ನವದೆಹಲಿ, ಅ. 20: ಭಾರತೀಯರಿಗೆ ಬಹಳ ವಿಚಿತ್ರ ಎನಿಸುವ ಈ ಬೆಳವಣಿಗೆ. ಆದರೆ, ಇದು ಬಹಳ ಗಂಭೀರವಾಗಿ ನಡೆಯುತ್ತಿರುವ ಪ್ರಕರಣ. ಹಸು, ಕುರಿಗಳ ತೇಕು ಮತ್ತು ಹೂಸಿಗೆ ತೆರಿಗೆ ವಿಧಿಸಲು ನ್ಯೂಜಿಲೆಂಡ್ ಸರ್ಕಾರ ಯೋಜಿಸಿದೆ. ಇದೇನಾದರೂ ಜಾರಿಯಾದರೆ ಈ ರೀತಿಯ ತೆರಿಗೆ ವಿಧಿಸಿದ ಮೊದಲ ದೇಶವಾಗಲಿದೆ ಕಿವೀಸ್ ನಾಡು. ಸರ್ಕಾರದ ಈ ಪ್ರಸ್ತಾವಕ್ಕೆ ನ್ಯೂಜಿಲೆಂಡ್‌ನ ರೈತರು ತೀವ್ರ ಪ್ರತಿರೋಧಿಸಿದ್ದು, ಟ್ರಾಕ್ಟರ್‌ಗಳಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ನ್ಯೂಜಿಲೆಂಡ್‌ನ ವಿವಿಧ ನಗರ, ಪಟ್ಟಣಗಳಲ್ಲಿ 50ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ರೈತರು ಟ್ರ್ರಾಕ್ಟರ್‌ಗಳನ್ನು ಏರಿ ಪ್ರತಿಭಟನೆ ನಡೆಸಿದ್ದಾರೆ. ರೈತರ ಈ ಪ್ರತಿರೋಧಕ್ಕೆ ನ್ಯೂಜಿಲೆಂಡ್ ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಹಸುವಿನ ತೇಗಿಗೆ ತೆರಿಗೆ ವಿಧಿಸುವ ಪ್ರಸ್ತಾವ ನ್ಯೂಜಿಲೆಂಡ್‌ನಲ್ಲಿ ಹಿಂದೆಯೂ ಆಗಿತ್ತು. ಆಗಲೂ ರೈತರು ಪ್ರತಿಭಟನೆ ನಡೆಸಿದ ಕಾರಣಕ್ಕೆ ಕೈಬಿಡಲಾಗಿತ್ತು. ಈಗ ಸರ್ಕಾರ ಹೆಚ್ಚು ಬದ್ಧತೆಯಿಂದ ತೆರಿಗೆ ಜಾರಿಗೆ ತರಲು ನಿರ್ಧರಿಸಿರಬಹುದು ಎನ್ನುತ್ತವೆ ಕೆಲ ವರದಿಗಳು.
ಹಸು ತೇಕಿನಿಂದ ಏನು ಸಮಸ್ಯೆ?
ಹವಾಮಾನ ಬದಲಾವಣೆಗೆ ಗ್ರೀನ್ ಹೌಸ್ ಗ್ಯಾಸ್ ಅಥವಾ ಹಸಿರುಮನೆ ಅನಿಲಗಳು ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮೀಥೇನ್, ನೈಟ್ರೋಜನ್ ಆಕ್ಸೈಡ್, ಕಾರ್ಬನ್ ಡೈ ಆಕ್ಸೈಡ್‌ಗಳು ಪ್ರಮುಖ ಹಸಿರುಮನೆ ಅನಿಲಗಳೆನಿಸಿವೆ. ಮೀಥೇನ್, ನೈಟ್ರೋಜನ್ ಆಕ್ಸೈಡ್ ಗ್ಯಾಸ್‌ಗಳು ಹೆಚ್ಚಾಗಿ ಪ್ರಾಣಿಗಳಿಂದಲೇ ಹೊರಬರುತ್ತವೆ. ಅದರಲ್ಲೂ ಹಸುಗಳಿಂದ ಇವು ಬಿಡುಗಡೆಯಾಗುತ್ತವೆ. ಕುರಿಗಳಿಂದಲೂ ಈ ಗ್ಯಾಸ್‌ಗಳು ವಾತಾವರಣ ಸೇರುತ್ತವೆ.
ಭೂಮಿಯಿಂದ ವಾತಾವರಣ ಸೇರುವ ಶೇ. 40ರಷ್ಟು ಗ್ರೀನ್ ಹೌಸ್ ಗ್ಯಾಸ್‌ಗಳು ಹಸುಗಳಿಂದಲೇ ಬಿಡುಗಡೆ ಆಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಹಸು ತೇಕಿದಾಗ ಮತ್ತು ಹೂಸಿದಾಗ ಹೊರಬರುವ ಅನಿಲಗಳಲ್ಲಿ ಹೆಚ್ಚಿನದ್ದು ಮೀಥೇನ್ ಆಗಿರುತ್ತದೆ. ಹವಾಮಾನ ಬದಲಾವಣೆ ಸಮಸ್ಯೆಗೆ ಈ ಗ್ಯಾಸ್ ಪ್ರಮುಖ ಕಾರಣ. ಮನುಷ್ಯರು ಹೂಸಿದಾಗ ಮತ್ತು ತೇಕಿದಾಗ ಬಿಡುಗಡೆಯಾಗುವ ಗ್ಯಾಸ್‌ಗಳಲ್ಲಿ ಮೀಥೇನ್ ಇರುತ್ತದಾದರೂ ಅದರ ಪ್ರಮಾಣ ಕಡಿಮೆ. ಆದರೆ, ಹಸು ಮತ್ತು ಕುರಿಗಳಲ್ಲಿ ಇದು ಬಹಳ ಹೆಚ್ಚಿರುತ್ತದೆ.
ನ್ಯೂಜಿಲೆಂಡ್‌ನಲ್ಲಿ ಮನುಷ್ಯರಿಗಿಂತ ಹಸುಗಳೇ ಹೆಚ್ಚು
ಗ್ರಾಮೀಣ ಪ್ರದೇಶ ಹೆಚ್ಚಿರುವ ನ್ಯೂಜಿಲೆಂಡ್ ದೇಶದಲ್ಲಿ ಜನರಿಗಿಂತ ಹಸು ಮತ್ತು ಕುರಿಗಳ ಸಂಖ್ಯೆಯೇ ಹೆಚ್ಚಿದೆ. ಇಲ್ಲಿ ಜನರಿರುವುದು ಕೇವಲ 50 ಲಕ್ಷ ಮಾತ್ರ. ಆದರೆ, ಒಂದು ಕೋಟಿ ದನಗಳು (ಹಸು, ಎಮ್ಮೆ ಇತ್ಯಾದಿ) ಮತ್ತು 2.6 ಕೋಟಿ ಕುರಿಗಳು ಕಿವೀಸ್ ನಾಡಿನಲ್ಲಿವೆ. ಮನುಷ್ಯರಿಗಿಂತ ದನಗಳು ಎರಡು ಪಟ್ಟು ಹೆಚ್ಚು ಇವೆ. ಕುರಿಗಳು ಐದು ಪಟ್ಟು ಹೆಚ್ಚು ಇವೆ.
ಇಲ್ಲಿನ ಹೈನೋದ್ಯಮ ಬಹಳ ಬಲಿಷ್ಠವಾಗಿದೆ. ನ್ಯೂಜಿಲೆಂಡ್‌ನ ರೈತರು ಹೈನುಗಾರಿಕೆ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಈಗ ದನಗಳ ಮೇಲೆ ಸರ್ಕಾರ ತೆರಿಗೆ ವಿಧಿಸಲು ಹೊರಟಿರುವುದು ಇಲ್ಲಿನ ಕೃಷಿಕರನ್ನು ರೊಚ್ಚಿಗೆಬ್ಬಿಸಿರುವುದರಲ್ಲಿ ಅಚ್ಚರಿ ಇಲ್ಲ.
ತೆರಿಗೆ ಹೇಗೆ ವಿಧಿಸಲಾಗುತ್ತದೆ?
ಹಸು ಹೂಸಿಗೆ ಮತ್ತು ತೇಗಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ? ತೆರಿಗೆ ಹಾಕುವುದರಿಂದ ಏನು ಪ್ರಯೋಜನವಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಈ ಪ್ರಶ್ನೆಗೆ ಉತ್ತರ ಕೊಡುವ ಮುನ್ನ ಒಂದು ವಿಚಾರ ತಿಳಿಸಬೇಕು. ಹಸು ತಿನ್ನುವ ಆಹಾರದ ಮೇಲೆ ಮೀಥೇನ್ ಗ್ಯಾಸ್ ನಿರ್ಮಾಣವಾಗುತ್ತದೆ. ಹಸುವಿನ ಹೊಟ್ಟೆಯ ಭಾಗದಲ್ಲಿ, ಅದರಲ್ಲೂ ಹೊಟ್ಟೆಯ ಮೊದಲ ಚೇಂಬರ್‌ನಲ್ಲಿ ಹೆಚ್ಚಿನ ಗ್ಯಾಸ್ ಸಂಗ್ರಹವಾಗುತ್ತದೆ. ಹೀಗಾಗಿ, ಅದು ತೇಗಿನ ಮೂಲಕ ಅದನ್ನು ಹೊರಹಾಕುತ್ತದೆ. ವಿಜ್ಞಾನಿಗಳು ಈಗ ಹಸುವಿನ ಹೊಟ್ಟೆಯಲ್ಲಿ ಮೀಥೇನ್ ನಿರ್ಮಾಣವಾಗುವುದನ್ನು ತಡೆಯಲು ವಂಶವಾಹಿ (ಜೀನ್) ಯಲ್ಲಿ ಮಾರ್ಪಾಡು ಮತ್ತು ವಿಶೇಷ ಆಹಾರಕ್ರಮಗಳನ್ನು ಅಭಿವೃದ್ಧಿಪಡಿಸಿದ್ದಾರೆ.
ಇಂಥ ಹೊಸ ಆವಿಷ್ಕಾರಗಳಿಗೆ ರೈತರು ತೆರೆದುಕೊಳ್ಳದಿದ್ದರೆ ಅಥವಾ ಅಳವಡಿಸದಿದ್ದರೆ ಅವರ ಮಾಲಿಕತ್ವದ ಎಲ್ಲಾ ಹಸು ಮತ್ತು ಕುರಿಗಳಿಗೂ ಸಂಖ್ಯೆಗನುಗುಣವಾಗಿ ತೆರಿಗೆ ಹಾಕುವುದು ನ್ಯೂಜಿಲೆಂಡ್ ಸರ್ಕಾರದ ಆಲೋಚನೆ. ಹಸು ಮತ್ತು ಕುರಿಗಳಿಗೆ ಸ್ಪೆಷಲ್ ಡಯಟ್ ಒದಗಿಸುವ ರೈತರಿಗೆ ಈ ತೆರಿಗೆ ಹೇರಿಕೆ ಇರುವುದಿಲ್ಲ.
ತೆರಿಗೆಯಿಂದ ಏನು ಲಾಭ?
ತೆರಿಗೆ ಹೇರಿಕೆಯಿಂದ ನ್ಯೂಜಿಲೆಂಡ್‌ನ ಹೈನೋದ್ಯಮಕ್ಕೆ ಹಿನ್ನಡೆಯಾಗಬಹುದು ಎಂಬ ಭಯ ಇದ್ದೇ ಇದೆ. ಆದರೆ, ಹಾಗೇನೂ ಆಗಲ್ಲ ಎಂಬುದು ಸರ್ಕಾರದ ನಂಬಿಕೆ. ಈ ರೀತಿ ತೆರಿಗೆ ಹೇರಿಕೆಯಿಂದ ಸಂಗ್ರಹವಾದ ಹಣವನ್ನು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ರೈತರನ್ನು ಉತ್ತೇಜಿಸಲು ಬಳಸಲಾಗುವುದು ಎಂದು ಹೇಳಲಾಗುತ್ತಿದೆ.
ಹಾಗೆಯೇ, ಮೀಥೇನ್ ಹೊರಹಾಕದ ಹಸುಗಳಿಂದ ಪಡೆಯುವ ಉತ್ಪನ್ನಗಳನ್ನು ಪರಿಸರಸ್ನೇಹಿ ಉತ್ಪನ್ನಗಳೆಂದು ಪರಿಗಣಿಸಲಾಗುವುದು. ಅದನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿ ರೈತರು ಆದಾಯ ಗಳಿಸಲು ಅವಕಾಶ ಇದೆ ಎಂದು ಹಸುವಿನ ತೇಗು ಮತ್ತು ಹೂಸಿಗೆ ತೆರಿಗೆ ಕ್ರಮವನ್ನು ಸಮರ್ಥಿಸುವವರು ವಾದಿಸುತ್ತಿದ್ದಾರೆ.
ರೈತರ ಆಕ್ರೋಶ ಏನು?
ನ್ಯೂಜಿಲೆಂಡ್‌ನ ರೈತರು ಈ ರೀತಿಯ ತೆರಿಗೆ ವಿರುದ್ಧ ಬಹಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರೈತರಿಗೆ ಪರಿಸರದ ಬಗ್ಗೆ ಅತೀವ ಕಾಳಜಿ ಇದೆ. ನಮಗೆ ಕೃಷಿ ಎಂದರೆ ಪ್ರೀತಿ. ಆದರೆ, ನಮ್ಮನ್ನು ವಿಲನ್‌ಗಳಂತೆ ಕಾಣುತ್ತಿದ್ದಾರೆ. ತಲೆತಲಾಂತರಗಳಿಂದ ಕೃಷಿಭೂಮಿಯನ್ನು ನೋಡಿಕೊಂಡು ಬಂದ ಹಲವು ರೈತರಿದ್ದಾರೆ" ಎಂದು ಡೇವ್ ಮೆಕರ್ಡಿ ಎಂಬ ರೈತರೊಬ್ಬರು ಹೇಳಿರುವುದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ನಾನು ಮತ್ತು ಇತರ ರೈತರು ನೆಟ್ಟಿರುವ ಮರ ಗಿಡಗಳಿಂದ ಎಷ್ಟು ಕಾರ್ಬನ್ ಇಂಗಿದೆ, ಎಷ್ಟು ಮಾಲಿನ್ಯ ತಗ್ಗಿದೆ ಎಂಬುದನ್ನು ಇವರು ಪರಿಗಣಿಸುವುದಿಲ್ಲ. ಈಗ ತೆರಿಗೆ ಹಾಕಲು ಹೋಡುತ್ತಿದ್ದಾರೆ. ಇವರ ಈ ಕ್ರಮ ಹಲವು ರೈತರ ಜೀವನಕ್ಕೆ ಧಕ್ಕೆ ತರುತ್ತದೆ" ಎಂದು ಈ ರೈತ ಅಲವತ್ತುಕೊಳ್ಳುತ್ತಾರೆ.
ನ್ಯೂಜಿಲೆಂಡ್ ಸರ್ಕಾರ 2025ರೊಳಗೆ ಈ ವಿನೂತನ ತೆರಿಗೆ ಪದ್ಧತಿಯನ್ನು ರೂಪಿಸಿ ಅಳವಡಿಸುವ ಇರಾದೆಯಲ್ಲಿದೆ. ಬೇರೆ ದೇಶಗಳಲ್ಲೂ ಇಂಥ ಚಿಂತನೆ ಶುರುವಾಗುತ್ತದಾ? ಭಾರತದಲ್ಲಿ ಇಂಥದ್ದೊಂದು ತೆರಿಗೆ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯ ಇಲ್ಲ.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications