ಅದಾನಿ ಗ್ರೂಪ್‌ನ ಸಂಸ್ಥೆಯಾದ ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) 4 ಹೊಸ ಪ್ರಾದೇಶಿಕ ಚಾನೆಲ್‌ಗಳನ್ನು ಆರಂಭ ಮಾಡಲು ಆಗಸ್ಟ್ 17, 2023 ರಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅನುಮೋದನೆಯನ್ನು ನೀಡಿದೆ. ಈ ನಾಲ್ಕು ಚಾನೆಲ್‌ಗಳ ಆರಂಭಕ್ಕೆ ಅಸ್ತು ಲಭ್ಯವಾದ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಎನ್‌ಡಿಟಿವಿ ಸ್ಟಾಕ್ ಏರಿಕೆಯಾಗಿದೆ.
ಎನ್‌ಡಿಟಿವಿಯ ಎನ್‌ಡಿಟಿವಿ ರಾಜಸ್ಥಾನ, ಎನ್‌ಡಿಟಿವಿ ಮಧ್ಯಪ್ರದೇಶ/ ಛತ್ತೀಸ್‌ಗಢ, ಎನ್‌ಡಿಟಿವಿ ಗುಜರಾತಿ, ಎನ್‌ಡಿಟಿವಿ ಮರಾಠಿ ಎಂಬ ನಾಲ್ಕು ಚಾನೆಲ್‌ಗಳನ್ನು ಎನ್‌ಡಿಟಿವಿ ಆರಂಭ ಮಾಡಿದೆ. ಇದಲ್ಲದೆ, ಕಂಪನಿಯು ಮುಂದಿನ ವಾರ ಆಗಸ್ಟ್ 21, 2023 ರಂದು ಎನ್‌ಡಿಟಿವಿ ಮಧ್ಯ ಪ್ರದೇಶ / ಛತ್ತೀಸ್‌ಗಢ ಅನ್ನು ಪ್ರಾರಂಭ ಮಾಡುತ್ತದೆ ಎಂದು ಕಂಪನಿಯು ಫೈಲಿಂಗ್‌ನಲ್ಲಿ ತಿಳಿಸಿದೆ.

ಎನ್‌ಡಿಟಿವಿಯ ಫೈಲಿಂಗ್ ಪ್ರಕಾರ "ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಆಗಸ್ಟ್ 17, 2023 ರ ಪತ್ರದ ಮೂಲಕ ಎನ್‌ಡಿಟಿವಿ ಮಧ್ಯಪ್ರದೇಶ/ ಛತ್ತೀಸ್‌ಗಢ, ಎನ್‌ಡಿಟಿವಿ ರಾಜಸ್ಥಾನ, ಎನ್‌ಡಿಟಿವಿ ಮರಾಠಿ, ಎನ್‌ಡಿಟಿವಿ ಗುಜರಾತಿ ಎಂಬ ನಾಲ್ಕು ಚಾನೆಲ್‌ಗಳನ್ನು ಆರಂಭ ಮಾಡಲು ಅನುಮೋದನೆಯನ್ನು ನೀಡಲಾಗಿದೆ," ಎಂದು ಉಲ್ಲೇಖ ಮಾಡಲಾಗಿದೆ.
ಇದಲ್ಲದೆ, "ಕಂಪನಿಯು ಆಗಸ್ಟ್ 21, 2023 ರಂದು 'ಎನ್‌ಡಿಟಿವಿ ಮಧ್ಯ ಪ್ರದೇಶ / ಛತ್ತೀಸ್‌ಗಢ' ಎಂಬ ಚಾನಲ್ ಅನ್ನು ಪ್ರಾರಂಭಿಸುತ್ತದೆ. ಇತರ ಚಾನೆಲ್‌ಗಳ ಪ್ರಾರಂಭ ದಿನಾಂಕವನ್ನು ಅಂತಿಮಗೊಳಿಸಿದ ನಂತರ ಸರಿಯಾಗಿ ತಿಳಿಸಲಾಗುತ್ತದೆ," ಎಂದು ಎನ್‌ಡಿಟಿವಿಯ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ.
ಎನ್‌ಡಿಟಿವಿ ಷೇರು ಏರಿಕೆ
ಶುಕ್ರವಾರ ಎನ್‌ಡಿಟಿವಿಯ ಷೇರುಗಳು ಬಿಎಸ್‌ಇಯಲ್ಲಿ ಪ್ರತಿ ಷೇರಿಗೆ 220.85 ರೂಪಾಯಿಯಂತೆ ವಹಿವಾಟು ಪ್ರಾರಂಭ ಮಾಡಿದೆ. ಈ ಸಮಯಕ್ಕೆ ಎನ್‌ಡಿಟಿವಿ ಷೇರು ಶೇಕಡ 2.49ರಷ್ಟು ಜಿಗಿತ ಕಂಡು, 226.50 ರೂಪಾಯಿಯಂತೆ ವಹಿವಾಟು ನಡೆಸುತ್ತಿದೆ. ಈ ಹಿಂದಿನ ಮುಕ್ತಾಯದ ಅವಧಿಯಲ್ಲಿ ಶೇಕಡ 1.90ರಷ್ಟು ಏರಿಕೆಯಾಗಿ 221 ರೂಪಾಯಿ ಆಗಿದೆ. 52 ವಾರದ ಗರಿಷ್ಠ ಮಟ್ಟ 567.85 ರೂಪಾಯಿ, 52 ವಾರಗಳ ಕನಿಷ್ಠ ಮಟ್ಟ 167.05 ರೂಪಾಯಿ ಆಗಿದೆ.
ಎನ್‌ಡಿಟಿವಿ ಷೇರು ಒಂದು ವಾರದ ಅವಧಿಯಲ್ಲಿ ಶೇಕಡ 0.76ರಷ್ಟು ಗಳಿಸಿದರೆ, 3 ತಿಂಗಳಲ್ಲಿ ಅದು ಶೇಕಡ 31.01ರಷ್ಟು ಗಳಿಸಿದೆ. 1 ವರ್ಷದಲ್ಲಿ ಎನ್‌ಡಿಟಿವಿ ಷೇರು ಶೇಕಡ 32.32 ರಷ್ಟು ಕುಸಿತ ಕಂಡಿದೆ. 2 ಮತ್ತು 3 ವರ್ಷಗಳಲ್ಲಿ ಎನ್‌ಡಿಟಿವಿ ಷೇರುಗಳು ಕ್ರಮವಾಗಿ ಶೇಕಡ 193.22 ಮತ್ತು ಶೇಕಡ 520 ರಷ್ಟು ರಿಟರ್ನ್ ಅನ್ನು ನೀಡಿದೆ. 5 ವರ್ಷಗಳಲ್ಲಿ, ಎನ್‌ಡಿಟಿವಿ ಶೇಕಡ 512.40 ರಷ್ಟು ಆದಾಯವನ್ನು ನೀಡಿದೆ. ಎನ್‌ಡಿಟಿವಿಯ ಮಾರುಕಟ್ಟೆ ಮೌಲ್ಯ 1,488.67 ಕೋಟಿ ರೂಪಾಯಿ ಆಗಿದೆ.
ಎನ್‌ಡಿಟಿವಿ ಬಗ್ಗೆ ಮಾಹಿತಿ
ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) ಅದಾನಿ ಗ್ರೂಪ್ ಕಂಪನಿಯಾದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ನವದೆಹಲಿಯ ಈ ಮಾಧ್ಯಮವು ಕಾಲು ಶತಮಾನಕ್ಕೂ ಹೆಚ್ಚು ಕಾಲ ಭಾರತದ ಸುದ್ದಿ ದೂರದರ್ಶನ ಮತ್ತು ಡಿಜಿಟಲ್ ಪತ್ರಿಕೋದ್ಯಮದಲ್ಲಿರುವ ಸಂಸ್ಥೆಯಾಗಿದೆ.


Click it and Unblock the Notifications