ಕಾಂಗ್ರೆಸ್ಸಿನ ಹಿರಿಯ ಮುಖಂಡ ಶಶಿ ತರೂರ್ ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ದೋಷಗಳ ಕುರಿತಾಗಿ ಮಂಗಳವಾರ ಕೇಂದ್ರ ಸರ್ಕಾರದ ಮೇಲೆ ದಾಳಿ ನಡೆಸಿದ್ದು, ಇದಕ್ಕಾಗಿ 4,200 ಕೋಟಿ ಖರ್ಚು ಮಾಡಬೇಕಿತ್ತಾ ಎಂದು ಕಿಡಿಕಾರಿದ್ದಾರೆ.
ಹೊಸ ತೆರಿಗೆ ಪೋರ್ಟಲ್ ಅನ್ನು ಬಳಕೆದಾರರ ಸ್ನೇಹಿಯನ್ನಾಗಿ ಮಾಡಲು ಸರ್ಕಾರ ವಿಫಲವಾಗಿದೆ ಮತ್ತು ಬದಲಾಗಿ ''ಅವ್ಯವಸ್ಥೆ''ಯನ್ನು ಸೃಷ್ಟಿಸಿದೆ ಎಂದು ತರೂರ್ ಆರೋಪಿಸಿದ್ದಾರೆ.
ಅಖಿಲ ಭಾರತ ವೃತ್ತಿಪರರ ಕಾಂಗ್ರೆಸ್ ಅಧ್ಯಕ್ಷರಾಗಿರುವ ತರೂರ್, ಆದಾಯ ತೆರಿಗೆ ಪೋರ್ಟಲ್ ಬದಲಾವಣೆಯು ವಿನಾಶಕಾರಿಯಾಗಿದೆ ಮತ್ತು ಈ ಕುರಿತಾಗಿ ಚಾರ್ಟರ್ಡ್ ಅಕೌಂಟೆಂಟ್‌ಗಳು(CA) ತಮಗೆ ಮಾಹಿತಿ ನೀಡಿದ್ದಾರೆ, ಸಾಮಾನ್ಯ ಲಾಗಿಂಗ್ ಸಮಯಕ್ಕಿಂತ ಹೆಚ್ಚಿನ ತೊಂದರೆಗಳು ಸೇರಿವೆ ಎಂದಿದ್ದಾರೆ.

ಹೊಸ ಪೋರ್ಟಲ್‌ನ ಬಹುತೇಕ ಎಲ್ಲಾ ವೈಶಿಷ್ಟ್ಯಗಳು ಕಾರ್ಯನಿರ್ವಹಿಸದ ಕಾರಣ ಐಟಿಆರ್ (ಆದಾಯ ತೆರಿಗೆ ರಿಟರ್ನ್) ಫೈಲಿಂಗ್, 15 ಸಿಎ / ಸಿಬಿ ಫಾರ್ಮ್‌ಗಳು, ಮೇಲ್ಮನವಿಗಾಗಿ ಡೇಟಾ ತಯಾರಿಕೆ ಸ್ಥಗಿತಗೊಂಡಿದೆ ಎಂದು ತರೂರ್ ಆರೋಪಿಸಿದ್ದಾರೆ.
"ಜೂನ್‌ನಲ್ಲಿ ಆದಾಯ ತೆರಿಗೆ ಪೋರ್ಟಲ್ ಅನ್ನು ಬದಲಾಯಿಸಲು ಸರ್ಕಾರ ಏಕೆ ಮುಂದಾಯಿತು ಎಂಬುದು ಸ್ಪಷ್ಟವಾಗಿಲ್ಲ. ಹಣಕಾಸು ವರ್ಷದ ಅಂತ್ಯದ ಮೊದಲು ಅಥವಾ ಮುಂದಿನ ವರ್ಷ ಪ್ರಾರಂಭವಾಗುವ ಮುನ್ನವೇ, ಅದರಲ್ಲೂ ಈ ಕಷ್ಟದ ಸಮಯದಲ್ಲಿ ಪೋರ್ಟಲ್ ಬದಲಾವಣೆ ಮಾಡಿರುವುದು ಸರಿಯಲ್ಲ'' ಎಂದು ತರೂರ್ ಅಭಿಪ್ರಾಯ ಪಟ್ಟಿದ್ದಾರೆ.
ಹಳೆಯ ಪೋರ್ಟಲ್ ಹಲವಾರು ವರ್ಷಗಳ ಕಾಲ ಸುಗಮವಾಗಿ ನಡೆಯುತ್ತಿರುವಾಗ, ಹೊಸ ಆದಾಯ ತೆರಿಗೆ ಪೋರ್ಟಲ್‌ನ ಅವಶ್ಯಕತೆ ಏನು ಮತ್ತು ಆದಾಯ ತೆರಿಗೆ ಪಾವತಿದಾರರು ಸಾಮಾನ್ಯವಾಗಿ ತಮ್ಮ ರಿಟರ್ನ್ಸ್ ಮತ್ತು ಕ್ಲೈಮ್ ಮರುಪಾವತಿಗಳನ್ನು ಸಲ್ಲಿಸುವಾಗ ಗರಿಷ್ಠ ಸಮಯ ಕಳೆಯುವ ಈ ಪೋರ್ಟಲ್ ಅನ್ನು ಏಕೆ ಬದಲಾಯಿಸಲಾಯಿತು ಎಂದು ಅವರು ಸರ್ಕಾರವನ್ನು ಕೇಳಿದರು.


Click it and Unblock the Notifications