಿದೆ.


Click it and Unblock the Notifications