ಸಾರ್ವಜನಿಕ ವಲಯದ ಇಪ್ಪತ್ಮೂರು ಕಂಪೆನಿಗಳಲ್ಲಿನ ಷೇರಿನ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸುವ ಕಡೆಗೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಇವುಗಳ ಬಂಡವಾಳ ಹಿಂತೆಗೆತಕ್ಕೆ ಈಗಾಗಲೇ ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ವ್ಯಾಪಾರ- ವ್ಯವಹಾರಗಳಿಗೆ ಸಾಲ ಸೌಲಭ್ಯ ಒದಗಿಸಲಾಗುತ್ತಿದೆಯೇ ಎಂದು ಪರಿಶೀಲಿಸಲು ಸದ್ಯದಲ್ಲೇ ಸಣ್ಣ ಹಣಕಾಸು ಸಂಸ್ಥೆಗಳು ಹಾಗೂ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನೀಸ್ (ಎನ್ ಬಿಎಫ್ ಸಿ) ಸಭೆ ಕರೆಯಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
ಹೀರೋ ಎಂಟರ್ ಪ್ರೈಸಸ್ ಮುಖ್ಯಸ್ಥ ಸುನೀಲ್ ಕಾಂತ್ ಮುಂಜಾಲ್ ಅವರೊಂದಿಗೆ ಮಾತುಕತೆ ನಡೆಸಿದ ಅವರು, ಆತ್ಮನಿರ್ಭರ್ ಪ್ಯಾಕೇಜ್ ಭಾಗವಾಗಿ ಎಲ್ಲ ವಲಯವನ್ನು ಖಾಸಗಿ ಭಾಗವಹಿಸುವಿಕೆಗೆ ಸರ್ಕಾರದಿಂದ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕ ವಲಯಕ್ಕೆ ಗರಿಷ್ಠ ನಾಲ್ಕು ಘಟಕ
ಯಾವುದು "ವ್ಯೂಹಾತ್ಮಕ" ಎನ್ನಲಾಗುತ್ತದೆಯೋ ಅಂಥ ವಲಯಗಳ ಬಗ್ಗೆ ಅಂತಿಮ ನಿರ್ಧಾರ ಮಾಡಿಲ್ಲ. ಆ ಬಗ್ಗೆ ಸದ್ಯದಲ್ಲೇ ಘೋಷಣೆ ಮಾಡಲಾಗುವುದು. ಏನು ಘೋಷಣೆ ಮಾಡಲಾಗುವುದು ಎಂಬ ಬಗ್ಗೆ ಈಗಲೇ ಹೇಳುವುದು ಸಾಧ್ಯವಿಲ್ಲ. ಯಾವುದನ್ನು ವ್ಯೂಹಾತ್ಮಕ ಎಂದು ಕರೆಯಲಾಗುವುದೋ ಅವುಗಳಲ್ಲೂ ಖಾಸಗಿಯವರಿಗೆ ಅವಕಾಶ ಇರುತ್ತದೆ. ಆದರೆ ಸಾರ್ವಜನಿಕ ವಲಯಕ್ಕೆ ಗರಿಷ್ಠ ನಾಲ್ಕು ಘಟಕಕ್ಕೆ ಅವಕಾಶ ಇರುತ್ತದೆ ಎಂದಿದ್ದಾರೆ.
ಸರಿಯಾದ ಬೆಲೆ ಸಿಕ್ಕಾಗ ಮಾರಾಟ
ಯಾವಾಗ ಸರಿಯಾದ ಬೆಲೆ ಸಿಗುವುದೋ ಆಗ ಸಾರ್ವಜನಿಕ ವಲಯದ ಕಂಪೆನಿ ಷೇರುಗಳನ್ನು ಮಾರಾಟ ಮಾಡಲು ಸರ್ಕಾರ ಬಯಸುತ್ತದೆ ಎಂದು ಬಂಡವಾಳ ಹಿಂತೆಗೆತದ ಯೋಜನೆ ಬಗ್ಗೆ ಹೇಳಿದರು. ಈಗಾಗಲೇ ಇಪ್ಪತ್ತೆರಡರಿಂದ ಇಪ್ಪತ್ಮೂರು ಸಾರ್ವಜನಿಕ ವಲಯದ ಕಂಪೆನಿಗಳ ಷೇರು ಮಾರಾಟಕ್ಕೆ ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ. ಕನಿಷ್ಠ ಈಗಾಗಲೇ ಅನುಮತಿ ಸಿಕ್ಕಿರುವ ಕಂಪೆನಿಗಳ ಬಂಡವಾಳ ಹಿಂತೆಗೆಯಬೇಕು ಎಂದು ಹೇಳಿದ್ದಾರೆ.
2.10 ಲಕ್ಷ ಕೋಟಿ ಬಂಡವಾಳ ಹಿಂತೆಗೆತಕ್ಕೆ ಗುರಿ
2020- 21ನೇ ಸಾಲಿಗೆ 2.10 ಲಕ್ಷ ಕೋಟಿ ಬಂಡವಾಳ ಹಿಂತೆಗೆತಕ್ಕೆ ಗುರಿ ಹಾಕಿಕೊಂಡಿದೆ. ಅದರಲ್ಲಿ 1.20 ಲಕ್ಷ ಕೋಟಿ ರುಪಾಯಿ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಹಾಗೂ 90 ಸಾವಿರ ಕೋಟಿ ರುಪಾಯಿ ಹಣಕಾಸು ಸಂಸ್ಥೆಗಳಿಂದ ಸಂಗ್ರಹಿಸುವ ಗುರಿ ಇದೆ. ಇನ್ನು ತುರ್ತು ಸಾಲವಾಗಿ ಗ್ಯಾರಂಟಿ ಅಗತ್ಯ ಇಲ್ಲದ ಯೋಜನೆ ಅಡಿಯಲ್ಲಿ ಜುಲೈ 23, 2020ಕ್ಕೆ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್ ಗಳಿಂದ 1,30,491.79 ಕೋಟಿ ರುಪಾಯಿ ಮಂಜೂರು ಮಾಡಿವೆ. ಅದರಲ್ಲಿ 82,065.01 ಕೋಟಿ ರುಪಾಯಿ ವಿತರಣೆ ಮಾಡಲಾಗಿದೆ.


Click it and Unblock the Notifications