ಈಗಿನ ತಲೆಮಾರಿಗೆ ಭವಿಷ್ಯದ ಗುರಿಗಳು, ವೃತ್ತಿ ಜೀವನದ ಒತ್ತಡಗಳು ಇದೆಲ್ಲದರ ಮಧ್ಯೆ ವಿದೇಶದಲ್ಲಿ ನೆಲೆಸುವ ಆಸೆ ಹೆಚ್ಚಾಗಿಯೇ ಕಂಡುಬರುತ್ತಿದೆ. ವಿದೇಶಕ್ಕೆ ಹೋಗಿ ದುಡಿಬೇಕು, ಅಲ್ಲೇ ಸೆಟಲ್ ಆಗಬೇಕು ಅನ್ನೋದು ಎಷ್ಟೋ ಜನರ ಆಸೆ. ಅಂಥದ್ದೇ ಆಸೆಯನ್ನು ಇಟ್ಟುಕೊಂಡು ಸುಮಾರು 15 ವರ್ಷಗಳಿಂದ ವಾಸಿಸ್ತಿರೋ, ಭಾರತದ ಮೂಲದ NRI ದಂಪತಿ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಅದೇನೆಂದರೆ ಭಾರತಕ್ಕೆ ಮರಳೋದು..

ಯಶಸ್ಸೇನೋ ಇದೆ..ಆದ್ರೆ..
ಅಮೆರಿಕನ್ ಟೆಕ್ ಉದ್ಯಮದಲ್ಲಿ ಯಶಸ್ಸು ಕಂಡು, 5.5 ಮಿಲಿಯನ್ ಡಾಲರ್ (ಸುಮಾರು ₹45 ಕೋಟಿ) ನಿವ್ವಳ ಆಸ್ತಿಯನ್ನು ಸಂಪಾದಿಸಿರುವ ಈ ದಂಪತಿ, ಈಗ ತಮ್ಮ ಜೀವನ ಶೈಲಿಯನ್ನು ಮರುಪರಿಶೀಲಿಸುತ್ತಿದ್ದಾರೆ. ಉದ್ಯೋಗದಲ್ಲಿ ಬದಲಾವಣೆಗಾಗಿ ಅಲ್ಲ, ಬದಲಾಗಿ ನೆಮ್ಮದಿ, ಕುಟುಂಬದೊಂದಿಗೆ ಸಮಯ ಕಳೆಯುವ ಶಾಂತ ಜೀವನಕ್ಕಾಗಿ ಭಾರತಕ್ಕೆ ಮರಳುವ ಯೋಚನೆ ಮಾಡುತ್ತಿದ್ದಾರೆ.
ವಿದೇಶದಲ್ಲಿ ನೆಮ್ಮದಿ ಇಲ್ಲ:
ಹೌದು, ಅವರು Redditನ "Return to India" ಉಪಸಮುದಾಯದಲ್ಲಿ ತಮ್ಮ ಯೋಚನೆ ಹಂಚಿಕೊಂಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಅಂದ್ರೆ ತಾವೇ ಆಯ್ಕೆ ಮಾಡಿಕೊಂಡಿರುವ ಜೀವನಶೈಲಿ, ಕೆಲಸದಲ್ಲಿ ಉತ್ತಮ ಸಂಬಳ ಇದೆ. ಒಳ್ಳೆ ಆದಾಯವಿದೆ. ಆದರೆ ತೃಪ್ತಿ ಎನ್ನುವುದೇ ಇಲ್ಲ. $3.6 ಮಿಲಿಯನ್ ಹೂಡಿಕೆಗಳು ಮತ್ತು $1.9 ಮಿಲಿಯನ್ ಮೌಲ್ಯದ ಆಸ್ತಿಗಳೊಂದಿಗೆ ಅವರು ಆರ್ಥಿಕವಾಗಿ ಬಹಳ ಸ್ಥಿರವಾಗಿ ಇದ್ದರೂ, ಸುದೀರ್ಘ ಚಿಂತನೆಯ ಬಳಿಕವೇ ನಿರ್ಧಾರ ಕೈಗೊಳ್ಳಲಿದ್ದಾರೆ.
ಮಗಳೊಂದಿಗೆ ಹೆಚ್ಚು ಸಮಯ ಕಳೆಯಲು ಇಚ್ಛೆ:
ಜೀವನದಲ್ಲಿ ನಿಜವಾದ ಶ್ರೇಷ್ಠತೆ ಪಡಿಸಲು ಅವರ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಿದೆ. ತಮ್ಮ ಮಕ್ಕಳಿಗೆ ಉತ್ತಮವಾದ ಮೌಲ್ಯಗಳನ್ನು ನೀಡುವ ನಿರ್ಧಾರ ಅವರ ಮುಂದಿನ ಹಾದಿಗೆ ದಿಕ್ಕು ನೀಡುತ್ತಿದೆ. ಹಿಂದೆ ಸರಿಯುವ ತ್ವರಿತ ನಿರ್ಧಾರವಲ್ಲ ಇದು. ಬದಲಾಗಿ, ಒಂದು ಪ್ರಜ್ಞಾಪೂರ್ವಕ ಆಯ್ಕೆ..ಸಂಪಾದನೆಯ ಪಥವನ್ನು ನಿಧಾನಗತಿಯಲ್ಲಿ ಬಿಡುವುದು, ನೆಮ್ಮದಿಯ ಬದುಕಿಗೆ ಹೆಜ್ಜೆ ಹಾಕುವುದು. ಅವರು ತಮ್ಮ ಮಗಳೊಂದಿಗೆ ಹೆಚ್ಚು ಸಮಯ ಕಳೆಯಲು ಇಚ್ಛಿಸುತ್ತಿದ್ದಾರೆ. ತಮ್ಮ ಉತ್ಸಾಹಗಳಿಗೆ ತಕ್ಕ ಕೆಲಸವಿದ್ದರೆ ಮಾತ್ರ ಮುಂದುವರಿಸಲು ಯೋಜನೆ ಮಾಡಿದ್ದಾರೆ.
ಈ ಪೋಸ್ಟ್ ನಂತರ ವಿವಿಧ ಬಳಕೆದಾರರು ಆರ್ಥಿಕವಾಗಿ ಭದ್ರವಾಗಿ ಭಾರತದಲ್ಲಿ ನೆಲೆಸಲು ಬೇಕಾದ ಖರ್ಚುಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಾಂದ್ರಾ ಮುಂಬೈನಲ್ಲಿ ಜೀವನಕ್ಕೇ ತಿಂಗಳಿಗೆ ₹2 ಲಕ್ಷ ಬೇಕು, ಮನೆ ಬಾಡಿಗೆ ಮಾತ್ರ ₹1.25 ಲಕ್ಷ. ಶೀಘ್ರ ನಿವೃತ್ತಿಗೆ ವಾರ್ಷಿಕ ಖರ್ಚಿನ 33 ಪಟ್ಟು ಹೂಡಿಕೆ ಬೇಕು ಎಂಬ ಸೂತ್ರ. ಮೂರು ಅಥವಾ ನಾಲ್ಕು ಆಸ್ತಿಗಳನ್ನು ಖರೀದಿ ಮಾಡಿ, ಒಂದರಲ್ಲಿ ವಾಸಿಸಿ, ಉಳಿದವುಗಳಿಂದ ನಿಷ್ಕ್ರಿಯ ಆದಾಯ ಗಳಿಸಬಹುದು ಎಂಬ ಸಲಹೆಗಳು..ಯಾವಾಗಲೂ ಕಡಿಮೆಯೆನಿಸುತ್ತದೆ... ಅಂತ್ಯವಿಲ್ಲ! ಎಂಬ ನೈಜ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಈ ದಂಪತಿಗಳ ಕಥೆ ಯಾವುದೇ ತೀವ್ರ ಘೋಷಣೆ ಇಲ್ಲದೆ, ನಿಶ್ಶಬ್ದ ಬದಲಾವಣೆಯ ಕಥೆಯಾಗಿದೆ. ಇದು 'ಬ್ಯಾನ್ಕ್‌ನಲ್ಲಿ ಎಷ್ಟು ಹಣ ಇದೆ' ಎಂಬ ಬಗ್ಗೆ ಅಲ್ಲ..ಬದಲಾಗಿ ನಮ್ಮ ಜೀವನ ಹೇಗಿರಬೇಕು? ಎಂಬ ಗಂಭೀರ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇದಾಗಿದೆ.


Click it and Unblock the Notifications