ಚೀನಾದಿಂದ ಹೊರಬರುವ ಕಂಪೆನಿಗಳನ್ನು ಸೆಳೆಯುವ ಉದ್ದೇಶದಿಂದ ಭಾರತವು ಸಿದ್ಧವಾಗುತ್ತಿದೆ. ಸ್ಯಾಮ್ಸಂಗ್ ನಿಂದ ಆಪಲ್ ತನಕ ಆ ಕಂಪೆನಿ ಬಿಡಿ ಭಾಗಗಳ ಜೋಡಣೆ ಮಾಡುವ ಕಂಪೆನಿಗಳ ತನಕ ಯಾವ್ಯಾವು ಚೀನಾದಲ್ಲಿ ಇವೆಯೋ ಅವುಗಳು ಭಾರತದಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ತೋರುತ್ತಿದ್ದು, ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಗೆ ಕೇಂದ್ರ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಮಾರ್ಚ್ ನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದಕ ಕಂಪೆನಿಗಳಿಗೆ ಪ್ರೋತ್ಸಾಹ ಯೋಜನೆಗಳನ್ನು ಘೋಷಿಸಿದೆ. ಆ ಕಾರಣಕ್ಕೆ ಇಪ್ಪತ್ತಕ್ಕೂ ಹೆಚ್ಚು ಕಂಪೆನಿಗಳು ದೇಶದಲ್ಲಿ 150 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಭರವಸೆ ನೀಡಿವೆ. ಮೊಬೈಲ್ ಫೋನ್ ಉತ್ಪಾದನೆ, ಜೋಡಣೆ ಕಾರ್ಖಾನೆಗಳನ್ನು ದೇಶದಲ್ಲಿ ಶುರು ಮಾಡಲು ಮುಂದಾಗಿವೆ.
ಭಾರತದಲ್ಲಿ ಮಳಿಗೆ ತೆಗೆಯುವುದು ಅಗ್ಗ
ಸ್ಯಾಮ್ಸಂಗ್ ಹೊರತುಪಡಿಸಿ, ಫಾಕ್ಸ್ ಕಾನ್, ವಿಸ್ಟ್ರಾನ್ ಕಾರ್ಪೊರೇಷನ್, ಪೆಗಟ್ರಾನ್ ಕಾಪ್ರೊರೇಷನ್ ಕೂಡ ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದು, ಫಾರ್ಮಾಸ್ಯುಟಿಕಲ್ ಉದ್ಯಮಕ್ಕೆ ಯಾವ ರೀತಿಯ ಪ್ರೋತ್ಸಾಹ ನೀಡಲಾಗುತ್ತದೆಯೋ ಅದೇ ರೀತಿಯಲ್ಲಿ ಆಟೋಮೊಬೈಲ್ಸ್, ಟೆಕ್ಸ್ ಟೈಲ್ಸ್ ಮತ್ತು ಆಹಾರ ಸಂಸ್ಕರಣಾ ಮತ್ತಿತರ ವಲಯಗಳಿಗೂ ನೀಡಲು ಸರ್ಕಾರ ನಿರ್ಧರಿಸಿದೆ. ಸದ್ಯಕ್ಕೆ ಯು.ಎಸ್.- ಚೀನಾ ವಾಣಿಜ್ಯ ಸಮರ, ಕೊರೊನಾ ಬಿಕ್ಕಟ್ಟು ಇರುವುದರಿಂದ ಕಂಪೆನಿಗಳು ಈಗಲೇ ಪೂರೈಕೆ ಜಾಲದಲ್ಲಿ ಬದಲಾವಣೆ ಮಾಡಿಲ್ಲ. ಆ ಕಾರಣಕ್ಕೆ ಭಾರತಕ್ಕೆ ದೊಡ್ಡ ಲಾಭವಾಗಿ ಮಾರ್ಪಟ್ಟಿಲ್ಲ. ಆದರೆ ದೇಶದಲ್ಲಿ ಮಳಿಗೆ ತೆರೆಯುವುದು ಈ ಕಂಪೆನಿಗಳಿಗಂತೂ ಅಗ್ಗವಾಗಿರುವುದು ಸತ್ಯ.
ಹೂಡಿಕೆದಾರರಿಗೆ ಫೇವರಿಟ್ ವಿಯೆಟ್ನಾಂ
ಈಗಿನ ಸನ್ನಿವೇಶಕ್ಕೆ ಹೂಡಿಕೆದಾರ ಕಂಪೆನಿಗಳಿಗೆ ವಿಯೆಟ್ನಾಂ ನೆಚ್ಚಿನ ತಾಣವಾಗಿದೆ. ಆ ನಂತರ ಕಾಂಬೋಡಿಯಾ, ಮ್ಯಾನ್ಮಾರ್, ಬಾಂಗ್ಲಾದೇಶ್ ಹಾಗೂ ಥಾಯ್ಲೆಂಡ್ ನೆಚ್ಚಿನ ಸ್ಥಳಗಳಾಗಿವೆ ಎಂದು ಸ್ಟಾಂಡರ್ಡ್ ಚಾರ್ಟರ್ಡ್ ನಡೆಸಿದ ಸಮೀಕ್ಷೆಯಿಂದ ಗೊತ್ತಾಗಿದೆ. ಇನ್ನು ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ಸ್ ವಲಯವೊಂದಕ್ಕೆ ಘೋಷಿಸಿರುವ ಕಾರ್ಯಕ್ರಮಗಳಿಮ್ದ ಮುಂದಿನ ಐದು ವರ್ಷಗಳಲ್ಲಿ 15,300 ಕೋಟಿ ಮೌಲ್ಯದ ವಸ್ತುಗಳ ಉತ್ಪಾದನೆಗೆ ಕಾರಣ ಆಗಬಹುದು ಮತ್ತು ಪ್ರತ್ಯಕ್ಷ- ಪರೋಕ್ಷವಾಗಿ ಹತ್ತು ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಬಹುದು ಎಂಬ ನಿರೀಕ್ಷೆ ಇದೆ.
ಮುಂದಿನ ಐದು ವರ್ಷಗಳಲ್ಲಿ 5,500 ಕೋಟಿ ಡಾಲರ್ ಹೂಡಿಕೆ
ತಜ್ಞರು ಅಭಿಪ್ರಾಯ ಪಡುವ ಪ್ರಕಾರ, ಇದರಿಂದ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ ಹೂಡಿಕೆ 5,500 ಕೋಟಿ ಅಮೆರಿಕನ್ ಡಾಲರ್ ಹರಿದು ಬರಲಿದೆ. ಭಾರತ ಆರ್ಥಿಕ ಉತ್ಪಾದನೆಗೆ 0.5% ಸೇರ್ಪಡೆ ಆಗಲಿದೆ. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಸ್ಮಾರ್ಟ್ ಫೋನ್ ಉತ್ಪಾದನೆಯ ಶೇಕಡಾ ಹತ್ತರಷ್ಟು ಭಾರತದಲ್ಲೇ ಆಗಲಿದೆ. ಇವುಗಳ ಪೈಕಿ ಬಹುತೇಕ ಚೀನಾದಲ್ಲೇ ಇದ್ದವು.
ಏಷ್ಯಾದಲ್ಲೇ ಅತ್ಯಂತ ಕನಿಷ್ಠ ಮಟ್ಟದ ತೆರಿಗೆ
ಈಗ ಇರುವ ಮೇಕ್ ಇನ್ ಇಂಡಿಯಾ ಗುರಿಯಾದ 15%ನಿಂದ 25%ಗೆ ಏರಿಕೆ ಆಗಲಿದೆ. ಈಗಾಗಲೇ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಕಂಪೆನಿಗಳಿಗೆ ಹಾಕುತ್ತಿರುವ ತೆರಿಗೆ ಏಷ್ಯಾದಲ್ಲೇ ಕನಿಷ್ಠ ಮಟ್ಟದ್ದಾಗಿದೆ. ಕಳೆದ ನಾಲ್ಕು ದಶಕದಲ್ಲೇ ಇದೇ ಮೊದಲ ಬಾರಿಗೆ ಆರ್ಥಿಕತೆ ಕುಗ್ಗಬಹುದು ಎಂಬ ಅಂದಾಜಿನಲ್ಲಿ, ಹೂಡಿಕೆ ಸೆಳೆಯಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ.


Click it and Unblock the Notifications