ಕೆಲವೇ ಗಂಟೆಗಳಲ್ಲಿ ಅಂದುಕೊಂಡ ಸ್ಥಳಕ್ಕೆ ತಲುಪಿಸುವ ವ್ಯವಸ್ಥೆಗಳಲ್ಲಿ ವಿಮಾನಯಾನ (Airlines) ಕೂಡಾ ಒಂದು. ಇನ್ನು ಮಂಗಳೂರು, ಬೆಂಗಳೂರು, ಮೈಸೂರು, ವಿಜಯನಗರ ಹೀಗೆ ಹಲವು ಕಡೆಗಳಲ್ಲಿ ಬೇರೆ ಬೇರೆ ವಿಮಾನಯಾನ ಸಂಸ್ಥೆಗಳು ತನ್ನ ವ್ಯವಹಾರವನ್ನು ವಿಸ್ತರಿಸಿದೆ. ಕರ್ನಾಟಕ (Karnataka) ಸಂಸ್ಕೃತಿಯ ನೆಲೆಬೀಡು, ಹಲವಾರು ಪ್ರವಾಸಿ ಸ್ಥಳಗಳನ್ನು ಒಳಗೊಂಡಿದೆ. ದೂರ ದೂರದ ಊರಿನಿಂದ ಅದೆಷ್ಟೋ ಮಂದಿ ಕರ್ನಾಟಕದ ಪ್ರವಾಸಿ ತಾಣಗಳಿಗೆ ಆಗಮಿಸುತ್ತಾರೆ. ಇದೀಗ ಮತ್ತೊಂದು ವಿಮಾನಯಾನ ಸಂಸ್ಥೆ ಪ್ರವಾಸಿಗರಿಗೆ ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನಿಂದ ವಿಜಯನಗರಕ್ಕೆ ಮತ್ತೊಂದು ವಿಮಾನಯಾನ ಶುರುವಾಗಿದ್ದು, ಪ್ರವಾಸಿಗರಿಗೆ ಹಂಪಿ (Hampi) ಮತ್ತಷ್ಟು ಹತ್ತಿರವಾಗಲಿದೆ.

ಹೌದು, ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾಗಿರುವ ಸ್ಟಾರ್ ಏರ್, ಇದೀಗ ನವೆಂಬರ್ 1 ರಿಂದ ಬೆಂಗಳೂರಿನಿಂದ ವಿಜಯನಗರಕ್ಕೆ ತನ್ನ ಸೇವೆಯನ್ನು ಆರಂಭಿಸಿದೆ. ಕರ್ನಾಟಕದ ಪ್ರಸಿದ್ಧ ಪ್ರವಾಸಿ ಸ್ಥಳ ಹಂಪಿಯ ಬಳಿ ಇರುವ ಜಿಂದಾಲ್ ವಿದ್ಯಾನಗರ ವಿಮಾನ ನಿಲ್ದಾಣಕ್ಕೆ ಸ್ಟಾರ್ ಏರ್ ವಿಮಾನ ಸೇವೆಗಳನ್ನು ಆರಂಭಿಸಿದ್ದು, ಪ್ರವಾಸಿಗರಿಗೆ ಮತ್ತಷ್ಟು ಅನುಕೂಲವಾಗಲಿದೆ. ಇನ್ನು ಈ ಸೇವೆಯಿಂದಾಗಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿಕೊಂಡ ಹಂಪಿಯು ಏರ್‌ಲೈನ್‌ನ 32ನೇ ಗಮ್ಯಸ್ಥಾನವಾಗಲಿದೆ.
ಸೇವೆ ವಿಸ್ತರಿಸಿದ ಸ್ಟಾರ್ ಏರ್!
ಸ್ಟಾರ್ ಏರ್, ಕಳೆದೆರಡು ತಿಂಗಳಲ್ಲಿ ತನ್ನ ಸೇವೆಯನ್ನು ಶೇ.25% ರಷ್ಟು ವಿಸ್ತರಿಸಿದೆ. ಈ ಮೂಲಕ ಗೋಂಡಿಯಾ, ಇಂದೋರ್, ಭುವನೇಶ್ವರ, ಪೂರ್ಣಿಯಾ, ಸೊಲ್ಲಾಪುರ, ಜಾಮ್‌ನಗರ, ಸೂರತ್, ಭುಜ್ ಮತ್ತು ಬೀದರ್ ಸೇರಿದಂತೆ ಹಲವು ಕಡೆಗಳಲ್ಲಿ ತನ್ನ ಸೇವೆಯನ್ನು ಆರಂಭಿಸಲು ಸಜ್ಜಾಗಿದೆ.
ಈ ಬಗ್ಗೆ ಸ್ಟಾರ್ ಏರ್ ಅಧಿಕಾರಿ ಹೇಳಿದ್ದೇನು?
ಇನ್ನು ಸ್ಟಾರ್ ಏರ್‌ನ ಮುಖ್ಯ ವಾಣಿಜ್ಯ ಮತ್ತು ಮಾರ್ಕೆಟಿಂಗ್ ಅಧಿಕಾರಿ ಶಿಲ್ಪಾ ಭಾಟಿಯಾ ಮಾತನಾಡಿದ್ದು, "ವಿದ್ಯಾನಗರದಲ್ಲಿ ಸ್ಟಾರ್ ಏರ್ ಸೇವೆ ಆರಂಭಿಸುವುದು ಹೆಮ್ಮೆಯ ಕ್ಷಣ. ಈ ಮಾರ್ಗ ಭಾರತದ ಪರಂಪರೆಯನ್ನು ಬಿಂಬಿಸುವ ಹಂಪಿಗೆ ಸಂಪರ್ಕ ಸಾಧಿಸುವುದಲ್ಲೇ, ಕರ್ನಾಟಕದಲ್ಲಿ ಪ್ರಾದೇಶಿಕ ವಿಮಾನ ಪ್ರಯಾಣಕ್ಕೆ ಉತ್ತೇಜನ ನೀಡಲಿದೆ" ಎಂದು ಹೇಳಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ
ಇನ್ನು ಸ್ಟಾರ್ ಏರ್‌ನ ಈ ನಿರ್ಧಾರದ ಬಗ್ಗೆ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೊತ್ತೊಂಬರಿ ಅವರು ಮಾತನಾಡಿ, "ಬೆಂಗಳೂರಿನಿಂದ ಹಂಪಿಗೆ ಆರಂಭವಾದ ಸ್ಟಾರ್ ಏರ್‌ನ ಈ ಸೇವೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿದೆ. ಇದರಿಂದ ಹಂಪಿ ವೀಕ್ಷಣೆಗೆ ದೇಶ ವಿದೇಶಗಳಿಂದ ಬರುವ ಎಲ್ಲಾ ಪ್ರವಾಸಿಗರಿಗೂ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.
ವಿಮಾನ ಸೇವೆಯ ವಿವರ:
ಇನ್ನು ಬೆಂಗಳೂರಿನಿಂದ ಹೊರಟ ವಿಮಾನ ವಿಜಯನಗರದ ವಿದ್ಯಾನಗರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತದೆ. ಸ್ಟಾರ್ ಏರ್ ಆರಂಭಿಸಿದ ಈ ಹೊಸ ಸೇವೆ ಪ್ರತಿದಿನ ಕಾರ್ಯನಿರ್ವಹಿಸಲಿವೆ. ಅದರಂತೆ ಸ್ಟಾರ್ ಏರ್ ವಿಮಾನವು ಬೆಂಗಳೂರಿನ ಅಂತರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಳಗ್ಗೆ 9:50 ಕ್ಕೆ ಹೊರಟು, 10:40 ಕ್ಕೆ ವಿದ್ಯಾನಗರ ವಿಮಾನ ನಿಲ್ದಾಣವನ್ನು ತಲುಪುತ್ತದೆ. ಒಟ್ಟು 50 ನಿಮಿಷಗಳ ಪ್ರಯಾಣವನ್ನು ಹೊಂದಿರುವ ಈ ವಿಮಾನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಟಿಕೆಟ್ ದರ ಎಷ್ಟಿದೆ?
ಇನ್ನು ಸ್ಟಾರ್ ಏರ್ ವಿಮಾನದಲ್ಲಿ ಎಕಾನಮಿ ಕ್ಲಾಸ್ ಟಿಕೆಟ್ ದರ 5,250 ರೂಪಾಯಿಯಿಂದ 7,088 ರೂಪಾಯಿವರೆಗೆ ನಿಗದಿ ಮಾಡಲಾಗಿದೆ. ಅದೇ ರೀತಿ ಬ್ಯುಸಿನೆಸ್ ಕ್ಲಾಸ್‌ಗೆ 10,999 ರೂಪಾಯಿಯಿಂ 13,359 ರೂಪಾಯಿ ನಿಗದಿ ಪಡಿಸಲಾಗಿದೆ.


Click it and Unblock the Notifications