ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆ ಇಳಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಲೋಕಸಭೆಯಲ್ಲಿ ಹೇಳಿದ್ದಾರೆ. ಜಗತ್ತಿನ ಎಲ್ಲೂ ಪೆಟ್ರೋಲ್- ಡೀಸೆಲ್ ಬೆಲೆ ನಿರ್ದಿಷ್ಟ ಅವಧಿಗೆ ಸ್ಥಿರವಾಗಿ ಇಲ್ಲ ಎಂದು ತಿಳಿಸಿದ್ದಾರೆ.
ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆ ಇಳಿಸುವ ಪ್ರಸ್ತಾವ ಸರ್ಕಾರಕ್ಕೆ ಇದೆಯಾ? ಹೀಗೆ ಮಾಡುವುದರಿಂದ ಪೆಟ್ರೋಲ್- ಡೀಸೆಲ್ ಬೆಲೆ ಕಡಿಮೆ ಆಗಬಹುದು ಎಂಬ ಪ್ರಶ್ನೆಗೆ ಸಚಿವೆ ಉತ್ತರ ನೀಡಿದ್ದಾರೆ. ಪ್ರಶ್ನೆಯನ್ನು ಮುಂದುವರಿಸಿ, ಪೆಟ್ರೋಲ್ ಅನ್ನು ಜಿಎಸ್ ಟಿ ಅಡಿಯಲ್ಲಿ ತರಬಹುದೇ ಎಂದು ಕೇಳಲಾಗಿದೆ.
ಅದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್, ಅದು ಇನ್ನೂ ಚರ್ಚೆ ಹಾದಿಯಲ್ಲಿದೆ. ಜಿಎಸ್ ಟಿಯ ಶೂನ್ಯ ದರದ ವಿಭಾಗದಲ್ಲಿದೆ. ಜಿಎಸ್ ಟಿ ಕೌನ್ಸಿಲ್ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದಿದ್ದಾರೆ. ಅಂದ ಹಾಗೆ ಜಿಎಸ್ ಟಿ ಕೌನ್ಸಿಲ್ ನ ಅಧ್ಯಕ್ಷರಾಗಿ ವಿತ್ತ ಸಚಿವರು, ಆ ಸಮಿತಿಯಲ್ಲಿ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಇರುತ್ತಾರೆ.

ನಿರ್ಮಲಾ ಸೀತಾರಾಮನ್ ಮಾತನಾಡಿ, ಪೆಟ್ರೋಲ್ ಅಥವಾ ಡೀಸೆಲ್ ಮೇಲೆ ಯಾವುದೇ ಹೊಸ ತೆರಿಗೆ ಹಾಕುವುದಿಲ್ಲ ಎಂದಿದ್ದಾರೆ. ಭಾರತದಲ್ಲಿ ಮಾರಾಟವಾಗುವ ತೈಲದ ಮೇಲೆ ಕೇಂದ್ರ ಸರ್ಕಾರವು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ವಿಧಿಸುತ್ತದೆ. ಅದರ ಜತೆಗೆ ರಾಜ್ಯ ಸರ್ಕಾರದಿಂದಲೂ ತೆರಿಗೆ ಹಾಕಲಾಗುತ್ತದೆ.
ಸಣ್ಣ ಪ್ರಮಾಣದ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಹಂತಗಳಲ್ಲಿ ತೆರಿಗೆ ಹಾಕುತ್ತವೆ ಎಂದು ನಿರ್ಮಲಾ ಹೇಳಿದ್ದಾರೆ.


Click it and Unblock the Notifications