ಪಾಕಿಸ್ತಾನವು 2020ರ ಆರ್ಥಿಕ ವರ್ಷದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಹಣದುಬ್ಬರ ದರವನ್ನು ದಾಖಲಿಸಿದೆ. ನೀತಿ ನಿರೂಪಕರು ಬಡ್ಡಿ ದರವನ್ನು ಅನಿವಾರ್ಯವಾಗಿ ಏರಿಸುವ ಸ್ಥಿತಿ ಎದುರಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ (ಎಸ್ ಬಿಪಿ) ಭಾನುವಾರ ಹೇಳಿದೆ.
ಹಣದುಬ್ಬರ ಎಂಬುದು ಅರ್ಥಶಾಸ್ತ್ರದಲ್ಲಿ ಬಳಸುವಂಥ ಪದ. ಅಗತ್ಯ ವಸ್ತು ಹಾಗೂ ಸೇವೆಗಳ ಖರೀದಿ ದರ ಏರಿಕೆ ಆಗುವುದನ್ನು ಹಣದುಬ್ಬರ ಎನ್ನಲಾಗುತ್ತದೆ. ಇಂಥ ಸನ್ನಿವೇಶದಲ್ಲಿ ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆ ಆಗುತ್ತದೆ.
ಆ ದೇಶದ ಏಪ್ರಿಲ್ ಹಣದುಬ್ಬರ ದರದ ಬಗ್ಗೆ ಎಸ್ ಬಿಪಿ ಹೇಳಿರುವ ಪ್ರಕಾರ, ಅಭಿವೃದ್ಧಿ ಹೊಂದಿದ ಆರ್ಥಿಕತೆಗೆ ಮಾತ್ರವಲ್ಲ, ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಹೋಲಿಸಿದರೂ ಪಾಕಿಸ್ತಾನದ ಹಣದುಬ್ಬರ ದರವು ವಿಪರೀತ ಹೆಚ್ಚಾಗಿದೆ. ಈ ಮಾಹಿತಿಯನ್ನು 'ಡಾನ್' ಪತ್ರಿಕೆ ವರದಿ ಮಾಡಿದೆ.
ಈ ಆರ್ಥಿಕ ವರ್ಷದಲ್ಲಿ ಹಣದುಬ್ಬರ ದರ ಇಳಿಯಲಿ ಎಂಬ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಆಗ ಖಾಸಗಿಯವರು ಬ್ಯಾಂಕ್ ಗಳಿಂದ ಸಾಲ ಪಡೆಯುವುದನ್ನು ನಿಲ್ಲಿಸಿ, ವಸ್ತುಗಳು ಹಾಗೂ ಸೇವೆಗಳ ಬೆಲೆಯನ್ನೇ ಏರಿಕೆ ಮಾಡಿದ್ದಾರೆ.
12 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಹಣದುಬ್ಬರ
ಕಳೆದ ಜನವರಿಯಲ್ಲಿ ಹಣದುಬ್ಬರ ದರವು 12 ವರ್ಷದಲ್ಲೇ ಗರಿಷ್ಠ ಮಟ್ಟವಾದ 14.6 ಪರ್ಸೆಂಟ್ ತಲುಪಿತ್ತು. ಆ ಸಂದರ್ಭದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಬಡ್ಡಿ ದರವನ್ನು 13.25 ಪರ್ಸೆಂಟ್ ಗೆ ಏರಿಕೆ ಮಾಡಿತು. ಆದರೆ, ನಂತರದಲ್ಲಿ ಕೊರೊನಾ ವ್ಯಾಪಿಸಿದ್ದರಿಂದ ಆರ್ಥಿಕತೆ ಸನ್ನಿವೇಶವೇ ಬುಡಮೇಲಾಯಿತು. ಬೇಡಿಕೆಯಲ್ಲಿ ಕುಸಿತವಾದ್ದರಿಂದ ಹಣದುಬ್ಬರ ಇಳಿಕೆಯಾಯಿತು. ಮೂರೇ ತಿಂಗಳಲ್ಲಿ ಎಸ್ ಬಿಪಿ ಅನಿವಾರ್ಯವಾಗಿ ಬಡ್ಡಿ ದರವವನ್ನು 5.25 ಪರ್ಸೆಂಟ್ ಗೆ ಇಳಿಸಬೇಕಾಯಿತು.
ಮೂರು ಬಾರಿ ಪೆಟ್ರೋಲ್ ದರ ಇಳಿಕೆ
ಮೇ ತಿಂಗಳಲ್ಲಿ ಹಣದುಬ್ಬರ ದರವು 8.2 ಪರ್ಸೆಂಟ್ ಗೆ ಇಳಿದಿದೆ. ಆ ಹಿನ್ನೆಲೆಯಲ್ಲಿ ಎಸ್ ಬಿಪಿ ಬಡ್ಡಿ ದರವನ್ನು ಇಳಿಸಿದೆ ಎಂದು ಘೋಷಣೆ ಮಾಡಿತ್ತು. ಚೀನಾ, ಥಾಯ್ಲೆಂಡ್, ಭಾರತ, ಬಾಂಗ್ಲಾದೇಶ್, ಶ್ರೀಲಂಕಾದಂಥ ಮುಂದುವರಿಯುತ್ತಿರುವ ಆರ್ಥಿಕತೆಗಳಿಗೆ ಹೋಲಿಸಿದರೆ ಕೊರೊನಾದ ನಂತರ ಪಾಕಿಸ್ತಾನದಲ್ಲಿನ ಹಣದುಬ್ಬರ ಕಡಿಮೆ ಆಗಿದೆ. ಜುಲೈ- ಮೇ ಪ್ರಸಕ್ತ ಹಣಕಾಸು ವರ್ಷದ ಹಣದುಬ್ಬರವು ಈ ಹಿಂದೆ ಎಸ್ ಬಿಪಿ ಅಂದಾಜು ಮಾಡಿದ 11 ಪರ್ಸೆಂಟ್ ಬದಲಿದೆ 10.94 ಪರ್ಸೆಂಟ್ ಗೆ ಕುಸಿದಿದೆ. ಈ ಸಂಖ್ಯೆ ಜೂನ್ ನಲ್ಲಿ ಇನ್ನಷ್ಟು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿ ಪಾಕಿಸ್ತಾನ ಸರ್ಕಾರವು ಮೂರು ಬಾರಿ ಪೆಟ್ರೋಲ್ ದರವನ್ನು ಕಡಿಮೆ ಮಾಡಿದೆ. ಇದರಿಂದ ಉತ್ಪಾದನೆ ವೆಚ್ಚ, ಸಾರಿಗೆ- ಸರಕು ಸಾಗಣೆ ಕಡಿಮೆ ಆಗಿ, ಅಂತಿಮವಾಗಿ ಹಣದುಬ್ಬರ ಇಳಿಕೆಯಾಗಿದೆ.
ನಗದು ಪೂರೈಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ
ವ್ಯಾಪಾರ ಹಾಗೂ ಕೈಗಾರಿಕೆ ವಲಯಗಳು ಬಡ್ಡಿ ದರ ಇಳಿಕೆಗೆ ಆಗ್ರಹಿಸುತ್ತಿವೆ. ಇನ್ನು ಆರ್ಥಿಕತೆ ಚೇತರಿಸಿಕೊಳ್ಳಲು 3-4 ಲಕ್ಷ ಕೋಟಿ ರುಪಾಯಿ ಬೇಕಾಗುತ್ತದೆ. ಯಾವಾಗ ಆರ್ಥಿಕತೆ ತೀಕ್ಷ್ಣವಾಗಿ ಕುಸಿಯಿತೋ ಆದಾಯ ಸಂಗ್ರಹದಲ್ಲೂ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಈಗಿನ ಸ್ಥಿತಿಯಲ್ಲಿ ದೊಡ್ಡ ಮಟ್ಟದಲ್ಲಿ ನಗದು ಪೂರೈಸುವುದು ಅಸಾಧ್ಯ ಎಂಬಂತಾಗಿದೆ. ಸಾಮೂಹಿಕವಾಗಿ ಕೈಗಾರಿಕೆಗಳು ಮುಚ್ಚುವಂತೆ ಆಗಬಾರದು ಎಂಬ ಕಾರಣಕ್ಕೆ ಸಾವಿರಾರು ಕೋಟಿ ರುಪಾಯಿ ಸಾಲದ ಬಾಕಿ ಪಾವತಿಯನ್ನು ಮುಂದೂಡಿ, ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ವಿನಾಯಿತಿ ನೀಡಿದೆ. ಅಷ್ಟೇ ಅಲ್ಲ, ಸಾಲ ಮರುಪಾವತಿ ಸುಲಭವಾಗಿ ಮಾಡಿಕೊಟ್ಟಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ.


Click it and Unblock the Notifications