ಕಳೆದ ವರ್ಷದಿಂದ ನಾವು ದಿನಕ್ಕೊಂದು ಉದ್ಯೋಗ ಕಡಿತದ ಸುದ್ದಿಯನ್ನು ಕೇಳುತ್ತಿದ್ದೇವೆ. ಕಡಿಮೆ ಎಂದರೆ ವಾರದಲ್ಲಿ ಎರಡು ಸಂಸ್ಥೆಗಳಾದರೂ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಈ ನಡುವೆ ದೇಶದಲ್ಲಿ ಅತೀ ಜನಪ್ರಿಯತೆ ಗಳಿಸಿರುವ ನೋಕಿಯಾ ಸಂಸ್ಥೆಯು ಕೂಡಾ ಉದ್ಯೋಗ ಕಡಿತವನ್ನು ಗುರುವಾರ ಘೋಷಣೆ ಮಾಡಿದೆ.
ಫಿನ್ನಿಷ್ ಟೆಲಿಕಾಂ ದೈತ್ಯ ನೋಕಿಯಾ ಗುರುವಾರ ಕಂಪನಿಯು 14,000 ಉದ್ಯೋಗಗಳನ್ನು ಕಡಿತಗೊಳಿಸಲಿದೆ ಎಂದು ಹೇಳಿದೆ. ಕೋವಿಡ್ ಸಾಂಕ್ರಾಮಿಕ ಲಾಕ್‌ಡೌನ್‌ಗಳ ಸಮಯದಲ್ಲಿ ಸಾಕಷ್ಟು ನೇಮಕಾತಿಗಳನ್ನು ಮಾಡಲಾಗಿದೆ. ಆದರೆ ಈಗ ವಜಾವನ್ನು ಮಾಡಲಾಗುತ್ತಿದೆ ಎಂದು ಕೂಡಾ ನೋಕಿಯಾ ಮಾಹಿತಿ ನೀಡಿದೆ.

ಉದ್ಯೋಗ ಕಡಿತಕ್ಕೆ ಪ್ರಮುಖ ಕಾರಣವೇನು ಗೊತ್ತಾ?
ಉತ್ತರ ಅಮೇರಿಕಾದಲ್ಲಿ ನೋಕಿಯಾವು ತನ್ನ 5ಜಿ ಉಪಕರಣಗಳಿಗೆ ಬೇಡಿಕೆ ಕಡಿಮೆಯಾದ ಕಾರಣದಿಂದಾಗಿ ಸಂಸ್ಥೆಯಲ್ಲಿ ಲಾಭವು ಕುಸಿದಿದೆ. ಈ ನಿಟ್ಟಿನಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಸ್ಪಷ್ಟಪಡಿಸಿದೆ. "ಮೂರನೇ ತ್ರೈಮಾಸಿಕದಲ್ಲಿ ಹಲವಾರು ಆರ್ಥಿಕ ಸವಾಲುಗಳು ನಮ್ಮ ವ್ಯವಹಾರದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ," ಎಂದು ನೋಕಿಯಾ ಸಿಇಒ ಪೆಕ್ಕಾ ಲುಂಡ್‌ಮಾರ್ಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2026 ರ ವೇಳೆಗೆ 1.2 ಬಿಲಿಯನ್ ಯುರೋಗಳಷ್ಟು (1.14 ಬಿಲಿಯನ್ ಡಾಲರ್) ವೆಚ್ಚವನ್ನು ಕಡಿತಗೊಳಿಸುವ ಮೂಲಕ ತನ್ನ ಉಳಿತಾಯ ಕಾರ್ಯವನ್ನು ಮಾಡಲಾಗುತ್ತಿದೆ. ಇದಕ್ಕಾಗಿ ನಮ್ಮ ಸಿಬ್ಬಂದಿಗಳ ಸಂಖ್ಯೆಯನ್ನು 72,000 ಕ್ಕೆ ಇಳಿಸುವ ನಿರೀಕ್ಷೆಯಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ಮತ್ತಷ್ಟು ಸೇರಿಸಿದೆ.
ಈ ಉದ್ಯೋಗ ಕಡಿತವು ಪ್ರಮುಖವಾಗಿ ಮೊಬೈಲ್ ನೆಟ್‌ವರ್ಕ್, ಕ್ಲೌಡ್ ಮತ್ತು ನೆಟ್ವರ್ಕ್ ಸೇವೆಗಳು, ಕಾರ್ಪೊರೇಟ್ ಕಾರ್ಯಗಳ ಮೇಲೆ ಪ್ರಭಾವ ಉಂಟು ಮಾಡುತ್ತದೆ. "ಅತ್ಯಂತ ಕಷ್ಟಕರವಾದ ವ್ಯಾಪಾರ ನಿರ್ಧಾರಗಳು ನಮ್ಮ ಜನರ ಮೇಲೆ ಪರಿಣಾಮ ಬೀರುತ್ತವೆ," ಎಂದು ಸಿಇಒ ಪೆಕ್ಕಾ ಲುಂಡ್‌ಮಾರ್ಕ್ ಹೇಳಿದ್ದಾರೆ.
ನೋಕಿಯಾ ಲಾಭ ಶೇಕಡ 69ರಷ್ಟು ಕುಸಿತ
ಮೂರನೇ ತ್ರೈಮಾಸಿಕದಲ್ಲಿ ನೋಕಿಯಾ ಸಂಸ್ಥೆಯ ಲಾಭವು 133 ಮಿಲಿಯನ್ ಯುರೋಗಳಿಗೆ ತಲುಪಿದೆ ಎಂದು ಸಂಸ್ಥೆಯ ವರದಿ ಹೇಳಿದೆ. ಈ ಲಾಭವನ್ನು ನಾವು ಒಂದು ವರ್ಷದ ಹಿಂದೆ ಸಂಸ್ಥೆ ಗಳಿಸಿದ ಲಾಭಕ್ಕೆ ಹೋಲಿಕೆ ಮಾಡಿದಾಗ ಸುಮಾರು ಶೇಕಡ 69 ರಷ್ಟು ಕುಸಿತ ಕಾಣಬಹುದಾಗಿದೆ.
"ಗಳಿಕೆಯು ನಿರೀಕ್ಷೆಗಿಂತ ಹೆಚ್ಚು ಕುಸಿತವಾಗಿದೆ. ನಮ್ಮ ದೃಷ್ಟಿಕೋನ ಅಧಿಕ ಅನಿಶ್ಚಿತವಾಗಿದೆ. ನೋಕಿಯಾಗೆ ಅಲ್ಪಾವಧಿಯಲ್ಲಿ ಇದು ಉತ್ತಮ ಬೆಳವಣಿಗೆಯಂತೆ ಕಾಣುತ್ತಿಲ್ಲ," ಎಂದು ಇಕ್ವಿಟಿ ವಿಶ್ಲೇಷಣಾ ಸಂಸ್ಥೆ ಇಂಡೆರೆಸ್‌ನ ವಿಶ್ಲೇಷಕ ಅಟ್ಟೆ ರಿಕೊಲಾ ಎಎಫ್‌ಪಿಗೆ ತಿಳಿಸಿದರು.
ಮೂರನೇ ತ್ರೈಮಾಸಿಕದಲ್ಲಿ ಸ್ಥಿತಿ ಅನಿಶ್ಚಿತವಾಗಿದ್ದರೂ ಕೂಡಾ ನೋಕಿಯಾ, "ನಾಲ್ಕನೇ ತ್ರೈಮಾಸಿಕದಲ್ಲಿ ನಮ್ಮ ನೆಟ್‌ವರ್ಕ್ ವ್ಯವಹಾರಗಳಲ್ಲಿ ಸುಧಾರಣೆಯನ್ನು ನಿರೀಕ್ಷಿಸುತ್ತದೆ," ಎಂದು ಹೇಳಿದೆ. ಆದರೆ ನೋಕಿಯಾದ ಅಂದಾಜು ಲಾಭವು ಕೂಡಾ ಕಡಿಮೆಯಾಗಿದೆ ಎಂಬುವುದು ಗಮನಾರ್ಹವಾಗಿದೆ.
5ಜಿ ಬೇಡಿಕೆ ಕುಸಿತ
ಸ್ವೀಡಿಷ್ ಪ್ರತಿಸ್ಪರ್ಧಿ ಎರಿಕ್ಸನ್ ಮತ್ತು ಚೀನಾದ ಹುವಾವೇ ಜೊತೆಗಿನ 5ಜಿ ನೆಟ್‌ವರ್ಕ್‌ಗಳ ಸ್ಪರ್ಧೆಯಲ್ಲಿ ಸಿಲುಕಿರುವ ನೋಕಿಯಾದ ಮಾರಾಟವು 2023 ರ ಮೂರನೇ ತ್ರೈಮಾಸಿಕದಲ್ಲಿ ಶೇಕಡ 20 ರಷ್ಟು ಇಳಿಕೆಯಾಗಿ, 4.98 ಬಿಲಿಯನ್ ಯುರೋಗಳಿಗೆ ತಲುಪಿದೆ.


Click it and Unblock the Notifications