ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ಬಿಲಿಯನೇರ್ ಮುಕೇಶ್ ಅಂಬಾನಿ ಯಾವುದೇ ವೇತನವನ್ನು ಪಡೆಯುವುದಿಲ್ಲ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈಗ ಮೂವರು ಮಕ್ಕಳಿಗೂ ಯಾವುದೇ ವೇತನ ಲಭ್ಯವಾಗುವುದಿಲ್ಲ ಎಂದರೆ ನೀವು ನಂಬುತ್ತೀರಾ?.
ಹೌದು, ಮುಕೇಶ್ ಅಂಬಾನಿಯ ಮೂವರು ಮಕ್ಕಳಿಗೆ ಮಂಡಳಿ ಮತ್ತು ಸಮಿತಿ ಸಭೆಗಳಿಗೆ ಹಾಜರಾಗಲು ಶುಲ್ಕವನ್ನು ಮಾತ್ರ ಪಾವತಿಸಲಾಗುವುದು ಎಂದು ಕಂಪನಿಯು ತನ್ನ ಮಂಡಳಿಯಲ್ಲಿ ನೇಮಕಾತಿಗೆ ಷೇರುದಾರರ ಒಪ್ಪಿಗೆಯನ್ನು ಕೋರುವ ನಿರ್ಣಯದಲ್ಲಿ ತಿಳಿಸಿದೆ. ಮುಕೇಶ್ ಅಂಬಾನಿ ನಿವ್ವಳ ಮೌಲ್ಯ ಸುಮಾರು 7.5 ಲಕ್ಷ ಕೋಟಿ ರೂಪಾಯಿ ಆಗಿದೆ.

66 ವರ್ಷದ ಮುಕೇಶ್ ಅಂಬಾನಿ 2020-21 ರ ಆರ್ಥಿಕ ವರ್ಷದಿಂದ ಕಂಪನಿಯಿಂದ ಯಾವುದೇ ವೇತನವನ್ನು ಪಡೆದುಕೊಂಡಿಲ್ಲ. ಆದರೆ ಅಂಬಾನಿಯ ಸೋದರಸಂಬಂಧಿಗಳಾದ ನಿಖಿಲ್ ಮತ್ತು ಹಿತಾಲ್ ಸೇರಿದಂತೆ ಇತರ ಕಾರ್ಯನಿರ್ವಾಹಕ ನಿರ್ದೇಶಕರು ಸಂಬಳ, ಪರ್ಕ್ಯೂಸೈಟ್ಸ್, ಭತ್ಯೆಗಳು ಮತ್ತು ಕಮಿಷನ್ ಪಾವತಿಸುತ್ತಾರೆ.
ಮೂವರ ನೇಮಕಾತಿಯ ನಿಯಮಗಳು 2014 ರಲ್ಲಿ ಅಂಬಾನಿ ಪತ್ನಿ ನೀತಾ ಕಂಪನಿಯ ಮಂಡಳಿಗೆ ನೇಮಕಗೊಂಡ ನಿಯಮಗಳಂತೆಯೇ ಇವೆ. ಕಂಪನಿಯ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ 2022-23 ರ ಹಣಕಾಸು ವರ್ಷದಲ್ಲಿ 6 ಲಕ್ಷ ರೂ ಸಿಟ್ಟಿಂಗ್ ಶುಲ್ಕ ಮತ್ತು 2 ಕೋಟಿ ರೂಪಾಯಿ ಕಮಿಷನ್ ಅನ್ನು ನೀತಾ ಅಂಬಾನಿ ಪಡೆದಿದ್ದಾರೆ.
66 ವರ್ಷದ ಅಂಬಾನಿ ಕಳೆದ ತಿಂಗಳು ಕಂಪನಿಯ ವಾರ್ಷಿಕ ಷೇರುದಾರರ ಸಭೆಯಲ್ಲಿ ತಮ್ಮ ಮೂವರು ಮಕ್ಕಳನ್ನು ರಿಲಯನ್ಸ್‌ನ ನಿರ್ದೇಶಕರ ಮಂಡಳಿಗೆ (ಬಿಒಡಿ) ಸೇರ್ಪಡೆಗೊಳಿಸುವುದಾಗಿ ಘೋಷಿಸಿದ್ದರು. ಹಾಗೆಯೇ ತಾನು ಮುಂದಿನ ಐದು ವರ್ಷಗಳ ಕಾಲ ಕಂಪನಿಯ ಅಧ್ಯಕ್ಷ ಮತ್ತು ಸಿಇಒ ಆಗಿ ಮುಂದುವರಿಯುವುದಾಗಿ ಹೇಳಿದರು.
ರಿಲಯನ್ಸ್ ಈಗ ಷೇರುದಾರರಿಗೆ ಅಂಚೆ ಮತಪತ್ರವನ್ನು ಕಳುಹಿಸಿದ್ದು, ಕಂಪನಿಯ ನಿರ್ದೇಶಕರ ಮಂಡಳಿಯಾಗಿ ನೇಮಕಾತಿಗೆ ಅನುಮತಿ ಕೋರಿದೆ. "ಬೋರ್ಡ್ ಅಥವಾ ಅದರ ಸಮಿತಿಗಳ ಸಭೆಗಳಿಗೆ ಹಾಜರಾಗಲು ಅಥವಾ ಮಂಡಳಿಯು ನಿರ್ಧರಿಸಬಹುದಾದ ಯಾವುದೇ ಇತರ ಸಭೆಗಳಿಗೆ ಅವರಿಗೆ ಸಂಭಾವನೆ ನೀಡಲಾಗುತ್ತದೆ. ಮಂಡಳಿ ಮತ್ತು ಇತರ ಸಭೆಗಳಲ್ಲಿ ಭಾಗವಹಿಸಲು ವೆಚ್ಚಗಳ ಮರುಪಾವತಿ ಮಾಡಲಾಗುತ್ತದೆ," ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.
ಇಶಾ ಅಂಬಾನಿ ನೇರವಾಗಿ ಕಂಪನಿಯ ಶೇಕಡ 0.12 ರಷ್ಟು ಈಕ್ವಿಟಿ ಷೇರುಗಳನ್ನು ಹೊಂದಿದ್ದಾರೆ. ಮುಕೇಶ್ ಅಂಬಾನಿ ಶೇಕಡ 41.46ರಷ್ಟು ಪಾಲನ್ನು ಹೊಂದಿದ್ದಾರೆ. ಆಕಾಶ್ ಮತ್ತು ಇಶಾ ಅಕ್ಟೋಬರ್ 2014 ರಿಂದ ಜಿಯೋ ಮತ್ತು ರಿಲಯನ್ಸ್ ರಿಟೇಲ್ ಎರಡರ ನಿರ್ದೇಶಕರ ಮಂಡಳಿಯಲ್ಲಿದ್ದಾರೆ.
ಹೊಸ ಇಂಧನ ವ್ಯವಹಾರಗಳನ್ನು ನಿರ್ವಹಣೆ ಮಾಡುವ ಸಂಸ್ಥೆಗಳ ಮಂಡಳಿಗಳಲ್ಲಿರುವುದರ ಜೊತೆಗೆ, ಅನಂತ್ ರಿಟೇಲ್ ಮತ್ತು ಜಿಯೋ ಮಂಡಳಿಗಳಲ್ಲಿಯೂ ಇದ್ದಾರೆ. ಇಶಾ ಅಂಬಾನಿರನ್ನು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಮಂಡಳಿಯಲ್ಲಿ ನಿರ್ದೇಶಕರಾಗಿ ನೇಮಿಸಲಾಗಿದೆ.


Click it and Unblock the Notifications