ಬೆಂಗಳೂರು: ಹಬ್ಬದ ಸೀಸನ್‌ನ ಗದ್ದಲಕ್ಕೆ ಈಗಾಗಲೇ ಬೆಂಗಳೂರು (Bengaluru) ಸಿದ್ಧವಾಗಿದೆ. ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಾರ್ಕೆಟ್‌ಗಳಲ್ಲು ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಮಧ್ಯೆ ಹೆಬ್ಬಾಳ ಫ್ಲೈಓವರ್ ಬಳಿಯ ಜಕ್ಕೂರಿನಿಂದ ಯಲಹಂಕದ ಕಡೆಗೆ ಹೊಸದಾಗಿ ನಿರ್ಮಿಸಲಾದ ಸರ್ವೀಸ್ ರಸ್ತೆಯು (New Service Road) ಶುಕ್ರವಾರ ಮಧ್ಯಾಹ್ನದಿಂದ (ಅ.17) ಕಾರ್ಯಾರಂಭ ಮಾಡಲಿದೆ ಎಂದು ವರದಿಯಾಗಿದೆ. ಇನ್ನು ಈ ಹೊಸ ರಸ್ತೆಯು ಹಬ್ಬದ ಸಂದರ್ಭದಲ್ಲಿ ವಿಮಾನ ನಿಲ್ದಾಣದ (Airport) ಮಾರ್ಗದಲ್ಲಿ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ ಎಂಬ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜನದಟ್ಟಣೆ ತಡೆಯಲು ವಿಶೇಷ ಕ್ರಮ
ಹೆಬ್ಬಾಳ ಫ್ಲೈಓವರ್ ಸುತ್ತಮುತ್ತ ಹಬ್ಬದ ಹಿನ್ನೆಲೆ ಟ್ರಾಫಿಕ್ ದಟ್ಟಣೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆ ಟ್ರಾಫಿಕ್‌ಸಮಸ್ಯೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿಶೇಷ ಕ್ರಮ ಕೈಗೊಂಡಿರುವುದಾಗಿ ಉತ್ತರ ವಿಭಾಗದ ಟ್ರಾಫಿಕ್ ಡೆಪ್ಯೂಟಿ ಕಮಿಷನರ್ ಆಫ್ ಪೊಲೀಸ್ ಜಯಪ್ರಕಾಶ್ ತಿಳಿಸಿದ್ದಾರೆ. "ಶುಕ್ರವಾರ ಸಂಜೆಯಿಂದ ಟ್ರಾಫಿಕ್‌ನಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಈ ಸಮಸ್ಯೆಯನ್ನು ತಪ್ಪಿಸಲು ಎರಡು ಕ್ರಮಗಳನ್ನು ಕೈಗೊಳ್ಳಲಾಗಿದೆ. ವೆಟರಿನರಿ ಕಾಲೇಜಿನಿಂದ ಬರುವ ಒಂದೇ ಮಾರ್ಗವನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿ, ಅಲ್ಲಿನ ಬಸ್‌ಗಳನ್ನು ಹೊಸ ಸರ್ವೀಸ್ ರಸ್ತೆಗೆ ಸ್ಥಳಾಂತರಿಸಲಾಗುವುದು. ಜೊತೆಗೆ, ಫ್ಲೈಓವರ್‌ನ ಡೌನ್ ರ್‍ಯಾಂಪ್‌ನಿಂದ ಬರುವ ಬಸ್‌ಗಳನ್ನೂ ಈ ಹೊಸ ರಸ್ತೆಗೆ ವರ್ಗಾಯಿಸಲಾಗುವುದು," ಎಂದು ಜಯಪ್ರಕಾಶ್ ತಿಳಿಸಿದ್ದಾರೆ.
ಇನ್ನು ಕಾರ್ಯಾರಂಭಗೊಂಡ ಈ ಹೊಸ ಸರ್ವೀಸ್ ರೋಡ್ ಸುಮಾರು 10 ಮೀಟರ್ ಅಗಲ, 2.5 ಮೀಟರ್ ಯುಟಿಲಿಟಿ ಡಕ್ಟ್ ಮತ್ತು 1.5 ಕಿಮೀ ಒಳಚರಂಡಿಯನ್ನು ಸಹ ಒಳಗೊಂಡಿದೆ ಎನ್ನಲಾಗಿದೆ. ಅಲ್ಲದೇ ಈ ವಿಶೇಷ ನಿರ್ಧಾರದಿಂದ ವಿಮಾನ ನಿಲ್ದಾಣದ ಮಾರ್ಗದಲ್ಲಾಗುವ ಟ್ರಾಫಿಕ್ ಪ್ರಾಬ್ಲಮ್ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಜಯಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ದೂರು ಮತ್ತು ಪರಿಸ್ಥಿತಿ
ಹೆಬ್ಬಾಳ ಫ್ಲೈಓವರ್ ಮತ್ತು ಹೆದ್ದಾರಿಯ ಟ್ರಾಫಿಕ್ ಕಳೆದ ಕೆಲವು ವಾರಗಳಿಂದ ಸ್ಥಿರವಾಗಿದ್ದರೂ, ಸರ್ವೀಸ್ ರಸ್ತೆಗಳು ಮತ್ತು ಒಳರಸ್ತೆಗಳಲ್ಲಿ ದಟ್ಟಣೆಯು ಹೆಚ್ಚು ಕಾಡುತ್ತಿದೆ ಎಂದು ದಿನನಿತ್ಯದ ಪ್ರಯಾಣಿಕರು ದೂರಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಲಹೆ
ದೀಪಾವಳಿ ಹಬ್ಬ ಇನ್ನೇನು ಎರಡು ದಿನಗಳಲ್ಲಿ ಬರಲಿದೆ. ಈ ಹಿನ್ನೆಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KAI) ಅಕ್ಟೋಬರ್ 15 ರಂದು ಪ್ರಯಾಣಿಕರಿಗೆ ಸಲಹೆಯೊಂದನ್ನು ಹೊರಡಿಸಿದ್ದು, "ಪ್ರಯಾಣಿಕರು ತಮ್ಮ ಪ್ರಯಾಣ, ಇತರ ಕೆಲಸಗಳಿಗಾಗಿ ಸಾಕಷ್ಟು ಸಮಯವನ್ನು ಮೀಸಲಿಡಲು ಮುಂಚಿತವಾಗಿ ಆಗಮಿಸಬೇಕು," ಎಂದು ಸಲಹೆಯಲ್ಲಿ ತಿಳಿಸಲಾಗಿದೆ.
ಇನ್ನು ಕಳೆದ ಎರಡು ದಿನಗಳಿಂದ ಪ್ರಯಾಣಿಕರ ಸಾಲಿನಲ್ಲಿ ಹೆಚ್ಚಾಗಿದ್ದು, ಎಷ್ಟೇ ಟ್ರಾಫಿಕ್ ಸಮಸ್ಯೆ ಎದುರಾಗಿದ್ದರೂ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿಲ್ಲ ಎಂದು ವರದಿಯಾಗಿದೆ. ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಲಕ್ಷ ಗಡಿ ದಾಟಿದ್ದು, ವಾರಾಂತ್ಯದಲ್ಲಿ ಈ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗಬಹುದು ಎಂದು ವರದಿಯಾಗಿದೆ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಇದೀಗ ಪೊಲೀಸ್ ಇಲಾಖೆ ಮಹತ್ವದ ಕ್ರಮವೊಂದನ್ನು ಕೈಗೊಂಡಿದೆ.


Click it and Unblock the Notifications