ಆರ್‌ಬಿಐ ರೆಪೋ ದರ ಏರಿಕೆ ಮಾಡಿದ ಒಂದು ದಿನದ ನಂತರ ಷೇರು ಮಾರುಕಟ್ಟೆಯು ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ರೆಪೋ ದರ ಏರಿಕೆ ಮಾಡಿದ ಹಿನ್ನೆಲೆಯಿಂದಾಗಿ ವಾಲ್‌ಸ್ಟ್ರೀಟ್‌ನಲ್ಲಿ ದುರ್ಬಲ ವಹಿವಾಟು ನಡೆಸಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲೂ ಕುಸಿತ ಕಂಡಿದೆ.
ಜೂನ್ 8ರಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಮತ್ತೆ ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಿದ್ದು, ಸಾಲದ ದರ ಶೇಕಡ 4.90ಕ್ಕೆ ತಲುಪಿದೆ. ಈ ನಡುವೆ ಸಹಕಾರಿ ಬ್ಯಾಂಕ್‌ಗಳ ಗೃಹ ಸಾಲದ ಮಿತಿ ಹೆಚ್ಚಿಸಿದ ಹಿನ್ನೆಲೆಯಿಂದಾಗಿ ಷೇರು ಮಾರುಕಟ್ಟೆ ಕೊಂಚ ಜಿಗಿತ ಕಂಡಿತ್ತು. ಆದರೆ ಬಳಿಕ ವಹಿವಾಟಿನ ಅಂತ್ಯಕ್ಕೆ ನಿರೀಕ್ಷೆಯಂತೆ ನಷ್ಟ ಹೊಂದಿದೆ.
ಗುರುವಾರ ವಹಿವಾಟಿನ ಆರಂಭದಲ್ಲಿ ಬಿಎಸ್‌ಇ ಸೆನ್ಸೆಕ್ಸ್ 373 ಪಾಯಿಂಟ್‌ಗಳು ಅಥವಾ ಶೇಕಡಾ 0.68 ರಷ್ಟು ಕುಸಿದು 54,520 ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಎನ್‌ಎಸ್‌ಇ ನಿಫ್ಟಿ 110 ಪಾಯಿಂಟ್ ಅಥವಾ 0.67 ರಷ್ಟು ಕುಸಿದು 16,247 ಕ್ಕೆ ವಹಿವಾಟು ಆರಂಭಿಸಿದೆ.

ನಿಫ್ಟಿ ಮಿಡ್‌ಕ್ಯಾಪ್ ಶೇಕಡ 0.25 ಮತ್ತು ಸ್ಮಾಲ್ ಕ್ಯಾಪ್ ಶೇಕಡ 0.13 ರಷ್ಟು ಇಳಿದಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 15 ಸೆಕ್ಟರ್ ಗೇಜ್‌ಗಳಲ್ಲಿ 11 ನಷ್ಟದೊಂದಿಗೆ ವಹಿವಾಟು ನಡೆಸುತ್ತಿದೆ. ನಿಫ್ಟಿ ಎಫ್‌ಎಂಸಿಜಿ, ನಿಫ್ಟಿ ಐಟಿ ಮತ್ತು ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಕ್ರಮವಾಗಿ ಶೇಕಡಾ 0.70, ಶೇಕಡಾ 0.75 ಮತ್ತು ಶೇಕಡಾ 0.61 ರಷ್ಟು ಪಾತಾಳಕ್ಕೆ ಇಳಿದಿದೆ.
ಏಷ್ಯನ್ ಪೇಂಟ್ಸ್ ನಿಫ್ಟಿಯಲ್ಲಿ ಟಾಪ್ ಲೂಸರ್!
ನಿಫ್ಟಿಯಲ್ಲಿ ಏಷ್ಯನ್ ಪೇಂಟ್ಸ್ ಟಾಪ್ ಲೂಸರ್ ಆಗಿದೆ. ಇದರ ಷೇರು ಶೇಕಡಾ 1.36ರಷ್ಟು ಕುಸಿದು, ರೂಪಾಯಿ 2,653.05 ಕ್ಕೆ ತಲುಪಿದೆ. ಈ ವೇಳೆಯೇ ಗ್ರಾಸಿಮ್, ಬ್ರಿಟಾನಿಯಾ, ಬಜಾಜ್ ಫೈನಾನ್ಸ್ ಮತ್ತು ಶ್ರೀ ಸಿಮೆಂಟ್ ಕೂಡಾ ಭಾರೀ ನಷ್ಟವನ್ನು ಕಂಡಿದೆ. 1,258 ಷೇರುಗಳು ಲಾಭವನ್ನು ಕಂಡಿದ್ದರೆ, ಬಿಎಸ್‌ಇಯಲ್ಲಿ 1,135 ಷೇರುಗಳು ಕುಸಿದಿದೆ.
ಬಿಎಸ್‌ಇ ಸೂಚ್ಯಂಕದಲ್ಲಿ, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ಪವರ್‌ಗ್ರಿಡ್, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ನೆಸ್ಲೆ ಇಂಡಿಯಾ, ಟೈಟಾನ್, ಎಸ್‌ಬಿಐ, ಎಲ್ & ಟಿ, ಟಿಸಿಎಸ್, ಎಚ್‌ಸಿಎಲ್ ಟೆಕ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಭಾರೀ ನಷ್ಟವನ್ನು ಅನುಭವಿಸಿದೆ. ಈ ನಡುವೆ ಡಾ ರೆಡ್ಡೀಸ್, ರಿಲಯನ್ಸ್ ಇಂಡಸ್ಟ್ರೀಸ್, ಸನ್ ಫಾರ್ಮಾ, ಮಾರುತಿ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಲಾಭ ಕಂಡಿದೆ.

ಎಲ್‌ಐಸಿ ಷೇರು ಸಾರ್ವಕಾಲಿಕ ಕುಸಿತ
ಈ ಮಧ್ಯೆ ಎಲ್‌ಐಸಿ ಷೇರು ನಿರಂತರವಾಗಿ ಭಾರೀ ಕೆಳಕ್ಕೆ ಇಳಿಯುತ್ತಿದೆ. ಗುರುವಾರ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಕುಸಿತ ಕಂಡಿದೆ. ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿ ಮೊದಲ ದಿನದ ಲೀಸ್ಟಿಂಗ್ ಸಂದರ್ಭದಲ್ಲೇ ಭಾರೀ ನಷ್ಟದೊಂದಿಗೆ ಷೇರು ಪೇಟೆಗೆ ಎಂಟ್ರಿ ಕೊಟ್ಟಿದೆ. ಆ ಬಳಿಕ ಒಂದೆರಡು ಸೆಷನ್ ಹೊರತುಪಡಿಸಿ ಮತ್ತೆಲ್ಲಾ ಸೆಷನ್‌ಗಳಲ್ಲಿ ಸಾರ್ವಕಾಲಿಕ ಕುಸಿತ ಕಾಣುತ್ತಿದೆ.
ಬುಧವಾರ ವಹಿವಾಟಿನ ಅಂತ್ಯದ ವೇಳೆಗೆ ಶೇಕಡ 1.98ರಷ್ಟು ಕುಸಿತ ಕಂಡು 738ರಲ್ಲಿ ಸ್ಥಿರವಾಗಿದೆ. ಗುರುವಾರ ವಹಿವಾಟಿನ ಆರಂಭದಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇಕಡಾ 1.94 ರಷ್ಟು ಕುಸಿದು ರೂಪಾಯಿ 723.70 ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ವಿತರಣೆ ಬೆಲೆ 949ರಿಂದ 723.70ಕ್ಕೆ ತಲುಪಿದೆ.


Click it and Unblock the Notifications